ಎಚ್.ಡಿ.ಕೋಟೆ: ಸಾರ್ವತ್ರಿಕ ಹಾಗೂ ಸ್ಥಳೀಯ ಚುನಾವಣೆ ಸನಿಹದಲ್ಲಿ ಸರ್ಕಾರಿ ಅಧಿಕಾರಿಗಳನ್ನು ಹಲವು ನಿಯಮನುಸಾರ ವರ್ಗಾವಣೆ ಪ್ರಕ್ರಿಯೆ ನಡೆಯುವುದು ಸರ್ವೆಸಾಮಾನ್ಯ, ಅದರೆ ಚುನಾವಣೆ ವೇಳೆ ವರ್ಗಾವಣೆಗೆ ಇರುವ ಯಾವ ಮಾನದಂಡವು ಅನ್ವಯವಾಗದಿದ್ದರೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸುಂದರ್ ಅವರನ್ನು ಕೇವಲ 6 ತಿಂಗಳ ಅವಧಿಯಲ್ಲಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಇವರ ಜಾಗಕ್ಕೆ ಈ ಮೊದಲು ತಾಲೂಕಿನಲ್ಲಿ 3 ವರ್ಷಗಳ ಕಾಲ ಬಿಇಒ ಆಗಿ ಕೆಲಸ ನಿರ್ವಹಿಸಿದ್ದ, ಹಾಗೂ ಕಳೆದ 2014 ರಲ್ಲಿ ತಾಲೂಕಿನಲ್ಲಿ ಬೆಳಕಿಗೆ ಬಂದ ಬಡ ಮಕ್ಕಳ ಸೈಕಲ್ ಹಗರಣದ ಪ್ರಕರಣದಲ್ಲಿ ಹೆಸರು ಕೇಳಿ ಬಂದು ಈಗಲೂ ತನಿಖೆ ಎದುರಿಸುತ್ತಿರುವ ಅಧಿಕಾರಿ ಮೈಮುನ್ನಿಸಾ ಬೇಗಂ ಅವರನ್ನು ಮತ್ತೆ ತಾಲೂಕಿಗೆ ಬಿಇಒ ಆಗಿ ನಿಯೋಜನೆ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.
ಮಾನದಂಡವಿಲ್ಲ: ಚುನಾವಣಾ ಪೂರ್ವ ಸರ್ಕಾರ ವರ್ಗಾವಣೆ ಮಾಡುವ ವೇಳೆ ವರ್ಗಾವಣೆ ಆಗುವ ಅಧಿಕಾರಿ ಒಂದೇ ಸ್ಥಳದಲ್ಲಿ 3 ವರ್ಷ ಪೂರೈಸಿರಬೇಕು. ಸ್ವಂತ ಸ್ಥಳದವರು ಅಥವಾ ಜಿಲ್ಲೆಯವರಾಗಿರಬೇಕು ಹಾಗೂ ಈ ಸ್ಥಳದಲ್ಲಿ ಈ ಮೊದಲು ಯಾವುದಾದರೂ ಚುನಾವಣೆಗೆ ಕೆಲಸ ನಿರ್ವಹಿಸಿರಬೇಕು ಈ ಮೇಲಿನ ಮೂರು ಮಾನದಂಡಗಳನ್ನು ಚಾಚು ತಪ್ಪದೆ ಪಾಲಿಸಬೇಕು.
ಅದರೆ ಈಗ ಎಚ್.ಡಿ.ಕೋಟೆ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ಎಸ್.ಸುಂದರ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಯವರು, ಇಲ್ಲಿಗೆ ನಿಯೋಜನೆಗೊಂಡು ಇಲ್ಲಿಗೆ ನಿಯೋಜನೆಗೊಂಡು ಕೇವಲ 6 ತಿಂಗಳು ಕಳೆದಿದೆ ಹಾಗೂ ಈ ಮೊದಲು ಇಲ್ಲಿ ಯಾವ ಚುನಾವಣೆಗಳಲ್ಲಿ ಇಲ್ಲಿ ಕಾರ್ಯನಿರ್ವಹಿಸಿಲ್ಲ, ಆದರೂ ಸರ್ಕಾರ ಯಾವ ಮಾನದಂಡಗಳನ್ನು ಪರಿಗಣಿಸದೆ ವರ್ಗಾವಣೆ ಮಾಡಿದೆ.
ತನಿಖೆ ಹಂತ: 2014ನೇ ಇಸವಿಯಿಂದ ತಾಲೂಕಿನಲ್ಲಿ ಮೂರು ವರ್ಷಗಳ ಕಾಲ ಬಿಇಒ ಆಗಿ ಕಾರ್ಯನಿರ್ವಹಿಸಿದ್ದ ಬೇಗಂ ಇವರ ಅವಧಿ ನಂತರ ಬೆಳಕಿಗೆ ಬಂದ ಬಡ ಮಕ್ಕಳ ಸೈಕಲ್ ಹಗರಣದ ಪ್ರಕರಣದಲ್ಲಿ ಇವರ ಹೆಸರು ಕೇಳಿ ಬಂದಿದ್ದು, ಪ್ರಕರಣ ತನಿಖಾ ಹಂತದಲ್ಲಿದೆ. ವರ್ಗಾವಣೆ ಸಂಬಂಧ ಈಗಾಗಲೇ ಬಿಇಒ ಎಸ್.ಸುಂದರ್ ಅವರು ವರ್ಗಾವಣೆಗೆ ತಡೆಯಾಜ್ಞೆ ಕೋರಿ (ಕೆಎಟಿ) ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯದ ಮೇಟ್ಟಿರಿದ್ದಾರೆ.
ಒಟ್ಟಾರೆ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಿಶೇಷ ತರಗತಿ, ವಿಶೇಷ ಕಾರ್ಯಾಗಾರ, ಜೊತೆಗೆ ವಿಶೇಷ ಸಂವಹನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೆಸರಾಗಿದ್ದ ಕ್ಷೇತ್ರ ಶಿಕ್ಷಣಾದಿಕಾರಿ ಎಸ್.ಸುಂದರ್ ಅವರ ವರ್ಗಾವಣೆಗೆ ಬಾರಿ ವಿರೋಧ ವ್ಯಕ್ತವಾಗಿದೆ.
ತಾಲೂಕಿನಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆ ಇದೆ, ಜೊತೆಗೆ ಕಳೆದ ನಾಲ್ಕು ತಿಂಗಳಿಂದ ಕಚೇರಿ ವಾಹನ ಕೆಟ್ಟಿದ್ದು, ಶಾಲೆಗಳ ತಪಾಸಣೆಗೆ ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ತೆರಳಲು ಕಷ್ಟವಾದರೂ ಮಕ್ಕಳ ಶೈಕ್ಷಣಿಕ ಪ್ರಗತಿ ದೃಷ್ಟಿಯಿಂದ ಹಾಗೂ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಮೊದಲ ಸ್ಥಾನ ತರಬೇಕೆಂದು ಶ್ರಮಿಸುತ್ತಿದ್ದೇನೆ, ಅದರೆ ಸರ್ಕಾರ ಚುನಾವಣಾ ವರ್ಗಾವಣೆ ಸಂಬಂಧ ಇರುವ ಯಾವ ಮಾನದಂಡವೂ ಅನ್ವಯವಾಗದ ನನ್ನನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
-ಎಸ್.ಸುಂದರ್, ಬಿಇಒ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಎಚ್.ಡಿ.ಕೋಟೆ.