Advertisement

‘ವರ್ಚ್ಯುಯಲ್ ಬಲ’ದ ಬೆಂಗಳೂರು ತಾಂತ್ರಿಕ ಮೇಳಕ್ಕೆ ಸಕಲ ಸಿದ್ಧತೆ

07:18 PM Nov 18, 2020 | mahesh |

ಬೆಂಗಳೂರು: ಕೋವಿಡ್ ಸವಾಲಿನ ನಡುವೆ ಇದೇ ಮೊದಲ ಬಾರಿಗೆ ವರ್ಚ್ಯುಯಲ್ ಆಗಿ ನಡೆಯಲಿರುವ ಭಾರತದ ಮಹತ್ವದ ತಾಂತ್ರಿಕ ಕಾರ್ಯಕ್ರಮವಾದ “ಬೆಂಗಳೂರು ತಂತ್ರಜ್ಞಾನ ಮೇಳ-2020 (ಬಿಟಿಎಸ್-2020)” ಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗುರುವಾರ ಬೆಳಿಗ್ಗೆ 10ಕ್ಕೆ ಆರಂಭಗೊಳ್ಳಲಿರುವ ಮೂರು ದಿನಗಳ ಈ ಮೇಳವನ್ನು ಜನೋಪಯೋಗಕ್ಕೆ ತಂತ್ರಜ್ಞಾನ ಬಳಸುವ ಬಗ್ಗೆ ಸ್ವತಃ ಹೆಚ್ಚಿನ ಆಸಕ್ತಿ ಹೊಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್_ ಮೂಲಕ ಉದ್ಘಾಟಿಸಲಿದ್ದಾರೆ.

Advertisement

ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಮತ್ತು ಸ್ವಿಜ್ ಗಣರಾಜ್ಯದ ಉಪರಾಷ್ಟ್ರಾಧ್ಯಕ್ಷ ಗೈ ಪರ್ಮೆಲಿನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸರ್ಕಾರದ ಸಂವಹನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಆನ್ ಲೈನ್ ಮೂಲಕ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಐಟಿ/ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಚಿವ ಜಗದೀಶ್ ಶೆಟ್ಟರ್ ಸಮಾರಂಭದಲ್ಲಿ ಹಾಜರಿರುತ್ತಾರೆ.

ಬೆಂಗಳೂರು ತಂತ್ರಜ್ಞಾನ ಮೇಳದ 23ನೇ ಆವೃತ್ತಿ ಇದಾಗಿದೆ. ಇದಕ್ಕೆ ಮುನ್ನ 22 ಮೇಳಗಳು ಭೌತಿಕ ಪಾಲ್ಗೊಳ್ಳುವಿಕೆಯಿಂದ ನಡೆದು ಪ್ರಪಂಚಾದಾದ್ಯಂತ ಗಮನ ಸೆಳೆದಿದ್ದವು. ಆದರೆ ಈ ಬಾರಿ ಕೋವಿಡ್ ಸೋಂಕು ಮಾರಿಯ ಹಿನ್ನೆಲೆಯಲ್ಲಿ ವರ್ಚ್ಯುಯಲ್ ಆಗಿ ಮೇಳ ನಡೆಯುತ್ತಿರುವುದರಿಂದ ಇದಕ್ಕೆ ಸ್ಪಂದನೆ ಹೇಗಿರುತ್ತದೋ ಎಂಬ ಅಂಜಿಕೆ ಆರಂಭದಲ್ಲಿ ಇತ್ತು. ಆದರೆ ದೇಶ ವಿದೇಶಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿರುವುದು ವಿಶೇಷವಾಗಿ ಗಮನ ಸೆಳೆದಿದೆ.

ಫಿನ್ಲೆಂಡ್, ಇಸ್ರೇಲ್, ನೆದರ್ ಲೆಂಡ್ಸ್, ಯುಕೆ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ಜರ್ಮನಿ, ಸ್ವೀಡನ್, ಸ್ವಿಟ್ವರ್ ಲೆಂಡ್, ಡೆನ್ಮಾರ್ಕ್, ತೈವಾನ್, ಜಪಾನ್, ಲಿಥುವಾನಿಯಾ ಸೇರಿದಂತೆ 25ಕ್ಕೂ ಹೆಚ್ಚು ದೇಶಗಳು ಈ ಮೇಳವನ್ನು ಕಾತರದಿಂದ ಎದುರು ನೋಡುತ್ತಿವೆ. 100ಕ್ಕೂ ಹೆಚ್ಚು ನವೋದ್ಯಮಗಳು, 4000ಕ್ಕೂ ಹೆಚ್ಚು ಉದ್ಯಮ ಗಣ್ಯರು, ಸುಮಾರು 270 ವಿಷಯ ಪರಿಣತರು ಹಾಗೂ 70ಕ್ಕೂ ಹೆಚ್ಚು ಗೋಷ್ಠಿಗಳಿಗೆ ಮೇಳ ಸಾಕ್ಷಿಯಾಗಲಿದೆ. 250ಕ್ಕೂ ಹೆಚ್ಚು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸಲಿವೆ 20,000ಕ್ಕೂ ಹೆಚ್ಚು ಸಂದರ್ಶಕರು ಭೇಟಿ ನೀಡುವ ನಿರೀಕ್ಷೆ ಇದೆ. ಮೇಳದ ವೇಳೆ ಕರ್ನಾಟಕ ಸರ್ಕಾರವು ಬೇರೆ ದೇಶಗಳೊಂದಿಗೆ ಕನಿಷ್ಠ 7 ಪರಸ್ಪರ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಿದೆ.

ವೈವಿಧ್ಯಮಯ ಗೋಷ್ಠಿ: ನಾಲೆಜ್ ಹಬ್, ಇನ್ನೊವೇಷನ್ ಕಾರ್ನರ್, ಒನ್ ಹೆಲ್ತ್, ಕಂಟ್ರಿ ಸೆಷನ್ಸ್ ವಿಭಾಗಗಳಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ಜನರ ದೈನಂದಿನ ಬದುಕಿನೊಂದಿಗೆ ನೇರವಾಗಿ ಬೆಸೆದುಕೊಂಡಿರುವ ತಾಂತ್ರಿಕ ನಾವೀನ್ಯತೆಗಳನ್ನು ಗಮನದಲ್ಲಿರಿಸಿಕೊಂಡು ವಿಷಯ ಗೋಷ್ಠಿಗಳನ್ನು ಆಯ್ಕೆ ಮಾಡಲಾಗಿದೆ. ಕೃಷಿ ತಾಂತ್ರಿಕತೆ, ಕೃತಕ ಬುದ್ಧಿಮತ್ತೆ, ಡಿಜಿಟಲ್ ಆರೋಗ್ಯ ಸೇವೆ, ಆಹಾರ ಮತ್ತು ಪೌಷ್ಟಿಕತೆ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ, ಡ್ರೋನ್, 5ಜಿ, ಸೈಬರ್ ಸುರಕ್ಷತೆ, ಸ್ಮಾರ್ಟ್ ಸಿಟಿಗಳು ಹಾಗೂ ನಗರ ಸುಸ್ಥಿರತೆ, ಲಸಿಕೆಗಳು (ಆವಿಷ್ಕಾರ ಮತ್ತು ಅಭಿವೃದ್ಧಿ), ಕೊರೋನಾ ನಂತರದ ಸನ್ನಿವೇಶದಲ್ಲಿ ನಾಯಕತ್ವದ ಪುನರ್ ವ್ಯಾಖ್ಯಾನ, ರಾಷ್ಟ್ರೀಯ ಶಿಕ್ಷಣ ನೀತಿ, ಫಿನ್ ಟೆಕ್ ಇತ್ಯಾದಿ ವಿಷಯಗಳನ್ನು ಇವು ಒಳಗೊಂಡಿವೆ. ‘ಹಸಿರು ಪುನರ್ ಸೃಷ್ಟಿಯಲ್ಲಿ ತಂತ್ರಜ್ಞಾನದ ಪಾತ್ರ ಹಾಗೂ ಸುಸ್ಥಿರ ಭವಿಷ್ಯ’ ಕುರಿತು (ಯುಕೆ), “ಸೈಬರ್ ಸ್ಪೇಸ್ ನಿಂದ ಔಟರ್ ಸ್ಪೇಸ್ ವರೆಗೆ” ಕುರಿತು (ಆಸ್ಟ್ರೇಲಿಯಾ), “ಆಹಾರ ಮತ್ತು ಪೌಷ್ಟಿಕತೆಯ ಭವಿಷ್ಯದ ಡ್ರೈವಿಂಗ್” ಕುರಿತು (ಸ್ವಿಟ್ಜರ್ ಲೆಂಡ್), “ಇ-ಮೊಬಿಲಿಟಿ, ಭವಿಷ್ಯದೆಡೆಗೆ ಹೆಜ್ಜೆ” ಕುರಿತು (ಜರ್ಮನಿ) ವಿಷಯ ಮಂಡನೆಗೆ ಉತ್ಸುಕವಾಗಿವೆ. ಕರ್ನಾಟಕ ಸೇರಿದಂತೆ ಭಾರತದ 50ಕ್ಕೂ ಹೆಚ್ಚು ನವೋದ್ಯಮಗಳಿಗೆ ಯುರೋಪ್ ಮಾರುಕಟ್ಟೆ ಪ್ರವೇಶಿಸುವುದಕ್ಕೆ ನೆರವಾಗಲು ನೆದರ್ ಲೆಂಡ್ಸ್ ಒತ್ತು ನೀಡಲಿದೆ.

Advertisement

ಅರಂಭಿಕ ಹಂತದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮಕ್ಕೆ ಸಂಬಂಧಪಟ್ಟಂತೆ ಹೊರಗುತ್ತಿಗೆ ಕೇಂದ್ರವಾಗಿದ್ದ ಬೆಂಗಳೂರು ಇದೀಗ ನವೋದ್ಯಮಗಳ ಕಾಶಿಯಾಗಿ ಬೆಳೆಯುತ್ತಿದೆ. ಜೊತೆಗೆ ನಗರವು ಹಲವಾರು ಮುಂಚೂಣಿ ಬಹುರಾಷ್ಟ್ರೀಯ ಕಂಪನಿಗಳ ಸಂಶೋಧನಾ ಕೇಂದ್ರವಾಗಿ ಹೊರಹೊಮ್ಮಿದೆ. ಇಲ್ಲಿನ ಉದ್ದಿಮೆಗಳು ತಮ್ಮ ವಿನೂತನ ಉತ್ಪನ್ನಗಳ ಮೂಲಕ ದೇಶದ ಸಮಸ್ಯೆಗಳ ಜೊತೆಗೆ ಜಗತ್ತಿನ ಬೇರೆ ಬೇರೆ ದೇಶಗಳ ಸಮಸ್ಯೆಗಳಿಗೆ ಕೂಡ ಪರಿಹಾರಗಳನ್ನು ಒದಗಿಸುತ್ತಿವೆ.ಹೀಗಾಗಿ ಇಲ್ಲಿ ನಡೆಯುವ ಮೇಳದ ಬಗ್ಗೆ ವಿದೇಶಗಳು ಹೆಚ್ಚಿನ ಆಸಕ್ತಿ ಹೊಂದಿವೆ. ಇದೇ ವೇಳೆ ಈ ಮೇಳವು ಹೂಡಿಕೆದಾರರು, ಶೈಕ್ಷಣಿಕ ಸಂಸ್ಥೆಗಳು, ಉದ್ದಿಮೆಗಳು, ಸಂಶೋಧನಾ ಕೇಂದ್ರಗಳು ಹಾಗೂ ಗ್ರಾಹಕರನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಕಾರ್ಯವನ್ನೂ ಮಾಡುತ್ತದೆ. ಆಸಕ್ತರು ರಾಜ್ಯ ಸೇರಿದಂತೆ ಜಗತ್ತಿನ ಯಾವುದೇ ಭಾಗದಿಂದ ಬಿಟಿಎಸ್ ಮೇಳಕ್ಕಾಗಿ ಸೃಜಿಸಲಾಗಿರುವ ಆನ್ ಲೈನ್ ಕೊಂಡಿಗಳ ಮೂಲಕ ಪಾಲ್ಗೊಳ್ಳಬಹುದು.

ಮೇಳದ ವಿಶೇಷಗಳು:
• ಇದೇ ಮೊದಲ ಬಾರಿಗೆ ವರ್ಚ್ಯುಯಲ್ ಮೇಳ
• ರಾಜ್ಯ ಸರ್ಕಾರ ಮಾಹಿತಿ ತಂತ್ರಜ್ಞಾನ ಕಾರ್ಯನೀತಿ 2020-2025, “ಬೆಂಗಳೂರು ವ್ಯಾಪ್ತಿಯಾಚೆ” (ಬಿಯಾಂಡ್ ಬೆಂಗಳೂರು) ಉಪಕ್ರಮ ಜಾರಿಗೊಳಿಸಿರುವ ಸಂದರ್ಭದಲ್ಲಿ ನಡೆಯುತ್ತಿರುವುದು.
• ಕೋವಿಡ್ ಸನ್ನಿವೇಶದಲ್ಲಿ “ಮನೆಯಿಂದಲೇ ಉದ್ಯೋಗ (ಕೆಲಸ)” ಅಥವಾ “ಎಲ್ಲಿರುತ್ತೀರೋ ಅಲ್ಲಿಂದಲೇ ಉದ್ಯೋಗ (ಕೆಲಸ)” ಎಂಬ ಪರಿಕಲ್ಪನೆ ರೂಢಿಗೆ ಬಂದಿರುವ ಸಂದರ್ಭದಲ್ಲಿ ನಡೆಯುತ್ತಿರುವುದು.
• ಕರ್ನಾಟಕದ ನವೋದ್ಯಮಗಳು ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಅಗ್ರಗಣ್ಯ ಸಾಧನೆ ಮಾಡಿ ಪುರಸ್ಕಾರಕ್ಕೆ ಪಾತ್ರವಾಗಿ ಗಮನ ಸೆಳೆದಿರುವ ಸಂದರ್ಭದಲ್ಲಿ ನಡೆಯುತ್ತಿರುವುದು.
• ಕೊರೋನಾ ನಂತರದ ಸನ್ನಿವೇಶದಲ್ಲಿ ಹಲವಾರು ವಿದೇಶಗಳು ಹೂಡಿಕೆಗಾಗಿ ಹೊಸ ಸ್ಥಳಗಳನ್ನು ಹುಡುಕುತ್ತಿರುವ ಸಂದರ್ಭದಲ್ಲಿ ನಡೆಯುತ್ತಿರುವುದು.

Advertisement

Udayavani is now on Telegram. Click here to join our channel and stay updated with the latest news.

Next