Advertisement

ದಯಾಮರಣದಿಂದ ಗೆಳೆಯನನ್ನು ಕಾಪಾಡಲು ಹರಸಾಹಸ! ಮುಂದಿನ ವಾರ ಈ ವಿಶೇಷ ಪ್ರಕರಣದ ವಿಚಾರಣೆ

07:09 PM Aug 12, 2022 | Team Udayavani |

ನವದೆಹಲಿ: ಮುಂದಿನ ವಾರ ದೆಹಲಿ ಹೈಕೋರ್ಟ್‌ನಲ್ಲಿ ವಿಶಿಷ್ಟವಾದ ಪ್ರಕರಣವೊಂದು ವಿಚಾರಣೆಗೆ ಬರಲಿದೆ. ನೋಯ್ಡಾ ಮೂಲದ ತಮ್ಮ ಗೆಳೆಯರೊಬ್ಬರನ್ನು ದಯಾಮರಣದಿಂದ ರಕ್ಷಿಸುವಂತೆ ಕೋರಿ ಬೆಂಗಳೂರಿನ ಮಹಿಳೆ ಸಲ್ಲಿಸಿರುವ ಅರ್ಜಿಯಿದು!

Advertisement

ನೋಯ್ಡಾದ 48 ವರ್ಷದ ವ್ಯಕ್ತಿಯೊಬ್ಬರು 2014ರಿಂದಲೂ ಗಂಭೀರವಾದ ಫೇಟಿಗ್‌ ಸಿಂಡ್ರೋಮ್‌(ತೀವ್ರ ಬಳಲಿಕೆಗೆ ಸಂಬಂಧಿಸಿದ ಕಾಯಿಲೆ)ನಿಂದ ಬಳಲುತ್ತಿದ್ದಾರೆ. ಇದರಿಂದ ನೊಂದಿರುವ ಅವರು ಸ್ವಿಜರ್ಲೆಂಡ್‌ಗೆ ತೆರಳಿ ವೈದ್ಯರೊಬ್ಬರ ಸಹಾಯದಿಂದ ದಯಾಮರಣಕ್ಕೆ ಒಳಗಾಗಲು ಚಿಂತನೆ ನಡೆಸಿದ್ದಾರೆ.

ತೀರಾ ಅಪರೂಪದ ಪ್ರಕರಣಗಳು ಹೊರತುಪಡಿಸಿ ಈ ರೀತಿ ದಯಾಮರಣ ಪಡೆಯಲು ಭಾರತದಲ್ಲಿ ಅವಕಾಶವಿಲ್ಲ. ಈ ಕಾರಣಕ್ಕಾಗಿಯೇ ಅವರು ಸ್ವಿಜರ್ಲೆಂಡ್‌ಗೆ ಪ್ರಯಾಣ ಬೆಳೆಸಲು ಉದ್ದೇಶಿಸಿದ್ದಾರೆ. ಜೂರಿಚ್‌ ಮೂಲದ ಡಿಗ್ನಿಟಾಸ್‌ ಎಂಬ ಸಂಸ್ಥೆಯೇ ವಿದೇಶಿ ನಾಗರಿಕರಿಗೆ ದಯಾಮರಣವನ್ನು ಕಲ್ಪಿಸುವ ಕೆಲಸ ಮಾಡುತ್ತದೆ.

ಪ್ರಯಾಣಕ್ಕೆ ಅವಕಾಶ ನೀಡಬೇಡಿ:
ಯಾವ ಕಾರಣಕ್ಕೂ ಅವರಿಗೆ ಯುರೋಪ್‌ಗೆ ಪ್ರಯಾಣ ಬೆಳೆಸಲು ಅವಕಾಶ ನೀಡಬಾರದು ಎಂದು ಕೋರಿ ಬೆಂಗಳೂರಿನ ಅವರ ಗೆಳತಿ ಕೋರ್ಟ್‌ ಮೊರೆಹೋಗಿದ್ದಾರೆ. ಅವರೇನಾದರೂ ದಯಾಮರಣ ಹೊಂದಿದರೆ, ಅದರಿಂದ ಅವರ ಹೆತ್ತವರು, ಕುಟುಂಬದ ಇತರೆ ಸದಸ್ಯರು ಮತ್ತು ಸ್ನೇಹಿತರು “ತುಂಬಲಾರದ ನಷ್ಟ’ ಹಾಗೂ “ಸಂಕಷ್ಟ’ಗಳನ್ನು ಎದುರಿಸಲಿದ್ದಾರೆ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಸೂಕ್ತ ಚಿಕಿತ್ಸೆ ಪಡೆಯಲು ಅವರಿಗೆ ಹಣಕಾಸಿನ ಸಮಸ್ಯೆಯಿಲ್ಲ. ಆದರೆ, ಅವರು ದಯಾಮರಣ ಪಡೆಯಲೇಬೇಕೆಂಬ ದೃಢ ನಿರ್ಧಾರ ಕೈಗೊಂಡಿದ್ದು, 70ರ ಆಸುಪಾಸಿನಲ್ಲಿರುವ ಹೆತ್ತವರಿಗೆ ಆಘಾತ ಉಂಟಾಗಿದೆ ಎಂದೂ ಅರ್ಜಿದಾರ ಮಹಿಳೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next