ಬೆಂಗಳೂರು: ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ರಾಜ್ಯದ ಮೊದಲ ಸ್ವಾಯತ್ತ ಸಂಸ್ಥೆಯಾಗಿರುವ ‘ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ’ (ಯುವಿಸಿಇ)ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಸಂಜೆ 5 ಗಂಟೆಗೆ ಉದ್ಘಾಟಿಸಲಿದ್ದಾರೆ.
ಇದೇ ವೇಳೆ ಸರ್‌ಎಂ.ವಿಶ್ವೇಶ್ವರಯ್ಯ ಅವರ 162ನೇ ಜನ್ಮದಿನದ ಅಂಗವಾಗಿ ‘ಎಂಜಿನಿಯರುಗಳ ದಿನಾಚರಣೆ’ಯನ್ನೂ ಆಚರಿಸಲಾಗುತ್ತದೆ.
105 ವರ್ಷಗಳ ಇತಿಹಾಸ: 105 ವರ್ಷಗಳಷ್ಟು ಹಳೆಯದಾದ ಯುವಿಸಿಇ ಕಾಲೇಜನ್ನು ಇತ್ತೀಚೆಗೆ 10 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗಿದೆ. ಸದ್ಯ ವಿವಿಧ ಆರು ಎಂಜಿನಿಯರಿಂಗ್ ವಿಭಾಗಗಳಲ್ಲಿ 3,300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಎನ್‌ಇಪಿ ಚೌಕಟ್ಟಿಗೆ ಅನುಗುಣವಾಗಿ ಯುವಿಸಿಇಗೆ ಸ್ವಾಯತ್ತ ವಿವಿ ಸ್ಥಾನಮಾನ ಕೊಡಲಾಗುತ್ತಿದೆ. ಇದರ ಜತೆ ಉದ್ಯಮಗಳು ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘ ಕೂಡ ಕೈ ಜೋಡಿಸಲಿವೆ. ಇಲ್ಲಿ ಸಹಭಾಗಿತ್ವದ ಮೂಲಕ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ.
ನಗರದ ಕೆ.ಆರ್. ವೃತ್ತದಲ್ಲಿರುವ ಯುವಿಸಿಇ ಆವರಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.