ಮಾಗಡಿ: ಮತದಾನದ ಪ್ರಕ್ರಿಯೆ ಮುಗಿದಿದೆ. ಇನ್ನೂ ಫಲಿತಾಂಶದತ್ತ ಮತದಾರರ ಚಿತ್ತ ಎಂಬಂತಾಗಿದೆ. ತಾಲೂಕಿಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಪಕ್ಷದ ಅಭ್ಯರ್ಥಿಗಳ ಅಭಿಮಾನಿಗಳು ಸೋಲು- ಗೆಲುವಿನ ಲೆಕ್ಕಾಚಾರದ ಬೆಟ್ಟಿಂಗ್‌ಗೆ ಇಳಿದಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಮತ್ತು ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ನಡುವೆ ಕಳೆದ 15 ದಿನಗಳಿಂದಲೂ ಅವರವರ ಸಾಧನೆ, ಪ್ರಣಾಳಿಕೆ ಕುರಿತು ಮತಯಾಚಿಸಿದ್ದರು. ಮತಕ್ಕಾಗಿ ಇನ್ನಿಲ್ಲದ ಕಸರತ್ತುಗಳು ನಡೆದು ಹೋದವು. ಅವರವರ ಪಕ್ಷದ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಗೆಲುವಿಗೆ ಮನೆ ಮನೆಗೆ ತೆರಳಿ ಮತಯಾಚಿಸಿದ್ದರು. ಮತಕ್ಕಾಗಿ ಇಲ್ಲಸಲ್ಲದ ಆರೋಪದ ನಡುವೆಯೂ ಮತದಾನದ ಪ್ರಕ್ರಿಯೆ ಗುರುವಾರ ಮುಕ್ತಯವಾಗಿದೆ.
ಮಾಗಡಿಯಲ್ಲಿ ಶೇ.70ರಷ್ಟು ಮತದಾನ: ಮಾಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟಾರೆ ಶೇ.70ರಷ್ಟು ಮತದಾನವಾಗಿದೆ. ಬಹುತೇಕ ಮಂದಿ ಮತದಾರರಿಂದ ಈ ಬಾರಿ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಗೆಲ್ಲುತ್ತಾರೆ ಎಂಬ ಲೆಕ್ಕಾಚಾರದ ಮಾತುಗಳು ಕೇಳುಬರುತ್ತಿದೆ. ಮತ್ತೂಂದೆಡೆ ಮೋದಿ ಪ್ರಧಾನಿಯಾಗಬೇಕು ಎಂಬ ಚಿಂತನೆಯಿಂದಲೇ ವಿಶೇಷವಾಗಿ ಹೆಚ್ಚು ಯುವಕರು, ಮಹಿಳೆಯರು ಬಿಜೆಪಿ ಅಭ್ಯರ್ಥಿಗೆ ಮತಹಾಕಿದ್ದಾಗಿ ಹೇಳಿಕೊಳ್ಳುತ್ತಾ, ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಅಲ್ಪಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂಬ ಲೆಕ್ಕಾಚಾರ ಹಾಕಿಕೊಂಡು ಬೆಟ್ಟಿಂಗ್ ಕಟ್ಟಿ ಎಂದು ನೋಡಿ ಎಂದು ಬೆಟ್ಟಿಂಗ್ ದಂಧೆಗೆ ಇಳಿದಿದ್ದಾರೆ. ಕಲ್ಯಾಗೇಟ್‌ನಲ್ಲಿ ಒಬ್ಬರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಗೆಲ್ಲುತ್ತಾರೆ ಎಂದು 3 ಸಾವಿರ ಬೆಟ್ಟಿಂಗ್ ಕಟ್ಟಿದ್ದಾರೆ. ಅಶ್ವತ್ಥನಾರಾಯಣ ಗೆದ್ದರೆ 10 ಸಾವಿರ ಬರುತ್ತದೆ. ಸೋತರೆೆ 3 ಸಾವಿರ ಹೋಗುತ್ತದೆ ನೋಡೇ ಬಿಡೋಣ ಎಂದು ಬೆಟ್ಟಿಂಗ್ ಕಟ್ಟಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
ಮತ್ತೂಬ್ಬರು ಡಿ.ಕೆ.ಸುರೇಶ್ ಡಿಕೆಸು ಚಾರಿಟಬಲ್ ಟ್ರಸ್ಟ್‌ನಿಂದ ಶುದ್ಧ ಕುಡಿಯುವ ನೀರಿನ ಘಟನ ಸ್ಥಾಪನೆ, ಹೇಮಾವತಿ ನೀರಾವರಿ,ಯೋಜನೆ, ಹನಿ ನೀರಾವರಿ, ನರೇಗಾ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಿದ್ದಾರೆ. ಮತ್ತೂಮ್ಮೆ ಅವರೇ ಗೆಲ್ಲಬೇಕು ಎಂದು ಹೆಚ್ಚಿನ ಮತದಾರರು ಡಿ.ಕೆ.ಸುರೇಶ್‌ಗೆ ಮತಹಾಕಿದ್ದಾರೆ. ಕನಿಷ್ಠ 1 ಲಕ್ಷದ ಅಧಿಕ ಅಂತರದಲ್ಲಿ ಡಿ.ಕೆ.ಸುರೇಶ್ ಗೆಲುವು ಸಾಧಿಸುತ್ತಾರೆ ಎಂದು ಒಂದು ಲಕ್ಷದವರೆಗೆ ಬೆಟ್ಟಿಂಗ್ ಕಟ್ಟಿಕೊಂಡಿದ್ದಾರೆ.
ಕ್ಷೇತ್ರ ಬಿಟ್ಟ ನಾಯಕರು: ಗುರುವಾರವಷ್ಟೆ ಮತದಾನ ಪ್ರಕ್ರಿಯೆ ಮುಗಿದಿದೆ. ಕಳೆದ 15 ದಿನಗಳಿಂದಲೂ ಮತದಾರರನ್ನು ಎಡ ತಾಕುತ್ತಿದ್ದ ಶಾಸಕ ಎ.ಮಂಜು ಮತ್ತು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ,ಬಹುತೇಕ ಜಿಪಂ ಸದಸ್ಯರು ಮತದಾನ ಮುಗಿದ ಕೂಡಲೇ ಕ್ಷೇತ್ರದಲ್ಲಿ ಎಲ್ಲೂ ಕಾಣಿಸಿಕೊಂಡಿಲ್ಲ. ಕ್ಷೇತ್ರ ಬಿಟ್ಟು ಬೇರೆಡೆ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲು ಹೋಗಿದ್ದಾರಂತೆ. ಮುಖಂಡರು ಸಹ ಕ್ಷೇತ್ರ ಬಿಟ್ಟು ಪ್ರವಾಸ ತೆರಳಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಚುನಾವಣೆ ಗುಂಗಿನಲ್ಲಿದ್ದ ಮಹುತೇಕ ಮತದಾರರು ಸಹ ಮೌನಕ್ಕೆ ಶರಣಾಗಿದ್ದಾರೆ. ಕೆಲವು ಮತದಾರರೂ ಮೂರು ದಿನ ರಜಾ ಇರುವುದರಿಂದ ಪುಣ್ಯ ಕ್ಷೇತ್ರಗಳತ್ತ ಪ್ರವಾಸ ಕೈಗೊಂಡಿದ್ದಾರಂತೆ.
ಏನೇ ಆದರೂ ಚುನಾವಣೆ ಕಾವು ಮುಗಿಯುತ್ತಿದ್ದಂತೆ ಕ್ಷೇತ್ರದಲ್ಲಿ ಫಲಿತಾಂಶದ ಚರ್ಚೆಗಳ ಲೆಕ್ಕಾಚಾರದ ಗುಂಗಿಲ್ಲಿರುವುದಂತು ಸತ್ಯ. ಏನೇ ಆದರೂ ಅಭ್ಯರ್ಥಿಗಳ ಸೋಲು, ಗೆಲುವಿನ ಲೆಕ್ಕಚಾರದ ಫಲಿತಾಂಶಕ್ಕಾಗಿ ಮೇ 23ರವರೆವಿಗೆ ಕಾಯಲೇಬೇಕಿದೆ. ಸದ್ಯಕ್ಕೆ ಮತಯಂತ್ರದಲ್ಲಿ ತಾವು ಹಾಕಿರುವ ಮತದಾನ ಅಡಕವಾಗಿದೆ.