Advertisement

ಬೆಂಗಳೂರು ವಿವಿಗೆ ಮುಖ್ಯಸ್ಥರೇ ಇಲ್ಲ : ಕುಲಪತಿ ಅಸಿಂಧುಗೊಳಿಸಿ ವಾರ ಕಳೆದರೂ ನೇಮಕ ಇಲ್ಲ

02:41 PM Mar 24, 2022 | Team Udayavani |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ನೇಮಕ ಆದೇಶವನ್ನು ಹೈಕೋರ್ಟ್‌ ಅಸಿಂಧುಗೊಳಿಸಿ ಒಂದು ವಾರವಾಗಿದೆ. ಆದರೂ ಸರ್ಕಾರ ಅಥವಾ ರಾಜ್ಯಪಾಲರು ಕ್ರಮ ಕೈಗೊಳ್ಳದ ಪರಿಣಾಮ, ವಿಶ್ವವಿದ್ಯಾಲಯಕ್ಕೆ ಮುಖ್ಯಸ್ಥರೇ ಇಲ್ಲದಂತಾಗಿದೆ.

Advertisement

ಪ್ರೊ. ಕೆ.ಆರ್‌. ವೇಣುಗೋಪಾಲ್‌ ಅವರನ್ನು ಮಾ.16ರಂದು ಕುಲಪತಿ ಹುದ್ದೆಯಿಂದ ಅಸಿಂಧುಗೊಳಿಸಿದ ನಂತರ ರಾಜ್ಯ ಸರ್ಕಾರವು ಬೇರೆ ಯಾರನ್ನಾದರೂ ಪ್ರಭಾರಿ ಹುದ್ದೆಗೆ ನೇಮಕ
ಮಾಡಬೇಕಿತ್ತು. ಆದರೂ ಸರ್ಕಾರ ಈ ಬಗ್ಗೆ ಯಾವುದೇ ಚಿಂತನೆ ಮಾಡಿಲ್ಲ. ಹೀಗಾಗಿ, ವಿಶ್ವ ವಿದ್ಯಾಲಯದ ಕಾರ್ಯಕಲಾಪಗಳನ್ನು ನಿರ್ಧರಿಸುವವರು ಯಾರು ಎಂಬ ಪ್ರಶ್ನೆ ಮೂಡಿದೆ.

ಏ.8ರಂದು ಘಟಿಕೋತ್ಸವ: ಈ ನಡುವೆಯೇ ಏ.8ರಂದು ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆಸುವುದಾಗಿ ಘೋಷಣೆ ಮಾಡಿದೆ. ಘಟಿಕೋತ್ಸವಕ್ಕೆ ಸಂಬಂಧಿಸಿದ ನಿರ್ಣಯ,
ಹಣಕಾಸು ನಿರ್ವಹಣೆ, ಕಾರ್ಯಕ್ರಮಕ್ಕೆ ಹಣ ಬಿಡುಗಡೆ, ಅತಿಥಿಗಳ ಆಹ್ವಾನ ಸೇರಿದಂತೆ ಯಾವುದೇ ಕೆಲಸ ನಿರ್ವಹಣೆಗೆ ಕುಲಪತಿಗಳೇ ಇಲ್ಲ. ಇದರ ಜೊತೆಗೆ ಮುಂಬರುವ ಶೈಕ್ಷಣಿಕ ವರ್ಷದ ಆರ್ಥಿಕ ಬಜೆಟ್‌ ಅನ್ನು ಮಾ.31ರಂದು ಚರ್ಚಿಸಬೇಕಿದೆ. ಇದಕ್ಕೆ ಕುಲಪತಿಗಳಿಲ್ಲದೆ ಹೇಗೆ ಅನುಮೋದನೆ ನೀಡಲಾಗುತ್ತದೆ ಎಂಬ ಪ್ರಶ್ನೆ ಎದುರಾಗಿದೆ. ಅದೇ ರೀತಿ ಏಪ್ರಿಲ್‌ ತಿಂಗಳಾಂತ್ಯಕ್ಕೆ ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್‌) ಸಮಿತಿಯು ಭೇಟಿ ನೀಡಲಿದೆ. ಸಮತಿಗೆ ನೀಡಬೇಕಾದ ದಾಖಲೆ ಪತ್ರಗಳು ಸೇರಿದಂತೆ ಇನ್ನಿತರ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಕುಲಪತಿಗಳೇ ಇಲ್ಲದಿದ್ದರೆ, ಅವರ ಸ್ಥಾನದಲ್ಲಿ ಯಾರು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ವಿವಿ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಫ್ರಾನ್ಸ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಕ್ರೀಡಾ ಸ್ಫರ್ಧೆಗೆ ಶಿರಸಿಯ ಪ್ರೇರಣಾ ಶೇಟ್ ಆಯ್ಕೆ

ಆದ್ದರಿಂದ ರಾಜ್ಯಪಾಲರು ವಿಶ್ವವಿದ್ಯಾಲಯದಲ್ಲಿರುವ ಪ್ರಾಧ್ಯಾಪಕರು ಅಥವಾ ಬೇರೆ ಯಾರನ್ನಾದರೂ ಸೇವಾ ಜ್ಯೇಷ್ಠತೆ ಆಧರಿಸಿ ಪ್ರಭಾರಿ ಕುಲಪತಿಗಳನ್ನು ನೇಮಕ ಮಾಡಬೇಕು. ಅಥವಾ
ಕಾನೂನಾತ್ಮಕವಾಗಿ ಸರ್ಕಾರ ನಿರ್ಣಯ ಕೈಗೊಳ್ಳಬೇಕು ಎಂದು ಸಿಂಡಿಕೇಟ್‌ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next