ಮಾಸ್ತಿ: ಮಾಲೂರು ಪಟ್ಟಣದಿಂದ ಮಾಸ್ತಿ ಮಾರ್ಗವಾಗಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಬೇರಿಕಿ ರಸ್ತೆ ಸಂಪೂರ್ಣ ಹಾಳಾ ಗಿದ್ದು, ವಾಹನ ಸವಾರರಿಗೆ ಇನ್ನಿಲ್ಲದ ತೊಂದರೆಯಾಗಿದೆ.
ಮಾಸ್ತಿ ಹೋಬಳಿ ಕತ್ತರಹಳ್ಳಿ ಕ್ರಾಸ್‌ನಿಂದ ಹಿಡಿದು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಗಡಿಯವರೆಗೂ ಸುಮಾರು 1 ಕಿ.ಮೀ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ.
ಇನ್ನಿಲ್ಲದ ತೊಂದರೆ:ಕಳೆದ ಸುಮಾರು 2 ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ ಮಾಸ್ತಿ ಸಮೀಪದ ಮಾಲೂರು ರಸ್ತೆ ಕತ್ತರಹಳ್ಳಿ ಕ್ರಾಸ್‌ನಿಂದ ಹಿಡಿದು ಕೆಸರಗೆರೆ ಸಮೀಪದ ವಾನಪ್ರಸ್ತ ಆಸ್ಪತ್ರೆವರೆಗೂ ಸುಮಾರು 4 ಕಿ.ಮೀ. ರಸ್ತೆಯನ್ನು ಅಗಲೀ ಕರಣಗೊಳಿಸಿ ಹಾಗೂ ಡಾಂಬರೀಕರಣ ಗೊಳಿಸುವ ಮೂಲಕ ತಮಿಳುನಾಡು ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಬೇರಿಕಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಅಲ್ಲಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಗಡಿಯವರೆಗೂ ಸುಮಾರು 1 ಕಿ.ಮೀ.ನಷ್ಟು ರಸ್ತೆ ಅಭಿವೃದ್ಧಿಪಡಿಸದೇ ಹಾಗೆ ಬಿಡಲಾಗಿದೆ. ಇದರಿಂದಾಗಿ ಪ್ರತಿನಿತ್ಯ ವಾಹನ ಸವಾರರು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ.
ಮಾಲೂರು ಪಟ್ಟಣದಿಂದ ಮಾಸ್ತಿ ಮಾರ್ಗವಾಗಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಪ್ರತಿನಿತ್ಯ ಬಸ್, ಲಾರಿ, ಕಾರು ಸೇರಿ ಭಾರೀ ಗಾತ್ರದ ವಾಹನ ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯಲ್ಲಿ ಮೊಣಕಾಲುದ್ದ ಹಳ್ಳಗಳು ಬಿದ್ದಿದ್ದು, ಜಲ್ಲಿ ಕಲ್ಲುಗಳು ಮೇಲೆದ್ದಿವೆ. ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ತಮ್ಮ ಪ್ರಾಣವನ್ನು ಅಂಗೈಲಿಟ್ಟುಕೊಂಡು ಸಂಚರಿಸಿದರೆ, ಬೈಕ್ ಸವಾರರು ಆತಂಕದಿಂದಲೇ ಚಾಲನೆ ಮಾಡುತ್ತಿದ್ದಾರೆ. ಇನ್ನು ಬೈಕ್ ಸವಾರರು ತಪ್ಪಿ ಬಿದ್ದು, ಗಾಯಗಳು ಮಾಡಿಕೊಂಡು ಆಸ್ಪತ್ರೆ ಸೇರಿರುವ ಉದಾಹರಣೆಗಳೂ ಇವೆ.
ದೂಳು- ಕೆಸರಿನ ಅಭಿಷೇಕ:ಬಸ್, ಲಾರಿ ಸೇರಿದಂತೆ ಭಾರೀ ಗಾತ್ರದ ವಾಹನಗಳು ಸಂಚರಿಸುವ ವೇಳೆ ಹಿಂಬದಿಯಿಂದ ಬರುವ ವಾಹನ ಸವಾರಿಗೆ ದೂಳಿನಾಭಿಷೇಕವಾ ಗುತ್ತದೆ. ಮಳೆ ಬಂದರೆ ಹಳ್ಳಗಳಿಲ್ಲಿ ನೀರು ತುಂಬಿಕೊಂಡು ಕೆಸರು ಗದ್ದೆಯಾಗಿ ಮಾರ್ಪ ಟ್ಟು ಸವಾರರಿಗೆ ಕೆಸರಿನಾಭಿಷೇಕವಾಗುತ್ತದೆ.
ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಇತ್ತ ಕಡೆ ಗಮನ ಹರಿಸಿ ಮಾಲೂರು ಪಟ್ಟಣದಿಂದ ಮಾಸ್ತಿ ಮಾರ್ಗವಾಗಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ವಾನಪ್ರಸ್ತ ಆಸ್ಪತ್ರೆಯಿಂದ ಹಿಡಿದು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಗಡಿಯವರೆಗೂ ಹಾಳಾಗಿರುವ ಸುಮಾರು 1 ಕಿ.ಮೀ.ನಷ್ಟು ರಸ್ತೆಯನ್ನು ಶೀಘ್ರ ಅಭಿವೃದ್ಧಿಪಡಿಸಬೇಕಿದೆ.
ಎಲ್ಲೆಲ್ಲಿಗೆ ಸಂಪರ್ಕ?:
ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ರಸ್ತೆಯಲ್ಲಿ ಮಾಲೂರು, ಮಾಸ್ತಿ ಮಾರ್ಗವಾಗಿ ತಮಿಳುನಾಡಿನ ಬೇರಿಕಿ, ಬಾಗಲೂರು, ಹೊಸೂರು ಹಾಗೂ ಸೂಳಿಗಿರಿ, ಕೃಷ್ಣಗಿರಿ ಕಡೆಗೆ ವಾಹನಗಳು ಸಂಚರಿಸುತ್ತವೆ. ಅಲ್ಲದೆ, ರಾಜ್ಯದ ಅತ್ತಿಬೆಲೆ, ಆನೇಕಲ್, ಬೆಂಗಳೂರಿಗೂ ಸಮೀಪವಾಗುವುದ ರಿಂದ ಈ ರಸ್ತೆಯಲ್ಲೇ ಹೆಚ್ಚಾಗಿ ವಾಹನಗಳು ಸಂಚರಿಸುತ್ತವೆ.
● ಎಂ.ಮೂರ್ತಿ