ಕೆಲವು ಸಿನಿಮಾಗಳ ಕಥಾವಸ್ತು ನೋಡುಗರನ್ನು ಚಿಂತನೆಗೆ ಹಚ್ಚುತ್ತವೆ, ಒಂದಷ್ಟು ಹೊತ್ತು ಆ ಸಿನಿಮಾ ತಲೆಯೊಳಗೆ ಸುತ್ತುತ್ತಲೇ ಇರುತ್ತದೆ. ಈ ವಾರ ತೆರೆಕಂಡಿರುವ “ಬೇರ’ ಕೂಡಾ ಇದೇ ಕೆಟಗರಿಗೆ ಸೇರುವ ಸಿನಿಮಾ.
ಒಂದು ಗಂಭೀರ ವಿಚಾರವನ್ನು ಆಯ್ಕೆ ಮಾಡಿ, ಅದನ್ನು ಅಷ್ಟೇ ಗಂಭೀರವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿನು ಬಳಂಜ. ಇವರಿಗಿದು ಚೊಚ್ಚಲ ಸಿನಿಮಾ. ಆದರೆ, ಚೊಚ್ಚಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದಾರೆ. ಕರಾವಳಿಯಲ್ಲಿ ಆಗಾಗ ಕೇಳಿಬರುವ ಕೋಮು ಸಂಘರ್ಷದ ಕಥೆಯನ್ನೇ ತಮ್ಮ ಸಿನಿಮಾದ ಕಥಾವಸ್ತುವನ್ನಾಗಿ ಆಯ್ಕೆ ಮಾಡಿದ್ದಾರೆ. ಅತಿ ಸೂಕ್ಷ್ಮವಾದ ವಿಷಯವನ್ನು ಯಾರಿಗೂ ನೋವಾಗದಂತೆ ಈ ಸಿನಿಮಾದಲ್ಲಿ ಹೇಳಲಾಗಿದೆ. ಈಗಾಗಲೇ ಧರ್ಮಗಳ ವಿಚಾರಗಳನ್ನು ಇಟ್ಟುಕೊಂಡು ಬಂದಿರುವ ಕೆಲವು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. ಅದೇ ರೀತಿ “ಬೇರ’ ಕೂಡಾ ಧರ್ಮ ಸಂಘರ್ಷ ಕಥೆಯನ್ನು ಹೊಂದಿದೆ.
ಇಡೀ ಸಿನಿಮಾ ನಡೆಯುವುದು ದಕ್ಷಿಣ ಕನ್ನಡದ ಕಲ್ಲಡ್ಕ ಎಂಬ ಪ್ರದೇಶದಲ್ಲಿ. ಸಲೀಂ ಹಾಗೂ ವಿಷ್ಣುವಿನ ಸ್ನೇಹವನ್ನು ಬಂಡವಾಳವನ್ನಾಗಿಸಿ, ಆ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚುಹಾಕುತ್ತಿರುವ ಎರಡು ಗುಂಪುಗಳ ನಡುವಿನ ಕಥೆಯನ್ನು “ಬೇರ’ ಹೊಂದಿದೆ. ಇಲ್ಲಿ ಧರ್ಮ ಸಂಘರ್ಷದಲ್ಲಿ ಸಿಲುಕಿದವರ ಪಾಡು, ಅಮಾಯಕರ ನೋವು, ಹೆತ್ತ ಕರುಳಿನ ಸಂಕಟ, ದೂರದಿಂದಲೇ ರಣಕೇಕೆ ಹಾಕುತ್ತಿರುವ ಗುಂಪು, ಇನ್ನೊಂದು ಕಡೆ ಪೊಲೀಸರ ಕೇಸ್ ಫೈಲ್ ಹಾಗೂ ಫೇಲ್ ಕಥೆಗಳು.. ಇಂತಹ ಹಲವು ಅಂಶಗಳ ಸುತ್ತ “ಬೇರ’ ಸುತ್ತುತ್ತದೆ. ನಿರ್ದೇಶಕರು ಮೂಲವಸ್ತುವಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಇಡೀ ಸಿನಿಮಾವನ್ನು ಗಂಭೀರವಾಗಿಯೇ ತೆಗೆದುಕೊಂಡು ಹೋಗಿದ್ದಾರೆ. ಅದೇ ಕಾರಣದಿಂದ ದೃಶ್ಯದಲ್ಲಿ ತೋರಿಸಲಾಗದ ಅನೇಕ ಅಂಶಗಳು ಮಾತುಗಳಾಗಿವೆ.
ಇದನ್ನೂ ಓದಿ:ಬುರ್ಖಾ ಧರಿಸಿ ಪರೀಕ್ಷೆ ಬರೆಯಲು ನಿರಾಕರಣೆ: ವಿವಾದಕ್ಕೆ ತುಪ್ಪ ಸುರಿದ ತೆಲಂಗಾಣ ಗೃಹ ಸಚಿವ
ಹಾಗಾಗಿ, ಸಿನಿಮಾದಲ್ಲಿ ಸಂಭಾಷಣೆಗೆ ಮಹತ್ವದ ಪಾತ್ರವಿದೆ. ಕೆಲವೊಮ್ಮೆ ಮಾತು ಹೆಚ್ಚಾಯಿತೆನೋ ಅನಿಸಿದರೂ, ಆಯಾ ಸನ್ನಿವೇಶಕ್ಕೆ ಅದು ಅನಿವಾರ್ಯ ಕೂಡಾ. ಇವತ್ತಿನ ಸಮಾಜದಲ್ಲಿ ನಡೆಯುತ್ತಿರುವ ಕೆಲವು ನೈಜ ಘಟನೆಗಳನ್ನು ಕೂಡಾ ಸಿನಿಮಾದಲ್ಲಿ ತೋರಿಸಲಾಗಿದೆ. ಆ ಮಟ್ಟಿಗೆ “ಬೇರ’ ಇವತ್ತಿಗೆ ಪ್ರಸ್ತುತ ಕಥಾನಕ.
ಚಿತ್ರದಲ್ಲಿ ದತ್ತಣ್ಣ, ಯಶ್ ಶೆಟ್ಟಿ, ಹರ್ಷಿಕಾ ಪೂಣಚ್ಚ, ಅಶ್ವಿನ್ ಹಾಸನ್, ಚಿತ್ಕಲ ಬಿರಾದಾರ್, ಮಂಜುನಾಥ್ ಹೆಗಡೆ, ಗುರು ಹೆಗಡೆ, ರಾಕೇಶ್ ಮಯ್ಯ, ಧವಳ್ ದೀಪಕ್ ಅನೇಕರು ನಟಿಸಿದ್ದಾರೆ. ಮುಖ್ಯವಾಗಿ ಯಶ್ ಶೆಟ್ಟಿ ಹಾಗೂ ರಾಕೇಶ್ ಮಯ್ಯ ಈ ಸಿನಿಮಾದ ಹೈಲೈಟ್. ಸಿನಿಮಾದ ಹಿನ್ನೆಲೆ ಸಂಗೀತ ಕಥೆಯ ವೇಗಕ್ಕೆ ಸಾಥ್ ನೀಡಿದೆ.
ರವಿಪ್ರಕಾಶ್ ರೈ