ಪುತ್ತೂರು: ಅವಿಭಜಿತ ಪುತ್ತೂರು ತಾಲೂಕಿನ ಶಾಲೆಗಳ ಕೇಂದ್ರ ಸ್ಥಾನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಟ್ಟಡವೇ ಬಿರುಕು ಬಿಟ್ಟಿದ್ದು ಮಳೆಗಾಲದಲ್ಲಿ ಆತಂಕ ಮೂಡಿಸಿದೆ.
ಕಟ್ಟಡ 1934ರಲ್ಲಿ ಬ್ರಿಟಿಷ್ ಕಾಲ ದಲ್ಲಿ ನಿರ್ಮಾಣವಾದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಕಟ್ಟಡದ ಗೋಡೆ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಅಪಾಯದ ಕರೆಗಂಟೆ ಬಾರಿಸುತ್ತಿದೆ. 5 ವರ್ಷಗಳ ಹಿಂದೆ ಈ ಕಟ್ಟಡದ ಪಕ್ಕದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದಾಗ ಅದಕ್ಕಾಗಿ ಪಾಯ ತೋಡುವ ಸಂದರ್ಭ ಕಚೇರಿ ಪಕ್ಕ ಕುಸಿತ ಉಂಟಾಗಿತ್ತು. ಬಳಿಕ ಭೂಕುಸಿತ ಸ್ಥಳದಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಯಿತು. ಪ್ರಸ್ತುತ 88 ವರ್ಷಗಳಷ್ಟು ಹಳೆಯದಾದ ಕಟ್ಟಡದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮುಕ್ತಿ ಸಿಗಬೇಕೆಂಬ ಕೂಗು ಹೆಚ್ಚಾಗಿದೆ.
ಅನುದಾನ ಇಲ್ಲ
ಹೊಸ ಬಿಇಒ ಕಚೇರಿ ಕಟ್ಟಡ ನಿರ್ಮಾಣ ಮಾಡುವ ಸಂಬಂಧ ಜಮೀನು ಪರಿಶೀಲನೆ ನಡೆದಿದೆ. ನಗರದ ನೆಲ್ಲಿಕಟ್ಟೆಯ ಶಾಲೆಯ ಜಮೀನಿನ ಪಕ್ಕದಲ್ಲೇ ಕಟ್ಟಡ ನಿರ್ಮಿಸಲು ಶಾಸಕರು ಸೇರಿದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾಗ ಪರಿಶೀಲಿಸಿದ್ದಾರೆ. ಅನುದಾನ ಮಂಜೂರಾಗಿಲ್ಲ
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹೊಸದಾಗಿ ನಿರ್ಮಿಸುವ ಉದ್ದೇಶದಿಂದ ಶಾಸಕ ಸಂಜೀವ ಮಠಂದೂರು ಅವರ ಮಾರ್ಗದರ್ಶನದಂತೆ ಸರಕಾರಕ್ಕೆ ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಲಭ್ಯ ಆದ ಬಳಿಕ ಕಟ್ಟಡ ನಿರ್ಮಾಣಗೊಳ್ಳಲಿದೆ.
– ಲೋಕೇಶ್ ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು