Advertisement

ಬೆಂ.ಗಾ. ಕ್ಷೇತ್ರದಲ್ಲಿ ಠೇವಣಿ ಇಲ್ಲದವರೇ ಹೆಚ್ಚು

03:59 PM Apr 12, 2019 | Team Udayavani |

ರಾಮನಗರ: ಅಸ್ತಿತ್ವ ಕಳೆದುಕೊಂಡಿರುವ ಕನಕಪುರ ಲೋಕಸಭಾ ಕ್ಷೇತ್ರ ಮತ್ತು ಹಾಲಿ ಇರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಠೇವಣಿ ಕಳೆದು ಕೊಂಡಿರುವವರ ಪೈಕಿ ಪಕ್ಷೇತರರೇ ಹೆಚ್ಚು. ಈ ಹಿಂದೆ ಇದ್ದ ಕನಕಪುರ ಲೋಕಸಭಾ ಕ್ಷೇತ್ರ ಮತ್ತು ಹಾಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ಇಲಿಯವರೆಗೆ 13 ಸಾರ್ವತ್ರಿಕ ಚುನಾವಣೆಗಳು ನಡೆದಿವೆ. 2 ಬಾರಿ ಉಪಚುನಾವಣೆಗಳು ನಡೆದಿವೆ.

Advertisement

ಕಾನೂನು ಏನನ್ನುತ್ತೆ?: ಪ್ರತಿ ಬಾರಿ ನಡೆಯುವ ಚುನಾವಣೆಯಲ್ಲೂ ಚಲಾವಣೆಯಾದ ಒಟ್ಟು ಮತದಾನದಲ್ಲಿ ಮಾನ್ಯವಾಗಿರುವ ಮತಗಳ ಪೈಕಿ ಆರನೇ ಒಂದು ಭಾಗದಷ್ಟು ಮತಗಳನ್ನು ಅಭ್ಯರ್ಥಿಗಳು ಪಡೆಯಬೇಕು. ಹಾಗೊಮ್ಮೆ ಪಡೆಯದಿದ್ದರೆ ಅವರ ಠೇವಣಿ ನಷ್ಟವಾಗುತ್ತದೆ. ಕನಕಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಪ್ರಥಮಚುನಾವಣೆಯಲ್ಲಿ 2.66 ಮತಗಳು ಮಾನ್ಯವಾಗಿದ್ದವು. ಠೇವಣಿ ಉಳಿಸಿಕೊಳ್ಳಲು ಅಭ್ಯರ್ಥಿಗಳು 44,396 ಮತಗಳನ್ನು ಪಡೆಯಬೇಕಾಗಿತ್ತು. ಪಕ್ಷೇತರ ಎಂ.ಬಿ.ದಾಸ್‌ 73,198 ಮತ ಪಡೆದು ಠೇವಣಿ ಉಳಿಸಿಕೊಂಡಿದ್ದರು. ಇತರ ನಾಲ್ವರು ಅಭ್ಯರ್ಥಿಗಳು ಠೇವಣಿ ನಷ್ಟ ಮಾಡಿಕೊಂಡಿದ್ದರು. 1971ರಲ್ಲಿ 3.05 ಲಕ್ಷ ಮತಗಳು ಮಾನ್ಯಗೊಂಡಿದ್ದವು. ಕಾಂಗ್ರೆಸ್‌ ಅಭ್ಯರ್ಥಿ ಸಿ.ಕೆ. ಜಾಫ‌ರ್‌ ಷರೀಫ್ ಯಶಸ್ಸು ಸಾಧಿಸಿದ್ದರು. ಎನ್‌ಸಿಒ ಅಭ್ಯರ್ಥಿ ಎಂ.ವಿ.ರಾಜಶೇಖರನ್‌ ಠೇವಣಿ ಉಳಿಸಿಕೊಂಡರು

ಉಳಿದವರು ಠೇವಣಿ ನಷ್ಟ ಅನುಭವಿಸಿದ್ದರು. 1977ರ ಚುನಾವಣೆಯಲ್ಲಿ 4.07 ಲಕ್ಷ ಮತಗಳು ಮಾನ್ಯಗೊಂಡಿದ್ದವು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಂ.ವಿ.ಚಂದ್ರಶೇಖರ ಮೂರ್ತಿ ವಿಜೇತರಾದರು. ಬಿಎಲ್‌ಡಿ ಅಭ್ಯರ್ಥಿ ಎಂ.ವಿ.ರಾಜಶೇಖರನ್‌ ಈ ಚುನಾವಣೆಯಲ್ಲೂ ಠೇವಣಿ ಉಳಿಸಿಕೊಂಡರು. ಪಕ್ಷೇತರ ಅಭ್ಯರ್ಥಿಗಳು ಠೇವಣಿ ನಷ್ಟವಾಗಿತ್ತು. 1980ರಲ್ಲಿ 4.72 ಮತಗಳು ಮಾನ್ಯವಾಗಿದ್ದವು. ಕಾಂಗ್ರೆಸ್‌ ಅಭ್ಯರ್ಥಿ ಎಂ.ವಿ. ಚಂದ್ರಶೇಖರ ಮೂರ್ತಿ
ವಿಜೇತರಾಗಿದ್ದರು. ಎಂ.ವಿ.ರಾಜಶೇಖರನ್‌ ಹೊರತು ಪಡಿಸಿ ಉಳಿದ 7 ಅಭ್ಯರ್ಥಿಗಳು ಠೇವಣಿ ನಷ್ಟ ಅನುಭವಿಸಿದರು. 1984ರ ಚುನಾವಣೆಯಲ್ಲಿ 6.38 ಲಕ್ಷ ಮತಗಳು ಮಾನ್ಯವಾಗಿದ್ದವು. ಸ್ಪರ್ಧಿಸಿದ 11 ಅಭ್ಯರ್ಥಿಗಳ ಪೈಕಿ 9 ಮಂದಿ ಠೇವಣಿ ನಷ್ಟ ಅನುಭವಿಸಿದ್ದರು. 1989ರಲ್ಲಿ 8.91 ಲಕ್ಷ ಮತಗಳು
ಮಾನ್ಯಗೊಂಡಿದ್ದವು. ಈ ಚುನಾವಣೆಯಲ್ಲಿ ಮೂವರಿಗೆ ಠೇವಣಿ ನಷ್ಟವಾಗಿತ್ತು. 1991ರ ಚಲಾವಣೆಯಾದ ಮತಗಳ ಪೈಕಿ 7.92 ಮತಗಳು ಮಾನ್ಯಗೊಂಡಿದ್ದವು. 8 ಮಂದಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು. 1996ರ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ 10.45 ಲಕ್ಷ ಮತಗಳು ಮಾನ್ಯಗೊಂಡಿದ್ದವು. 16 ಮಂದಿ ಠೇವಣಿ ಕಳೆದುಕೊಂಡಿದ್ದರು. 1998ರ ಚುನಾವಣೆಯಲ್ಲಿ 12.06 ಲಕ್ಷ ಮತಗಳು ಮಾನ್ಯವಾಗಿದ್ದವು. 4 ಮಂದಿಗೆ ಠೇವಣಿ ನಷ್ಟವಾಗಿತ್ತು.

ಎಚ್‌ಡಿಕೆಗೂ ಠೇವಣಿ ಲಾಸ್‌: 1999ರ ಚುನಾವಣೆಯಲ್ಲಿ 12.33 ಲಕ್ಷ ಮತಗಳು ಮಾನ್ಯವಾಗಿದ್ದವು. ಆಗ ಸ್ಪರ್ಧಿಸಿದ್ದ ಎಚ್‌.ಡಿ.ಕುಮಾರಸ್ವಾಮಿ 1.62 ಲಕ್ಷ ಮತಗಳನ್ನು ಪಡೆದುಕೊಂಡಿದ್ದರು. ಠೇವಣಿ ಉಳಿಸಿಕೊಳ್ಳಲು 2.05 ಲಕ್ಷ ಮತಗಳನ್ನು ಪಡೆಯಬೇಕಿತ್ತು. ಹೀಗಾಗಿ ಅವರು ಠೇವಣಿ ನಷ್ಟ ಮಾಡಿಕೊಂಡರು. ಇದೇ ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಸಹ ಠೇವಣಿ ನಷ್ಟ ಅನುಭವಿಸಿದರು. 2004ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ತೇಜಸ್ವಿನಿ 5.84 ಲಕ್ಷ ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ಇವರ ವಿರುದ್ಧ ಸ್ಪರ್ಧಿಸಿದ್ದ ಎಚ್‌.ಡಿ.ದೇವೇಗೌಡ ಸೋಲುಂಡರು. ಆದರೆ, 4.62 ಲಕ್ಷ ಮತಗಳನ್ನು ಪಡೆದುಕೊಂಡಿದ್ದರಿಂದ ಠೇವಣಿ ಉಳಿಸಿಕೊಂಡರು. ಆದರೆ, ಪಕ್ಷೇತರರು ಠೇವಣಿ ನಷ್ಟ ಅನುಭವಿಸಿದ್ದರು.

ಕಾಂಗ್ರೆಸ್‌ನ ತೇಜಸ್ವಿನಿಗೆ ಠೇವಣಿ ನಷ್ಟ: 2008ರಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಪ್ರಥಮ ಬಾರಿಗೆ 2009ರಲ್ಲಿ ಚುನಾವಣೆ ನಡೆಯಿತು. ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ.ಕುಮಾಸ್ವಾಮಿ, ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್‌ ಮತ್ತು ಕಾಂಗ್ರೆಸ್‌ ನಿಂದ ತೇಜಸ್ವಿನಿ ಗೌಡ ಕಣದಲ್ಲಿದ್ದರು. ಠೇವಣಿ ಉಳಿವಿಗೆ 3.17 ಲಕ್ಷ ಮತ ಪಡೆಯಬೇಕಿತ್ತು. ಎಚ್‌ .ಡಿ.ಕುಮಾರಸ್ವಾಮಿ 4.93 ಲಕ್ಷ ಮತಗಳನ್ನು ಪಡೆದು ಯಶಸ್ವಿಯಾದರು. ಬಿಜೆಪಿಯ ಸಿ.ಪಿ.ಯೋಗೇಶ್ವರ 3.63 ಲಕ್ಷ ಮತಗಳನ್ನು ಗಳಿಸಿದರು. ಆದರೆ, ಕಾಂಗ್ರೆಸ್‌ ನ ತೇಜಸ್ವಿನಿ ಗೌಡ ಅವರು 1.92 ಲಕ್ಷ ಮತ ಪಡೆದುಕೊಂಡಿದ್ದರು. ಇವರು ಸೇರಿದಂತೆ 7 ಮಂದಿಯ ಠೇವಣಿ ನಷ್ಟ ಅನುಭವಿಸಿದ್ದರು.2013ರ ಉಪಚುನವಣೆಯಲ್ಲಿ ಕಾಂಗ್ರೆಸ್‌ನ ಡಿ.ಕೆ. ಸುರೇಶ್‌ 5.78 ಮತಗಳನ್ನು ಪಡೆದು ಜಯಗಳಿಸಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ 4.41 ಲಕ್ಷ ಮತ ಪಡೆದುಕೊಂಡಿದ್ದರು. 10 ಮಂದಿ ಇತರ ಅಭ್ಯರ್ಥಿಗಳಿಗೆ ಠೇವಣಿ ನಷ್ಟವಾಗಿತ್ತು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಠೇವಣಿ ಉಳಿವಿಗೆ 2.42 ಲಕ್ಷ ಮತ ಪಡೆಯಬೇಕಾಗಿತ್ತು. ಕಾಂಗ್ರೆಸ್‌ನ ಡಿ.ಕೆ.ಸುರೇಶ್‌ 6.52 ಲಕ್ಷ ಮತಗಳನ್ನು ಪಡೆದುಕೊಂಡಿದ್ದು, ಬಿಜೆಪಿಯ ಮುನಿರಾಜು ಗೌಡ 4.21 ಲಕ್ಷ ಮತ ಪಡೆದುಕೊಂಡಿದ್ದರು. ಜೆಡಿಎಸ್‌ನ ಆರ್‌.ಪ್ರಭಾಕರ ರೆಡ್ಡಿ 3.17 ಮತಗಳನ್ನು ಗಳಿಸಿದ್ದರು. ಇವರನ್ನು ಹೊರತು ಪಡಿಸಿ ಎಎಪಿಯ ರವಿ ಕೃಷ್ಣಾ ರೆಡ್ಡಿ ಸೇರಿದಂತೆ ಸ್ಪರ್ಧಿಸಿದ್ದ 11 ಮಂದಿ ಅಭ್ಯರ್ಥಿಗಳಿಗೆ ಠೇವಣಿ ನಷ್ಟವಾಗಿತು

Advertisement
Advertisement

Udayavani is now on Telegram. Click here to join our channel and stay updated with the latest news.

Next