Advertisement

ರಾತ್ರಿಯಾಗುತ್ತಿದ್ದಂತೆ ಲೈಟ್‌ ಆಫ್ ಮಾಡಿ ಕಾಲ ಕಳೆಯುತ್ತಿದ್ದ ರಾಜಧಾನಿ ಮಂದಿ

12:26 PM Dec 13, 2021 | Team Udayavani |

1971ರ ಭಾರತ- ಪಾಕ್‌ ಯುದ್ಧದ ತಾಪ ಕೇವಲ, ಬಾಂಗ್ಲಾ ನೆಲಕ್ಕಷ್ಟೇ ಸೀಮಿತವಾಗಿರಲಿಲ್ಲ. ಬಾಂಗ್ಲಾ ಗಡಿಯಿಂದ ಬಲು ದೂರದಲ್ಲಿರುವ ಬೆಂಗಳೂರಿನಲ್ಲೂ ಈ ಯುದ್ಧದ ಕಾರ್ಮೋಡ ಕವಿದಿತ್ತು. ನಮ್ಮ ವಿಮಾನಗಳು ಶತ್ರು ನೆಲೆಯ ಮೇಲೆ ಧೀರೋದಾತ್ತವಾಗಿ ದಾಳಿ ಮಾಡಿದ ಸುದ್ದಿಗಳನ್ನು ಬಾನುಲಿಯ ಮೂಲಕ ಕೇಳುತ್ತಿದ್ದೆವು. ಆ ಸಂದರ್ಭದಲ್ಲಿ ಬಾನುಲಿಯಲ್ಲಿ ಇಡೀ ದಿನ ದೇಶಭಕ್ತಿಗೀತೆಗಳೇ ಅನುರಣಿಸುತ್ತಿದ್ದವು.

Advertisement

ಇಂದಿನಂತೆ ಅಂದು ಕೂಡ ಬೆಂಗಳೂರು ನಗರವು ದೇಶದ ರಕ್ಷಣಾ ವ್ಯವಸ್ಥೆಯ ಮತ್ತು ವಾಣಿಜ್ಯ ವಹಿವಾಟಿನ ಬೆನ್ನೆಲುಬಾಗಿತ್ತು. ರಕ್ಷಣಾ ಕ್ಷೇತ್ರದ ಅಗತ್ಯಗಳ ಪೂರೈಕೆದಾರರಾಗಿದ್ದ ಎಚ್‌ಎಎಲ್, ಬಿಇಎಲ್, ಐಟಿಐ ಮುಂತಾದ ಉದ್ದಿಮೆಗಳ ಕಾರ್ಮಿಕರು ಹೆಚ್ಚುವರಿ ಅವಧಿ ಕೆಲಸ ಮಾಡುತ್ತಾ ದೇಶಕ್ಕಾಗಿ ದುಡಿಯುತ್ತಿದ್ದರು. ಹೀಗಿರುವಾಗ ಬೆಂಗಳೂರಿಗರಿಗೆ ಒಂದು ಆತಂಕಕಾರಿ ಸುದ್ದಿ ಸಿಡಿಲಿನಂತೆ ಬಂದೆರಗಿತು.

ಅದೇನೆಂದರೆ, “ರಕ್ಷಣಾ ರಂಗಕ್ಕೆ ಬಲ ನೀಡುತ್ತಿರುವ ಬೆಂಗಳೂರಿನ ಮೇಲೂ ಪಾಕಿಸ್ತಾನ ಬಾಂಬ್‌ ಹಾಕಲಿದೆ’ ಎಂಬ ಸುದ್ದಿ ಹಬ್ಬಿತ್ತು. ಆಗ ಪ್ರಯೋಗವಾಗಿದ್ದೇ ಬೆಂಗಳೂರು ಬ್ಲ್ಯಾಕ್‌ ಔಟ್. ರಾತ್ರಿ ಹೊತ್ತು ಕಾರ್ಖಾನೆಗಳ ಬೆಳಕು ಹೊರಸೂಸದ ಹಾಗೆ ಕಿಟಕಿಗಳು ಮತ್ತು ಚಾವಣಿಯ ಗಾಜುಗಳನ್ನು ಟಾರುಕಾಗದಗಳಿಂದ ಮುಚ್ಚಲಾಯಿತು. ವಾಹನ ರಾತ್ರಿಸಂಚಾರ ನಿರ್ಬಂಧಿಸಲಾಯಿತು. ಕಾರ್ಖಾನೆಯ ಬಸ್ಸುಗಳ ದೀಪಗಳನ್ನು ರಟ್ಟಿನ ಕಾಗದದಿಂದ ಮುಚ್ಚಿ ರೂಪಾಯಿ ನಾಣ್ಯದಗಲದ ರಂಧ್ರದಲ್ಲಿ ಮಾತ್ರವೇ ಬೆಳಕು ಹೊರಡುವಂತೆ ಮಾಡಲಾಗಿತ್ತು.

ಇದನ್ನೂ ಓದಿ;- ಮತಾಂತರ ನಿಷೇಧ ಕಾಯಿದೆ ಹಿಂದೆ ದುರುದ್ದೇಶವಿದೆ: ಸಿದ್ದರಾಮಯ್ಯ ವಿರೋಧ

ಮನೆಗಳ ಕಿಟಕಿಗಾಜುಗಳನ್ನು ಕಾಗದದಿಂದ ಮುಚ್ಚುವಂತೆ ಸೂಚಿಸಲಾಯಿತು. ರಾತ್ರಿ 8 ಗಂಟೆ ಆಗುತ್ತಿ ದ್ದಂತೆಯೇ ಮಿಲಿಟರಿಯವರು ಜೋರಾಗಿ ಸೈರನ್‌ ಸದ್ದು ಮೊಳಗಿಸುತ್ತಿದ್ದರು. ಇದು ಕೇಳುತ್ತಿದ್ದಂತೆಯೇ, ಬೀದಿದೀಪ ಗಳನ್ನು ಆರಿಸಲಾಗುತ್ತಿತ್ತು. ನಾಗರಿಕರು ತಮ್ಮ ಮನೆಗಳಲ್ಲಿನ ಸೀಮೆಎಣ್ಣೆ ದೀಪಗಳನ್ನೂ ಸ್ವಯಂಪ್ರೇರಿತವಾಗಿ ಆರಿಸುತ್ತಿ ದ್ದರು. ರೇಡಿಯೋಗಳನ್ನು ಸ್ತಬ್ಧಗೊಳಿಸಿ ಜೋರಾಗಿ ಸೀನಿದರೂ ಶತ್ರುದೇಶಕ್ಕೆ ಗೊತ್ತಾಗಿಬಿಡುತ್ತ ದೇನೋ ಎಂಬಂತೆ ಆತಂಕದ ಮೌನಕ್ಕೆ ಶರಣಾಗುತ್ತಿದ್ದರು.

Advertisement

ಬೆಂಗಳೂರಿನ ಆಗಸದಲ್ಲಿ ವಿಮಾನ ಗಳ ಹಾರಾಟ ದಿನದಲ್ಲಿ ಆಗಾಗ್ಗೆ ಕಾಣಬಹುದಾಗಿತ್ತು. ಬೆಳಗ್ಗಿನ ಬಾನುಲಿ ಸುದ್ದಿಗೆ ಕಾತರದಿಂದ ಕಿವಿಗೊಡುತ್ತಿದ್ದ ಕೆಲವರು, “ಬೆಂಗಳೂರಿನ ಎಲ್ಲೂ ಬಾಂಬು ಬಿದ್ದಿಲ್ಲ’ ಎಂದು ಖಾತ್ರಿಯಾದ ಬಳಿಕವಷ್ಟೇ ನಿರಾಳರಾಗುತ್ತಿದ್ದರು. ಸುದೈವದಿಂದ ಯುದ್ಧವು ಹದಿಮೂರೇ ದಿನಗಳಲ್ಲಿ ಕೊನೆಗೊಂಡಿತು. ಇದಾಗಿ 50 ವರ್ಷ ಕಳೆದಿದ್ದರೂ, ಇಂದಿಗೂ ನಗರದ ಹಿರಿಯ ನಾಗರಿಕರ ಮನದಲ್ಲಿ ಬ್ಲ್ಯಾಕ್‌ ಔಟ್‌ ನೆನಪು ಮಾಸಿಲ್ಲ.

ಪಾಕ್‌ಗೆ ಭಯ ಹುಟ್ಟಿಸಿದ್ದ ಎಚ್‌ಎಫ್‌24-ಮಾರುತ್‌

1971 ಡಿಸೆಂಬರ್‌ 3, ಮೂರನೇ ಇಂಡೋ-ಪಾಕ್‌ ಯುದ್ಧಕ್ಕೆ ನಾಂದಿ ಎಂಬಂತೆ ಅಂದಿನ ಪಶ್ಚಿಮ ಪಾಕಿಸ್ತಾನವು ನಮ್ಮ ದೇಶದ ಒಂಬತ್ತು ವಾಯುನೆಲೆಗಳ ಮೇಲೆ ಏಕಾಏಕಿ ದಾಳಿ ನಡೆಸಿತು. ನಮ್ಮ ಯೋಧರೇನೂ ಸುಮ್ಮನೆ ಕೂಡಲಿಲ್ಲ. ಯುದ್ಧಸನ್ನದ್ಧರಾಗಿಯೇ ಇದ್ದ ಅವರು ಎಚ್‌ಎಎಲ್‌ ನಿರ್ಮಿತ ಹಿಂದೂಸ್ತಾನ್‌ ಫೈಟರ್‌ (ಎಚ್‌ಎಫ್‌24-ಮಾರುತ್‌) ವಿಮಾನಗಳ ಮೂಲಕ ಪ್ರತಿದಾಳಿ ನಡೆಸಿದರು.

ಸುಮಾರು ಎರಡು ವಾರಗಳ ಕಾಲ ನಡೆದ ಈ ಸೆಣಸಾಟದಲ್ಲಿ ಪೂರ್ವ ಪಾಕಿಸ್ತಾನದ 90,000 ಸೈನಿಕರ ಶರಣಾಗತಿಯೊಂದಿಗೆ ಸಮರದ ಕಾವು ತಣ್ಣಗಾಯಿತು ಹಾಗೂ ಬಾಂಗ್ಲಾದೇಶ ಎಂಬ ಗಣರಾಜ್ಯದ ಉದಯವೂ ಆಯಿತು. ಯುದ್ಧ ನಡೆಯುತ್ತಿದ್ದ ಆ ಹದಿನಾಲ್ಕು ರಾತ್ರಿಗಳೂ ಬೆಂಗಳೂರು ನಗರವು ಸಂಪೂರ್ಣ ಕತ್ತಲೆಯಲ್ಲಿ ಮುಳುಗಿತ್ತು. ಐವತ್ತು ವರ್ಷಗಳ ಹಿಂದೆ ನಡೆದ ಈ ಕಠೊರಾನುಭವ ಇಂದಿನ ಪೀಳಿಗೆಯ ಎಷ್ಟೋ ಮಂದಿಗೆ ತಿಳಿದಿರುವುದೇ ಇಲ್ಲ. ಅದೇನೇ ಇರಲಿ, ನಮ್ಮ ಬೆಂಗಳೂರಿನ ಎಚ್‌ಎಎಲ್‌ ಕೊಡುಗೆಯಾದ ಮಾರುತ್‌ ವಿಮಾನದ ಬಗ್ಗೆ ಹೇಳಲೇಬೇಕು.

1967ರಲ್ಲಿ ವಾಯುಪಡೆಗೆ ಸೇರ್ಪಡೆಯಾದ ಈ ವಿಮಾನವು ಶರವೇಗದಲ್ಲಿ ಮುನ್ನುಗ್ಗುತ್ತಾ ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಂತೂ ನಿಜ. 1961 ಜೂನ್‌ 17 ರಂದು ಎಚ್‌ಎಎಲ್‌ ವಾಯುನೆಲೆಯ ಮೇಲಿಂದ ಕಿವಿಗಡಚಿಕ್ಕುವ ಸದ್ದಿನೊಂದಿಗೆ ನಭಕ್ಕೇರಿದಾಗ ರಷ್ಯಾ ಹೊರತುಪಡಿಸಿ ಏಷ್ಯಾದಲ್ಲಿ ತಯಾರಾದ ಮೊದಲ ಯುದ್ಧವಿಮಾನ ಎಂಬ ದಾಖಲೆ ನಿರ್ಮಿಸಿತು. ಮೂಲತಃ ಫಾಲಂಡ್‌ ಎಂಬ ಯುಕೆ ನಿರ್ಮಿತ ಪ್ರಯಾಣಿಕ ವಿಮಾನದ ಪ್ರೇರಣೆಯಿಂದ ನಮ್ಮ ಯುದ್ಧವಿಮಾನವನ್ನು ವಿನ್ಯಾಸ ಮಾಡಲಾಯಿತು.

ಮೊದಲ ವಿನ್ಯಾಸದಲ್ಲೇ ಶಬ್ದಾತೀತ ವೇಗದಲ್ಲಿ ಮುನ್ನುಗ್ಗುತ್ತಿದ್ದಂತೆ ತಯಾರಿಸಲಾಯಿತಾದರೂ ಅದರ ಪೂರ್ಣಕ್ಷಮತೆ ಎಂದೂ ಬಳಕೆಯಾಗಲಿಲ್ಲ. ಆದರೂ ರಕ್ಕಸ ಗುಡುಗಿನ ಮೊರೆತದೊಂದಿಗೆ ದಾಂಗುಡಿಯಿಡುತ್ತಿದ್ದರೆ ಯಾರೇ ಆಗಲಿ ಬೆಚ್ಚಿಬೀಳುತ್ತಿದ್ದರು. ಅದಕ್ಕಾಗಿಯೇ ಆ ವಿಮಾನಕ್ಕೆ ಮಾರುತ್‌ (ಸುಂಟರಗಾಳಿಯ ಸುಳಿ)ಎಂದು ನಾಮಕರಣ ಮಾಡಲಾಗಿತ್ತು. ಅದೇ ರೀತಿ ಎದುರು ದಿಕ್ಕಿನಿಂದ ಬರುವ ಶತ್ರುವಿಮಾನಕ್ಕೆ ದಾಳಿಯಿಡುವ ಕ್ಷಮತೆಯಿದ್ದರೂ, ಶತ್ರುದೇಶದ ವಾಯುನೆಲೆಗಳನ್ನು ಧ್ವಂಸಗೊಳಿಸುವ ಕಾರ್ಯಕ್ಕಾಗಿಯೇ ಬಳಸಿಕೊಳ್ಳಲಾಯಿತು.

ಹಿತ್ತಿಲಗಿಡ ಮದ್ದಲ್ಲ ಎಂದು ಮೂಗು ಮುರಿಯುವವರ ನಡುವೆ ಅಂದಿನ ಪ್ರಧಾನಿಯವರು ತೋರಿದ ಇಚ್ಛಾ ಶಕ್ತಿಯಿಂದಾಗಿ ಎಚ್‌ಎಎಲ್‌ ಮೂಲಕ ನಮ್ಮ ದೇಶವು ವೈಮಾನಿಕ ಕ್ಷೇತ್ರದಲ್ಲಿ ದಾಪುಗಾಲಿಡಲು ಸಾಧ್ಯವಾಯಿತು. ಆನಂತರ ನಮ್ಮ ಬತ್ತಳಿಕೆಯಲ್ಲಿ ಜಗ್ವಾರ್‌, ಮಿಗ್‌ ಸರಣಿ, ಹಾಕ್‌, ಮಿರೇಜ್‌, ಸುಖೋಯ್‌ ಮುಂತಾದ ವಿದೇಶೀ ಯುದ್ಧವಿಮಾನಗಳು ಸೇರಿಕೊಂಡು ಅವುಗಳ ಮುಖಾಂತರ ಎಚ್‌ಎಎಲ್‌ ಸಾಕಷ್ಟು ಪರಿಣತಿ ಹೊಂದಿತು. ಇವೆಲ್ಲವುಗಳ ಫಲಶ್ರುತಿಯಾಗಿ ಸ್ವಾವಲಂಬನೆಯ ಕಳಶಪ್ರಾಯವಾಗಿ ತೇಜಸ್‌ ವಿಮಾನವು ಬಾನಂಗಳವನ್ನು ಚುಂಬಿಸುತ್ತಿದೆ.

“ಆ ದಿನಗಳು ಈಗಲೂ ನನಗೆ ಚೆನ್ನಾಗಿ ನೆನಪು ಇದೆ. ಇಡೀ ಬೆಂಗಳೂರು 10-15 ದಿನ ಕತ್ತಲೆಯಲ್ಲಿತ್ತು. ರಾತ್ರಿ ಆಗುತ್ತಿದ್ದಂತೆ ಮನೆ-ಬೀದಿ ಗಳ ದೀಪಗಳನ್ನು ಆರಿಸಲಾಗು ತ್ತಿತ್ತು. ನನಗಾಗ 21 ವರ್ಷ ವಯಸ್ಸು. ರಾತ್ರಿ ವೇಳೆ ಕತ್ತಲಲ್ಲಿ ಕಳ್ಳತನ, ದರೋಡೆ ಅಥವಾ ಏನಾದರೂ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸರ್ಕಾರ ಯುವ ಪಡೆ ರಚಿಸಿತ್ತು. ಅದರಲ್ಲಿ ನಾನೂ ಒಬ್ಬ ಇದ್ದೆ. ಪ್ರತಿ ದಿನ ಪೊಲೀಸ್‌ ಠಾಣೆಯಲ್ಲಿ ಸಭೆ ನಡೆಯುತ್ತಿತ್ತು.

ಇಡೀ ದಿನದ ಆಗು-ಹೋಗುಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು. ಅಂತೆ-ಕಂತೆ, ಗಾಳಿ ಸುದ್ದಿಗಳನ್ನು ನಿಭಾಯಿಸುವುದು ಆಗ ದೊಡ್ಡ ಸವಾಲು ಆಗಿತ್ತು. ಇಂದಿರಾಗಾಂಧಿ ಆಗ ಉತ್ತಂಗದಲ್ಲಿದ್ದರು. ಅವರು ಯಾವಾಗ ಏನು ಹೇಳುತ್ತಾರೆ ಎಂದು ಪ್ರತಿಯೊಬ್ಬರು ಕಾತರದಿಂದ ಕಾಯುತ್ತಿದ್ದರು. ರೇಡಿಯೋದಲ್ಲಿ ಸುದ್ದಿ ಕೇಳಬೇಕಾಗುತ್ತಿತ್ತು. ಭಾರತದ ಪಾಲಿಗೆ ಒಳ್ಳೆಯ ಸುದ್ದಿಗಳೇ ಬರುತ್ತಿದ್ದವು.

ಅದರ ಜೊತೆಗೆ ನಮ್ಮ ಯೋಧರು ಪ್ರಾಣ ಕಳೆದುಕೊಂಡ ಸುದ್ದಿಗಳೂ ಮನಸ್ಸಿಗೆ ನೋವು ತರಿಸುತ್ತಿದ್ದವು. ಸೇನೆ ಸೇರಲು ಯಾರಾದರೂ ಬೆಂಗಳೂರಿಂದ ಹೋದರೆ ಅವರನ್ನು ಬೀಳ್ಕೊಡಲು ಎಲ್ಲರೂ ಸೇರುತ್ತಿದ್ದರು. ಹುತಾತ್ಮರ ಅಂತ್ಯಕ್ರಿಯೆ ವ್ಯವಸ್ಥೆಯಲ್ಲಿ ಸರ್ಕಾರದೊಂದಿಗೆ ಎಲ್ಲರೂ ಕೈಜೋಡಿಸುತ್ತಿದ್ದರು. ಆ ದಿನಗಳಲ್ಲಿ ಸೇನೆಯಲ್ಲಿದ್ದವರ ಕುಟುಂಬದವರ ಬಗ್ಗೆ ವಿಶೇಷ ಅಭಿಮಾನ, ಗೌರವದ ಜೊತೆಗೆ ಅವರ ಕುರಿತು ವಿಶೇಷ ಕಾಳಜಿ ವಹಿಸಲಾಗುತ್ತಿತ್ತು.”                 – ಎಂ. ರಾಮಚಂದ್ರಪ್ಪ, ಬಿಬಿಎಂಪಿ ಮಾಜಿ ಮೇಯರ್‌

“1971ರಲ್ಲಿ ಇಂಡೋ-ಪಾಕ್‌ ಯುದ್ಧದ ವೇಳೆ ನಾನು ಎಚ್‌ಎಎಲ್‌ನಲ್ಲಿ ಅಪ್ರಂಟಿಸ್‌ನಲ್ಲಿದ್ದೇ. ಆಗ ಬೆಂಗಳೂರಿನಲ್ಲಿ ಬ್ಲಾಕ್‌ ಔಟ್‌ ಅಂತ ಮಾಡೋರು. ಅಲ್ಲಿಂದ ಬಂದು ಬೆಂಗಳೂರಿಗೆ ಬಾಂಬ್‌ ಹಾಕಿ ಬಿಡ್ತಾರೆ, ಅಮೆರಿಕಾದ ಜಟ್‌ ಯುದ್ಧ ವಿಮಾನಗಳು ದಾಳಿ ನಡೆಯುತ್ತವೆ ಎಂಬ ರೀತಿಯಲ್ಲಿ ಮಾತನಾಡುತ್ತಿದ್ದರು. ಪಾಕಿಸ್ತಾನದವರು ಬೆಂಗಳೂರಿನಲ್ಲಿ ಕೇಂದ್ರೀಕರಿಸಿದ್ದಾರೆ ಎಂಬ ಮಾತುಗಳು ಕೂಡ ಆಗ ಕೇಳಿ ಬಂದಿದ್ದವು.

ಇಡೀ ಏಷ್ಯಾ ಖಂಡದಲ್ಲೇ ವಿಮಾನದ ಬಿಡಿ ಭಾಗಗಳನ್ನು ಉತ್ಪತ್ತಿ ಮಾಡುವ ಒಂದೇ ಒಂದು ಕಾರ್ಖಾನೆ ಎಂದರೆ ಅದು ಎಚ್‌ಎಎಲ್‌ ಮಾತ್ರ ಹೀಗಾಗಿಯೇ ಎಚ್‌ಎಎಲ್‌ನ ಟಾರ್ಗೆಟ್‌ ಮಾಡಿದ್ದಾರೆ ಎಂಬ ರೀತಿಯ ಸನ್ನಿವೇಶ ನಿರ್ಮಾಣವಾಗಿತ್ತು. ಆ ಹಿನ್ನೆಲೆಯಲ್ಲಿ ಎಚ್‌ಎಎಲ್‌ನಲ್ಲಿ ವಿದ್ಯುತ್‌ ಲೈಟ್‌ ಗಳು ಕಾಣಬಾರದು ಎಂಬ ಉದ್ದೇಶದಿಂದ ಎಚ್‌ಎಎಲ್‌ನಲ್ಲಿ ಲೈಟ್‌ಗಳಿಗೆ ಕಪ್ಪು ಬಣ್ಣಗಳನ್ನು ಬಳಿದಿದ್ದರು.

ಆಗ ನಮ್ಮನ್ನು ಬಸ್‌ನಲ್ಲಿ ಪಿಕ್‌ ಮತ್ತು ಡ್ರಾಪ್‌ ಮಾಡಲಾಗುತ್ತಿತ್ತು. ಹೀಗಾಗಿ ಬಸ್‌ನಲ್ಲಿನ ಮುಂಭಾಗದ ಗೇಟ್‌ಗಳು ಕೂಡ ಕಾಣಬಾರದು ಎಂದು ಕಪ್ಪು ಬಡಿಯಲಾಗುತ್ತಿತ್ತು. ಬಾಂಗ್ಲಾ ವಿಮೋಚನಾ ಯುದ್ಧದ ವೇಳೆ ಜನರು ಕೂಡ ರಾತ್ರಿ ಆಗುತ್ತಿದ್ದಂತೆ ಲೈಟ್‌ ಆಫ್ ಮಾಡುತ್ತಿದ್ದರು. ಆಗ ಬೆಂಗಳೂರಿನಲ್ಲಿ ಜನ ಸಂಖ್ಯೆ ಕಡಿಮೆಯಿತ್ತು. ಸಂಜೆಯಾಗುತ್ತಿದ್ದಂತೆ ಜನರು ಮನೆಯಿಂದ ಹೊರಗಡೆ ಬರುತ್ತಿರಲಿಲ್ಲ. ಪಾಕ್‌ ಮತ್ತು ಭಾರತದ ಯುದ್ಧ ಹಿನ್ನೆಲೆಯಲ್ಲಿ ಸುಮಾರು ಹದಿನೈ ದರಿಂದ ಇಪ್ಪತ್ತು ದಿನ ಲೈಟ್‌ ಗಳು ಇಲ್ಲದ ರೀತಿಯ ವಾತಾವರಣ ಸೃಷ್ಟಿಯಾಗಿತ್ತು.

ಈಗಿನ ರೀತಿಯಲ್ಲಿ ಆಗ ರೇಡಿಯೋಗಳ ಸಂಖ್ಯೆ ಕೂಡ ಕಡಿಮೆಯಿತ್ತು. ಪತ್ರಿಕೆಗಳು ಕೂಡ ಜನರಿಗೆ ಸಿಗುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಚಿಕ್ಕ ರೇಡಿಯೋ ಇತ್ತು, ರಾತ್ರಿ 7ಗಂಟೆಗೆ ಪ್ರಸಾರವಾಗುತ್ತಿದ್ದ ವಾರ್ತೆ ಕೇಳುತ್ತಿದ್ದೆ. ರೇಡಿಯೋದಲ್ಲಿ ಯುದ್ಧದ ಸುದ್ದಿಗಳು ಕೇಳಿದರೆ ಮೈ ರೋಮಾಂಚನವಾಗುತ್ತಿತ್ತು. ಭಾರತ ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದಾಗ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಒಂದು ಕ್ರಾಂತಿಯನ್ನು ಮಾಡಿದ್ದಾರೆ ಅನ್ನುವ ರೀತಿಯಲ್ಲಿ ವಾತಾವರಣ ಸೃಷ್ಟಿ ಆಗಿತು.”                           ರಾ.ನಂ.ಚಂದ್ರಶೇಖರ್‌, ಕನ್ನಡಪರ ಹೋರಾಟಗಾರ

“ಇಂಡೋ-ಪಾಕ್‌ ಕದನ ವೇಳೆಗಾಗಲೇ ಬೆಂಗಳೂರು ರಕ್ಷಣಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಬೆಂಗಳೂರು ರಕ್ಷಣಾ ಪಡೆಯ ಹಬ್‌ ಆಗಿ ರೂಪಿತವಾಗಿತ್ತು. ಅತ್ಯುತ್ತಮ ಸೇನಾ ಆಸ್ಪತ್ರೆಗಳು ಕೂಡ ಇಲ್ಲಿವೆ. ಜತೆಗೆ ಯುದ್ಧ ವಿಮಾನಗಳ ಪರಿಕರಗಳು ಕೂಡ ಬೆಂಗಳೂರಿನಿಂದಲೇ ತಯಾರಾಗುತ್ತಿವೆ. ಹೀಗಾಗಿ ಬಾಂಗ್ಲಾ ವಿಮೋಚನಾ ಯುದ್ಧದ ವೇಳೆ ನೆರೆಯ ಪಾಕಿಸ್ತಾನ ಸೇನೆಯ ಕಣ್ಣು ಬೆಂಗಳೂರಿನ ಮೇಲೆ ಬಿದ್ದಿತ್ತು ಎಂಬ ಮಾತಿತ್ತು.

ಆದರಲ್ಲೂ ಕಮಾಂಡ್‌ ಆಸ್ಪತ್ರೆಯ ಸೇರಿದಂತೆ ಸಿಲಿಕಾನ್‌ ಸಿಟಿಯಲ್ಲಿರುವ ರಕ್ಷಣಾ ವಲಯಗಳ ನೆಲೆಗಳ ಮೇಲೆ ಕಣ್ಣು ನೆಟ್ಟಿತ್ತು. ಆ ಹಿನ್ನೆಲೆಯಲ್ಲಿಯೇ “ಬ್ಲ್ಯಾಕ್‌ ಔಟ್‌”ಅನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲಾಗುತ್ತಿತ್ತು. ಪ್ರತಿ ಮೂರು ದಿನಕ್ಕೆ ಬ್ಲಾಕ್‌ ಔಟ್‌ ಮಾಡಲಾಗುತ್ತಿತ್ತು. ರೇಡಿಯೋ ಮೂಲಕ ಬ್ಲಾಕ್‌ ಔಟ್‌ ಬಗ್ಗೆ ಮಾಹಿತಿ ದೊರಕುತ್ತಿತ್ತು. ಜನರು ಕೂಡ ಇದಕ್ಕೆ ಸಹಕಾರ ನೀಡುತ್ತಿದ್ದರು. ಡಿಆರ್‌ಡಿಒ ಮತ್ತು ಎಚ್‌.ಎ.ಎಲ್‌ನಲ್ಲಿ ವಿದ್ಯುತ್‌ ದ್ವೀಪಗಳನ್ನು ಆರಿಸುವ ಪ್ರವೃತ್ತಿ ಕೂಡ ಇತ್ತು. ಜಾಲಹಳ್ಳಿಯ ಐಎಸ್‌ಎಫ್ ಮತ್ತು ಎಚ್‌ಎಎಲ್‌ನ ವಾಯು ನೆಲೆ ರಕ್ಷಣಾ ಕ್ಷೇತ್ರದಲ್ಲಿ ದೊಡ್ಡ ಪಾತ್ರವನ್ನು ನಿರ್ವಹಿಸುತ್ತಿದ್ದರಿಂದ ಈ ಪ್ರದೇಶಗಳನ್ನು ಪಾಕ್‌ ಟಾರ್ಗೆಟ್‌ ಮಾಡಿದೆ ಎಂಬ ಮಾತು ಕೂಡ ಕೇಳಿ ಬಂದಿತ್ತು.

ಹಾಗೆಯೇ ಇಂಡೋ-ಪಾಕ್‌ ಯುದ್ಧದಲ್ಲಿ ಗಾಯಗೊಂಡ ಹಲವು ಸೈನಿಕರು ಜಾಲಹಳ್ಳಿಯಲ್ಲಿರುವ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅದರಲ್ಲಿ ಕೊಡಗಿನ ಕೆಲವು ಯೋಧರು ಕೂಡ ಇದ್ದರು. ಬಾಂಗ್ಲಾ ವಿಮೋಚನಾ ಯುದ್ಧದ ವೇಳೆ ಪ್ರತಿ ಅರ್ಧ ಗಂಟೆಗೊಮ್ಮೆ ಆಕಾಶವಾಣಿಯಲ್ಲಿ ಹಿಂದಿ, ಇಂಗ್ಲಿಷ್‌ ಮತ್ತು ಕನ್ನಡದಲ್ಲಿ “ವಾರ್‌ ಬುಲೆಟಿನ್ಸ್‌” ಪ್ರಸಾರವಾಗುತ್ತಿತ್ತು. ಜನರು ಆಕಾಶವಾಣಿಯಲ್ಲಿ ಪ್ರಸಾರ ವಾಗುತ್ತಿದ್ದ ಸಮಾಚಾರಗಳನ್ನು ಗ್ರಹಿಸುತ್ತಿದ್ದರು.

ಯಲಹಂಕ ವಾಯು ನೆಲೆಯಲ್ಲಿ ಸೇನಾ ಯೋಧರು ಯುದ್ಧ ವಿಜಯವನ್ನು ಸಂಭ್ರಮಿಸಿದ್ದರು. ಹಾಗೆಯೇ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ದಕ್ಷಿಣ ಭಾರತದ ಸೇನಾ ತರಬೇತಿ ಶಾಲೆಯಲ್ಲಿ ಇಂಡೋ-ಪಾಕ್‌ ಯುದ್ಧದ ಸಂಕೇತವಾಗಿ ಯುದ್ಧಲ್ಲಿ ಹಾನಿಗೊಳಗಾಗಿದ್ದ ಯುದ್ಧದ ಟ್ಯಾಂಕರ್‌ಗಳನ್ನು ಇರಿಸಲಾಗಿದೆ. ಈಗಲೂ ಕೂಡ ಅವುಗಳನ್ನು ಅಲ್ಲಿ ವೀಕ್ಷಿಸಬಹುದಾಗಿದೆ.” -ಜಗನ್ನಾಥ ಪ್ರಕಾಶ್‌ ಹಿರಿಯ ಪತ್ರಕರ್ತರು

Advertisement

Udayavani is now on Telegram. Click here to join our channel and stay updated with the latest news.

Next