ಬೆಂಗಳೂರು: ಮೊಬೈಲ್ ಫೋನ್ ಬಳಕೆದಾರರೇ ಅಪರಿಚಿತ ವ್ಯಕ್ತಿಗಳ ಸಂದೇಶ ಮತ್ತು ಮಿಸ್ಡ್ ಕಾಲ್ ಕೊಡುವವರ ಬಗ್ಗೆ ಎಚ್ಚರ! ಮಿಸ್ಡ್ ಕಾಲ್ ಹಾಗೂ ಸಂದೇಶ ಕಳುಹಿಸಿ ಯುವತಿಯನ್ನು ಪರಿಚಯಿಸಿಕೊಂಡು, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ವಂಚಕನೊಬ್ಬ ಕೇಂದ್ರ ವಿಭಾಗದ ಸೆನ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ವಿಜಯಪುರ ಜಿಲ್ಲೆಯ ಪ್ರಶಾಂತ್ (31) ಬಂಧಿತ. ಆರೋಪಿಯಿಂದಮೊಬೈಲ್ ಜಪ್ತಿ ಮಾಡಲಾಗಿದೆ. ಗುಟ್ಟಹಳ್ಳಿಯ 30 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ವಿಜಯಪುರದಲ್ಲಿ ಬಂಧಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿರುವ ಪ್ರಶಾಂತ, ವಿಜಯಪುರದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದು, ಜತೆಗೆ ಕೆಲ ಪರಿಚಯಸ್ಥ ಮಹಿಳೆಯರಿಗೆ ಬ್ಲ್ಯಾಕ್‌ಮೇಲ್ ಮಾಡುವುದನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾನೆ. ಈ ಮಧ್ಯೆ ಐದಾರು ತಿಂಗಳ ಹಿಂದೆ ಪ್ರಶಾಂತ್ ಸಂತ್ರಸ್ತೆಗೆ ಮಿಸ್ಡ್ಕಾಲ್ ಕೊಟ್ಟಿದ್ದಾನೆ. ಜತೆಗೆ “ಹಾಯ್, ಔ ಆರ್ ಯು’ ಎಂದೆಲ್ಲ ಸಂದೇಶವನ್ನು ಕಳುಹಿಸಿದ್ದಾನೆ. ಆ ಅಪರಿಚಿತ ನಂಬರ್‌ಗೆ ಸಂತ್ರಸ್ತೆ ಪ್ರತಿ ಕ್ರಿಯೆ ನೀಡಿದ್ದಾರೆ. ನಂತರ ಇಬ್ಬರು ನಿರಂತರವಾಗಿ ವಾಟ್ಸ್ ಆ್ಯಪ್, ಸಂದೇಶ ಹಾಗೂ ಕರೆಗಳ ಮೂಲಕ ಸಂಪರ್ಕದಲ್ಲಿದ್ದರು. ಅನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಪ್ರಶಾಂತ್, ಮದುವೆಯಾಗುವುದಾಗಿ ನಂಬಿಸಿ ಆಕೆಗೆ ಜತೆ ಸಲುಗೆಯಿಂತ ಮಾತನಾಡಲು ಆರಂಭಿಸಿದ್ದಾನೆ. ಆತನ ಮಾತು ನಂಬಿದ ಸಂತ್ರಸ್ತೆ ಆತನ ಅಶ್ಲೀಲ ಸಂದೇಶ ಹಾಗೂ ವಿಡಿಯೋ ಕಾಲ್‌ಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ನಿರೀಕ್ಷೆ ಈಡೇರಿಸಲು ಹಿಂದೆ ಇರುವವರು ಪರ್ಮಿಷನ್ ಕೊಡ್ಬೇಕಲ್ವ: RSS ಗೆ ಕುಮಾರಸ್ವಾಮಿ ಟಾಂಗ್
ಸೆಲ್ಫಿ ವಿಡಿಯೋ ಮಾಡಿಸಿದ್ದ!: ಈ ಮಧ್ಯೆ ಆಕೆಗೆ, ‘ನಿನ್ನನ್ನು ಮದುವೆಯಾಗುತ್ತಿದ್ದೇನೆ. ಹೀಗಾಗಿ ತನ್ನೊಂದಿಗೆ ಎಲ್ಲ ರೀತಿಯಲ್ಲೂ ಸಹಕರಿಸಬೇಕು’ ಎಂದು ನಂಬಿಸಿದ್ದು, ಬೆತ್ತಲೆಯ ಸೆಲ್ಫಿ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸುವಂತೆ ದುಂಬಾಲು ಬಿದ್ದಿದ್ದಾನೆ. ಆತನ ಬೇಡಿಕೆಗೆ ಒಪ್ಪಿದ ಸಂತ್ರಸ್ತೆ, ತನ್ನ ಬೆತ್ತಲೆ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಿದ್ದಾರೆ. ಅದನ್ನೇ ಬಂಡವಾಳ ಮಾಡಿಕೊಂಡು ಆರೋಪಿ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ ಎಂದು ಸೆನ್ ಠಾಣೆ ಪೊಲೀಸರು ಮಾಹಿತಿ ನೀಡಿದರು.
ಹಣಕ್ಕೆ ಬೇಡಿಕೆ: ಸಂತ್ರಸ್ತೆಯ ಬೆತ್ತಲೆ ಫೋಟೋ ಮತ್ತು ವಿಡಿಯೋಗಳು ತನ್ನ ಮೊಬೈಲ್‌ಗೆ ಬರುತ್ತಿದ್ದಂತೆ ಆರೋಪಿ, ಆಕೆಗೆ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ. ತಾನೂ ಕೇಳಿದಾಗ ಹಣ ಕೊಡಬೇಕು. ಇಲ್ಲವಾದರೆ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ. ಈ ಮಧ್ಯೆ ಆಕೆಯ ಫೇಸ್‌ಬುಕ್‌ನ ಪಾಸ್‌ವರ್ಡ್ ಮತ್ತು ಯುಸರ್ ನೇಮ್ ಪಡೆದುಕೊಂಡು, ಅದಕ್ಕೆ ಆಕೆಯ ಅಶ್ಲೀಲ ವಿಡಿಯೋ ಅಪ್‌ಲೋಡ್ ಮಾಡಿ, ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಅದರಿಂದ ಹೆದರಿದ ಸಂತ್ರಸ್ತೆ ಮೊದಲಿಗೆ ಆರೇಳು ಸಾವಿರ ರೂ. ವರ್ಗಾವಣೆ ಮಾಡಿದ್ದಾರೆ. ಹೀಗಾಗಿ ಆತ ಅದನ್ನು ಡೆಲೀಟ್ ಮಾಡಿದ್ದ. ನಂತರ ಹಂತ-ಹಂತವಾಗಿ ಆಕೆಯಿಂದ ಸುಮಾರು 50 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಮತ್ತೂಮ್ಮೆ ಆರೋಪಿ ಹಣಕ್ಕೆ ಬೇಡಿಕೆ ಇಟ್ಟಾಗ ಸಂತ್ರಸ್ತೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ವಿಜಯಪುರದಲ್ಲಿ ಬಂಧಿಸಲಾಗಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.
ವಂಚನೆಗೊಳಗಾದವರು ದೂರು ನೀಡಬಹುದು
ಆರೋಪಿ ಪ್ರಶಾಂತ್ ವಿಚಾರಣೆ ವೇಳೆ, ಫೇಸ್‌ಬುಕ್‌ನಲ್ಲಿ ಮಹಿಳೆಯರ ಮೊಬೈಲ್ ನಂಬರ್ ಸಂಗ್ರಹಿಸುತ್ತಿದ್ದ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿಯೇ ಕೆಲವೊಂದು ಮೊಬೈಲ್ ಬರ್‌ಗಳನ್ನು ಜೋಡಿಸಿ, ಕರೆ ಮತ್ತು ಸಂದೇಶ ಕಳುಹಿಸುತ್ತಿದ್ದ. ಒಂದು ವೇಳೆ ಅದಕ್ಕೆ ಪ್ರತಿಕ್ರಿಯೆ ನೀಡಿ, ಮಹಿಳೆ ಎಂಬುದು ಖಾತ್ರಿಯಾಗುತ್ತಿದ್ದಂತೆ ಚಾಟಿಂಗ್ ಮುಂದುವರಿಸುತ್ತಿದ್ದ. ಪುರುಷರಾದರೆ ಕ್ಷಮಿಸಿ ಎಂದು ಸಂಪರ್ಕ ಸ್ಥಗಿತಗೊಳಿಸುತ್ತಿದ್ದ ಎಂಬುದು ಗೊತ್ತಾಗಿದೆ. ಈತನಿಂದ ವಂಚನೆಗೊಳಗಾದವರು ದೂರು ನೀಡಬಹುದು ಎಂದು ಸೆನ್ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಹಿಂದೆಯೂ ಬಂಧನ
ಮಿಸ್ಡ್ಕಾಲ್ ಮತ್ತು ಸಂದೇಶ ಕಳುಹಿಸಿ ಪರಿಚಯವಾದ ಮಹಿಳೆಯರಿಂದ ಅಶ್ಲೀಲ ಫೋಟೋ ಮತ್ತು ವಿಡಿಯೋ ತರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪ್ರಕರಣ ಸಂಬಂಧ ಆರೋಪಿ ಪ್ರಶಾಂತ್‌ನನ್ನು ಈ ಹಿಂದೆಯೂ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಕಳೆದ ವರ್ಷ ಹಾಸನ ಮತ್ತು ಹೊಳೆನರಸೀಪುರ ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.