ಬೆಂಗಳೂರು: ಬಾಡಿಗೆಗೆ ಕ್ಯಾಬ್ ಚಲಾಯಿಸುವ ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಬೈಕ್‌ನಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಕ್ಯಾಬ್ ಚಾಲಕನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಚೆನ್ನೈ ಮೂಲದ ಸತೀಶ್ (34) ಬಂಧಿತ. ಆರೋಪಿಯಿಂದ 90 ಗ್ರಾಂ ಚಿನ್ನ, 1 ಲ್ಯಾಪ್ ಟಾಪ್ ಜಪ್ತಿ ಮಾಡಲಾಗಿದೆ.
ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದ ಸತೀಶ್, ಆ್ಯಪ್ ಮೂಲಕ ಬುಕ್ಕಿಂಗ್ ಬಂದರೆ ಕ್ಯಾಬ್ ತೆಗೆದುಕೊಂಡು ಬಾಡಿಗೆಗೆ ಹೋಗುತ್ತಿದ್ದ. ಆ ವೇಳೆ ರಸ್ತೆಯಲ್ಲಿದ್ದ ಬೀಗ ಹಾಕಿರುವ ಮನೆಗಳು, ಯಾರೂ ಇಲ್ಲದಿರುವ ಮನೆಗಳನ್ನು ಗಮನಿಸುತ್ತಿದ್ದ. ನಂತರ ತನ್ನ ಬೈಕ್‌ನಲ್ಲಿ ಬಂದು ಮನೆಗೆ ಕನ್ನ ಹಾಕಿ ಪರಾರಿಯಾಗುತ್ತಿದ್ದ. ಏ.16ರಂದು ಕಲ್ಯಾಣ ನಗರದ ಎಚ್‌ಆರ್‌ಬಿಆರ್ ಲೇಔಟ್‌ಗೆ ಬಾಡಿಗೆಗೆ ತೆರಳಲು ಕಾರು ಬುಕ್ಕಿಂಗ್ ಮಾಡಿದ್ದರು. ಕೆಲಸ ಮುಗಿಸಿ ಬರುವಾಗ ಪ್ರಮೋದ್ ಭಟ್ ಎಂಬುವರ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ್ದ. ನಂತರ ಮನೆಯೊಳಗೆ ನುಗ್ಗಿ ಕನ್ನ ಹಾಕಿದ್ದ. ಈ ಬಗ್ಗೆ ಬಾಣಸವಾಡಿ ಪೊಲೀಸರಿಗೆ ಮನೆ ಮಾಲೀಕ ಪ್ರಮೋದ್ ಭಟ್ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಮನೆಯ ಪಕ್ಕದಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ, ಕಪ್ಪುಬಣ್ಣದ ಪಲ್ಸರ್ ಬೈಕ್ ನಲ್ಲಿ ಬಂದಿದ್ದ ಸತೀಶ್ ಮುಖಚರಹೆ ಪತ್ತೆಯಾಗಿತ್ತು. ಬೈಕ್‌ನ ನಂಬರ್ ಪ್ಲೇಟ್ ಸಿಸಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಕಾಣದ ಹಿನ್ನೆಲೆಯಲ್ಲಿ ಪೊಲೀಸರು ಆರ್.ಟಿ.ಒ ಸಹಕಾರ ಪಡೆದು ಆರೋಪಿ ಸತೀಶ್ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.
ಆರ್‌ಟಿಓದಿಂದ ಸಾವಿರಾರು ನಂಬರ್‌ಗಳನ್ನು ಪಡೆದು ಅವುಗಳನ್ನು ಕಪ್ಪುಬಣ್ಣದ ಪಲ್ಸರ್ ಬೈಕ್‌ಗೆ ಹೋಲಿಕೆ ಮಾಡಿದಾಗ ಆರೋಪಿ ಸತೀಶ್ ಬಂದಿದ್ದ ಬೈಕ್‌ನ ಮಾಹಿತಿ ಸಿಕ್ಕಿತ್ತು.
ಇದರ ಜಾಡು ಹಿಡಿದು ಹೊರಟಾಗ ಸತೀಶ್ ಬೈಕ್ ಅನ್ನು ಸೆಕೆಂಡ್ ಹ್ಯಾಂಡ್ ಶೂರೂಮ್‌ಗೆ ಮಾರಾಟ ಮಾಡಿರುವುದು ಪತ್ತೆಯಾಗಿತ್ತು. ಆ ಶೋ ರೂಂನಲ್ಲಿದ್ದ ಮತ್ತೂಬ್ಬ ವ್ಯಕ್ತಿ ಇದೇ ಬೈಕ್ ಅನ್ನು ಖರೀದಿಸಿರುವುದು ಕಂಡು ಬಂದಿತ್ತು. ಕೊನೆಗೆ ಶೋ ರೂಂನಲ್ಲಿ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಲಾಗಿದೆ.
ಮನೆಗಳ್ಳ ಸೆರೆ ಸಿಕ್ಕಿದ್ದು ಹೇಗೆ? ಕಪ್ಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದು ಕೃತ್ಯ, ಕ್ಯಾಮೆರಾದಲ್ಲಿ ದೃಶ್ಯ ಸೆರೆ ನಂಬರ್ ಪ್ಲೇಟ್ ಸ್ಪಷ್ಟವಾಗಿ ಕಾಣದ ಹಿನ್ನೆಲೆಯಲ್ಲಿ ಆರ್‌ಟಿಓಗೆ ಮೊರೆ ಸಾವಿರಾರು ನಂಬರ್ ಪ್ಲೇಟ್ ಪರಿಶೀಲಿಸಿದಾಗ ಕಳ್ಳನ ಗುರುತು ಪತ್ತೆ