Advertisement

ನಾಮಫಲಕಕ್ಕೆ ಸೀಮಿತವಾದ ಬಿಇಒ ಕಚೇರಿ

12:55 PM Nov 22, 2020 | Suhan S |

ಕಡಬ, ನ. 21: ಕಡಬ ತಾಲೂಕು ಉದ್ಘಾಟನೆ ಗೊಂಡು 2 ವರ್ಷಗಳಾದರೂ ಸರಕಾರದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ಇನ್ನೂ ತೆರೆದುಕೊಂಡಿಲ್ಲ. ಆ ಪೈಕಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶಾಸಕರಿಂದಲೇ ಉದ್ಘಾಟನೆಯಾಗಿದ್ದರೂ ಕೂಡ ಕೇವಲ ನಾಮಫಲಕಕ್ಕೆ ಮಾತ್ರ ಸೀಮಿತವಾಗಿರುವುದು ವಿಪರ್ಯಾಸವೇ ಸರಿ.

Advertisement

ಪುತ್ತೂರಿನಿಂದ ಬೇರ್ಪಟ್ಟು ಕಡಬ ಕೇಂದ್ರಿತವಾಗಿ ಪ್ರತ್ಯೇಕ ಶೈಕ್ಷಣಿಕ ವಲಯವಾಗಬೇಕೆಂಬ ಬೇಡಿಕೆ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಈ ಕುರಿತು ಸರಕಾರಕ್ಕೆ ಒತ್ತಡ ಹೇರುತ್ತಲೇ ಬರಲಾಗಿತ್ತು.

ಕಡಬವು ನೂತನ ತಾಲೂಕಾಗಿ ರೂಪುಗೊಂಡಾಗ ಕಡಬಕ್ಕೆ ಪ್ರತ್ಯೇಕ ಶೈಕ್ಷಣಿಕ ವಲಯವಾಗಬೇಕೆಂಬ ಕೂಗಿಗೆ ಇನ್ನಷ್ಟು ಬಲ ಬಂದಿತ್ತು. ಅದಕ್ಕೆ ಪೂರಕವಾಗಿ ಕಡಬ ತಾಲೂಕು ಉದ್ಘಾಟನೆಯ ಸಂದರ್ಭದಲ್ಲಿ ಸಮಾರಂಭಕ್ಕೆ ಆಗಮಿಸಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು ಶಿಕ್ಷಣ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಕಡಬ ಸರಕಾರಿ ಮಾದರಿ ಶಾಲೆ ವಠಾರದಲ್ಲಿನ ಶಿಕ್ಷಣ ಇಲಾಖೆಗೆ ಸೇರಿದ ಕಟ್ಟಡದಲ್ಲಿ ಕಡಬ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಉದ್ಘಾಟಿಸಿದ್ದರು. ಕಚೇರಿಯ ನಾಮಫಲಕವನ್ನು ಕೂಡ ಅನಾವರಣಗೊಳಿಸಲಾಗಿತ್ತು. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉದ್ಘಾಟನೆಯಾಗಿರುವುದು ಬಿಟ್ಟರೆ ಇದುವರೆಗೆ ಅಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳು ನಡೆದಿಲ್ಲ. ಅಸಲಿಗೆ ಸರಕಾರದ ಮಟ್ಟದಲ್ಲಿ ಕಡಬ ತಾಲೂಕಿಗೆ ಪ್ರತ್ಯೇಕ ಶೈಕ್ಷಣಿಕ ವಲಯವೇ ರೂಪುಗೊಂಡಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಯಾವುದೇ ಹುದ್ದೆಗಳೂ ಮಂಜೂರಾಗಿಲ್ಲ.

42 ಗ್ರಾಮಗಳ ವ್ಯಾಪ್ತಿ :  ಪುತ್ತೂರು ತಾಲೂಕಿನ ಒಟ್ಟು 35 ಗ್ರಾಮಗಳಾದ ಕಡಬ, ಕೋಡಿಂಬಾಳ, ಬಂಟ್ರ, 102 ನೆಕ್ಕಿಲಾಡಿ, ಐತ್ತೂರು, ಬಿಳಿನೆಲೆ, ಕೊಂಬಾರು, ನೂಜಿಬಾಳ್ತಿಲ, ರೆಂಜಿಲಾಡಿ, ಕುಟ್ರಾಪ್ಪಾಡಿ, ಬಲ್ಯ, ಪೆರಾಬೆ, ಕುಂತೂರು, ಆಲಂಕಾರು, ರಾಮಕುಂಜ, ಹಳೆನೇರೆಂಕಿ, ಕೊçಲ, ದೋಳ್ಪಾಡಿ, ಕಾಣಿಯೂರು, ಚಾರ್ವಾಕ, ಬೆಳಂದೂರು, ಕಾçಮಣ, ಕುದ್ಮಾರು, ಸವಣೂರು, ಪುಣcಪ್ಪಾಡಿ, ಪಾಲ್ತಾಡಿ, ಕೊಣಾಜೆ, ಶಿರಿಬಾಗಿಲು, ಗೊಳಿತೊಟ್ಟು, ಕೊಣಾಲು, ಆಲಂತಾಯ, ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ ಹಾಗೂ ಸುಳ್ಯ ತಾಲೂಕಿನ 7 ಗ್ರಾಮಗಳಾದ ಏನೆಕಲ್‌, ಸುಬ್ರಹ್ಮಣ್ಯ, ಐನೆಕಿದು, ಬಳ್ಪ, ಕೇನ್ಯ, ಎಣ್ಮೂರು ಹಾಗೂ ಎಡಮಂಗಲ ಹೀಗೆ ಒಟ್ಟು 42 ಗ್ರಾಮಗಳು ನೂತನ ಕಡಬ ತಾಲೂಕಿಗೆ ಸೇರಿವೆ. ನೂತನ ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು 20 ಪ್ರೌಢಶಾಲೆಗಳು, 104 ಪ್ರಾಥಮಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿವೆೆ.

ಶಿಕ್ಷಣ ಸಚಿವರ ಜತೆ ಚರ್ಚೆ : ಪುತ್ತೂರು ಮತ್ತು ಸುಳ್ಯ ತಾಲೂಕುಗಳಿಂದ ಕಡಬ ತಾಲೂಕಿಗೆ ಸೇರ್ಪಡೆಯಾಗಿರುವ ಗ್ರಾಮಗಳನ್ನು ಸೇರಿಸಿ ಪ್ರತ್ಯೇಕ ಶೈಕ್ಷಣಿಕ ವಲಯ ರಚಿಸಲು ಸಂಬಂಧಿಸಿದ ಮಾಹಿತಿಗಳನ್ನೊಳಗೊಂಡ ವರದಿಯನ್ನು ಈಗಾಗಲೇ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ. ಕಡಬದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ತೆರೆಯುವ ನಿಟ್ಟಿನಲ್ಲಿ ಅನುದಾನ ಹಾಗೂ ಹುದ್ದೆಗಳನ್ನು ಮಂಜೂರು ಮಾಡುವ ಸಲುವಾಗಿ ಶಿಕ್ಷಣ ಸಚಿವರ ಜತೆ ಚರ್ಚಿಸಲಾಗಿದೆ. ಎಸ್‌.ಅಂಗಾರ, ಸುಳ್ಯ ಶಾಸಕರು

Advertisement

ವಿದ್ಯಾರ್ಥಿಗಳು, ಶಿಕ್ಷಕರಿಗೂ ಅನುಕೂಲ : ಕಡಬ ತಾಲೂಕನ್ನು ಪ್ರತ್ಯೇಕ ಶೈಕ್ಷಣಿಕ ವಲಯವನ್ನಾಗಿ ರೂಪಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ತೆರೆದರೆ ಆಡಳಿತಾತ್ಮಕವಾಗಿ ಬಹಳಷ್ಟು ಪ್ರಯೋಜನವಾಗಲಿದೆ. ತಾಲೂಕಿನ ವ್ಯಾಪ್ತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೂ ಅನುಕೂಲವಾಗಲಿದೆ. ರಾಮಕೃಷ್ಣ ಮಲ್ಲಾರ, ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

 

ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next