ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಕೆಲಸದಾಕೆ ಸೇರಿ ಮೂವರು ಆರೋಪಿಗಳನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ನೀಲಸಂದ್ರ ನಿವಾಸಿ, ಮನೆ ಕೆಲಸದಾಕೆ ದಿವ್ಯಾ(22), ಈಕೆಯ ಸಂಬಂಧಿ ಆಸ್ಟೀನ್‌ಟೌನ್ ನಿವಾಸಿ ಮಂಜು (39) ಮತ್ತು ಈಕೆಯ ಪರಿಚಯಸ್ಥ ಕೇರಳ ಮೂಲದ ಜೋಮನ್ (44) ಬಂಧಿತರು.
ಆರೋಪಿಗಳಿಂದ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯಮಲೂರು ನಿವಾಸಿ, ದೂರುದಾರ ವಿಕ್ರಮ್ ವೈದ್ಯನಾಥನ್ ಉದ್ಯಮಿಯಾಗಿದ್ದಾರೆ. ಅವರ ಮನೆಯಲ್ಲಿ ಆರೋಪಿತೆ ದಿವ್ಯಾ ಸೇರಿ ಸುಮಾರು 7 ಮಂದಿ ಕೆಲಸ ಮಾಡುತ್ತಾರೆ. ಈ ಮಧ್ಯೆ ವೈದ್ಯನಾಥನ್ ಕುಟುಂಬ ರಜೆ ಹಿನ್ನೆಲೆಯಲ್ಲಿ ಜೂನ್ 27ರಂದು ರಂದು ಪ್ರವಾಸಕ್ಕೆ ತೆರಳಿತ್ತು. ಜುಲೈ 13ರಂದು ಪ್ರವಾಸ ಮುಗಿಸಿ ಮನೆಗೆ ಬಂದು, ಬೆಡ್ ರೂಮ್‌ನಲ್ಲಿ ಪರಿಶೀಲಿಸಿದಾಗ ಸುಮಾರು 60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ವಜ್ರ ಕಳ್ಳತನವಾಗಿತ್ತು. ಈ ಸಂಬಂಧ ಮನೆಕೆಲಸದವರನ್ನು ವಿಚಾರಣೆ ನಡೆಸಿದಾಗ ಯಾರು ಸ್ಪಷ್ಟವಾಗಿ ಉತ್ತರ ನೀಡಿಲ್ಲ. ಬಳಿಕ 7 ಮಂದಿ ವಿರುದ್ಧ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿ ಎಲ್ಲಾ ಕೆಲಸದವರನ್ನು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸುವಾಗ ದಿವ್ಯಾ ತಪ್ಪೊಪ್ಪಿಕೊಂಡಿದ್ದಾಳೆ. ಅಲ್ಲದೆ, ಕಳವು ಚಿನ್ನಾಭರಣಗಳನ್ನು ಸಂಬಂಧಿ ಮಂಜು ಮತ್ತು ಜೋಮನ್‌ಗೆ ನೀಡಿದ್ದಾಗಿ ತಿಳಿಸಿದ್ದಾಳೆ. ಬಳಿಕ ಇಬ್ಬರನ್ನು ವಶಕ್ಕೆ ಪಡೆದುಕೊಂಡು, ಸುಮಾರು 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ವಜ್ರ ವಶಕ್ಕೆ ಪಡೆಯಲಾಗಿದೆ ಎಂದು ಆಯುಕ್ತರು ಹೇಳಿದರು.
ತಿಂಗಳಲ್ಲಿ ಹಂತ ಹಂತವಾಗಿ ಕಳ್ಳತನ: ಕಳೆದ ಎರಡು ವರ್ಷಗಳಿಂದ ಮಾಲೀಕರ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ ದಿವ್ಯಾ, ಹಂತ -ಹಂತವಾಗಿ ಕಳೆದ ಆರು ತಿಂಗಳಿಂದ ಚಿನ್ನಾಭರಣ ಕಳವು ಮಾಡಿದ್ದಾಳೆ. ಬಳಿಕ ಅದನ್ನು ತನ್ನ ಸಂಬಂಧಿ ಮಂಜುಗೆ ಕೊಟ್ಟಿದ್ದಳು. ಈಕೆ, ತನ್ನ ಮಾಜಿ ಸಹೋದ್ಯೋಗಿ, ಕಾರು ಚಾಲಕ ಜೋಮನ್‌ಗೆ ಕೊಟ್ಟಿದ್ದಳು. ಈತ ಗಿರವಿ ಅಂಗಡಿಯಲ್ಲಿ ಚಿನ್ನಾಭರಣಗಳನ್ನು ಅಡಮಾನ ಇಟ್ಟಿದ್ದ ಎಂದು ಪೊಲೀಸರು ಹೇಳಿದರು.