Advertisement

ವಿಶ್ಲೇಷಣೆ: ಬೆಂಗಳೂರು ಗಲಭೆ-ಆರೋಪಿಗಳಿಂದಲೇ ನಷ್ಟ ವಸೂಲಿ ತುಂಬಾ ಸುಲಭವಲ್ಲ ಯಾಕೆ?

06:22 PM Aug 20, 2020 | Nagendra Trasi |

ಬೆಂಗಳೂರು:ರಾಜಧಾನಿಯ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾಗೂ ಪೊಲೀಸ್ ಠಾಣೆಗೆ ಆಗಿರುವ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ ಇದೀಗ ನಷ್ಟ ವಸೂಲಿ ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಯತೊಡಗಿದೆ. ಯಾರು ಗಲಭೆಯಲ್ಲಿ ಶಾಮೀಲಾಗಿದ್ದಾರೋ ಅವರ ಆಸ್ತಿಯ ಮುಟ್ಟುಗೋಲು ಮತ್ತು ಹರಾಜು ಪ್ರಕ್ರಿಯೆ ಕ್ಲಿಷ್ಟಕರವಾಗಿದೆ ಎಂದು ವರದಿ ವಿಶ್ಲೇಷಿಸಿದೆ.

Advertisement

ಕಾನೂನುಬದ್ಧವಾಗಿ ಆಸ್ತಿಯನ್ನು ಖರೀದಿಸುವುದನ್ನು ಗುರುತಿಸುವುದು ಕೂಡಾ ಸುಲಭದ ಕೆಲಸವಲ್ಲ. ಯಾಕೆಂದರೆ ಬಹುತೇಕ ಆರೋಪಿಗಳು ಜಾಗದ ಮಾಲೀಕರೇ ಅಲ್ಲ. ಯಾರು ಸ್ವಂತ ಮನೆ, ಆಸ್ತಿ ಹೊಂದಿದ್ದಾರೋ ಅವರ ಆಸ್ತಿಯನ್ನು ವಶಪಡಿಸಿಕೊಂಡು ಮಾರಾಟ ಮಾಡಬಹುದಾಗಿದೆ.

ಬಂಧಿತರದಲ್ಲಿ ಹಲವರು ಯಾವುದೇ ಸ್ವಂತ ಸ್ಥಳ, ಆಸ್ತಿ ಹೊಂದಿಲ್ಲ. ಇನ್ನು ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರದೇಶದಲ್ಲಿ ಆಸ್ತಿ, ಸ್ವಂತ ಮನೆ ಹೊಂದಿದವರಿಂದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಗೈದಿದ್ದಕ್ಕೆ ಯಾವುದೇ ಮುಚ್ಚುಮರೆ ಇಲ್ಲದೇ ನಷ್ಟ ವಸೂಲಿ ಮಾಡಬಹುದಾಗಿದೆ. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಹಾಗೂ ಎರಡು ಪೊಲೀಸ್ ಠಾಣೆಗಳ ಮೇಲೆ ಉದ್ರಿಕ್ತ ಗುಂಪು ದಾಳಿ ನಡೆಸಿ ಬೆಂಕಿ ಹಚ್ಚಿತ್ತು. 130 ವಾಹನಗಳು ಬೆಂಕಿಗೆ ಆಹುತಿಯಾಗಿದ್ದವು. ಹಲವಾರು ಪೊಲೀಸರು ಗಾಯಗೊಂಡಿದ್ದರು.

ಪ್ರಕರಣದಲ್ಲಿ ಮುಖ್ಯ ಸಮಸ್ಯೆ ಏನೆಂದರೆ ನಾವು ಬಂಧಿಸಿರುವ ಬಹುತೇಕ ಆರೋಪಿಗಳ ಹೆಸರಲ್ಲಿ ಯಾವುದೇ ಆಸ್ತಿ ಇಲ್ಲ. ಕೆಲವರು ಸ್ವಂತ ಆಸ್ತಿ ಹೊಂದಿದ್ದಾರೆ. ಆದರೆ ಗಲಭೆ ಸಂದರ್ಭದಲ್ಲಿ ಇವರು ಆಸ್ತಿ ಹಾನಿ ಮಾಡುವಲ್ಲಿ ಶಾಮೀಲಾಗಿದ್ದರು ಎಂಬುದನ್ನು ಸಾಬೀತುಪಡಿಸುವುದು ಕಷ್ಟ ಎಂಬುದು ಪ್ರಕರಣದ ತನಿಖೆ ನಡೆಸುತ್ತಿರುವ ಡಿಜೆ ಹಳ್ಳಿ ಪೊಲೀಸ್ ಅಧಿಕಾರಿ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.

Advertisement

ಗಲಭೆಕೋರರಿಂದಲೇ ನಷ್ಟ ವಸೂಲಿ ಮಾಡುವ ಬಗ್ಗೆ ಕ್ಲೇಮ್ ಕಮಿಷನರ್ ಅವರನ್ನು ನೇಮಕ ಮಾಡುವಂತೆ ಕೋರಿ ಕರ್ನಾಟಕ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ. ಕ್ಲೇಮ್ ಕಮಿಷನರ್ ಈ ಪ್ರಕ್ರಿಯೆಯಲ್ಲಿ ಯಾರು ಹೊಣೆಗಾರರು ಅಂತ ಗುರುತಿಸಿ ಅವರಿಂದ ನಷ್ಟ ವಸೂಲಿ ಮಾಡುವ ಬಗ್ಗೆ ವರದಿ ನೀಡಬೇಕು. ಸುಪ್ರೀಂಕೋರ್ಟ್ ನಿಯಮಾವಳಿ ಪ್ರಕಾರ ಹೈಕೋರ್ಟ್ ಇಂತಹ ಅಧಿಕಾರಿಯನ್ನು ನೇಮಕ ಮಾಡಬೇಕು. ಆದರೆ ಪ್ರಕರಣದಲ್ಲಿ ಆರೋಪವನ್ನು ಸಾಬೀತುಪಡಿಸುವುದು ಸರ್ಕಾರದ ಹೊಣೆಗಾರಿಕೆಯಾಗಿರುತ್ತದೆ ಮತ್ತು ಆಸ್ತಿಯನ್ನು ಗುರುತಿಸಿ ವಶಪಡಿಸಿ ಹರಾಜು ಹಾಕುವುದು ಸರ್ಕಾರದ ಕೆಲಸವಾಗಿದೆ. ಅಷ್ಟೇ ಅಲ್ಲ ಈ ಪ್ರಕ್ರಿಯೆಯನ್ನು ಭೂ ಕಂದಾಯ ಕಾಯ್ದೆ ಹಾಗೂ ಇತರ ಕಾನೂನುಗಳ ಪ್ರಕಾರ ನಡೆಸಬೇಕಾಗುತ್ತದೆ ಎಂದು ವರದಿ ವಿವರಿಸಿದೆ.

ಆಸ್ತಿಯನ್ನು ಹೊರತುಪಡಿಸಿ, ಆಸ್ತಿ ರೀತಿಯಲ್ಲಿಯೇ ಶೇರು ಸರ್ಟಿಫಿಕೇಟ್, ಕಾನೂನು ಬದ್ಧ ಬಾಂಡ್ಸ್ ಗಳನ್ನು ಪರಿಹಾರ ರೂಪವಾಗಿ ವಶಪಡಿಸಿಕೊಳ್ಳಬಹುದಾಗಿದೆ. ಆದರೆ ಅದು ಆರೋಪಿಯ ಹೆಸರಿನಲ್ಲಿ ಇರಬೇಕಾಗುತ್ತದೆ. ಪೊಲೀಸರು ಸುಮಾರು 400 ಮಂದಿಯನ್ನು ಬಂಧಿಸಿದ್ದಾರೆ. ಕೆಲವು ಅಧಿಕಾರಿಗಳ ಪ್ರಕಾರ ಪ್ರತಿಯೊಬ್ಬ ಶಂಕಿತನ ಮೇಲಿನ ಆರೋಪ ಸಾಬೀತುಪಡಿಸುವುದು ಕಷ್ಟಕರವಾಗುತ್ತದೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಕೆಲವು ಗಲಭೆಕೋರರನ್ನು ಇನ್ನಷ್ಟೇ ಬಂಧಿಸಬೇಕಾಗಿದೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತನಿಖೆ ಹಾಗೂ ನಷ್ಟ ವಸೂಲಿ ಬಗ್ಗೆ ವಿಶ್ವಾಸದಿಂದ ಮಾತನಾಡಿದ್ದು, ಘಟನೆಗೆ ಸಂಬಂಧಿಸಿದಂತೆ ಹಲವು ವ್ಯಕ್ತಿಗಳು ಶಾಮೀಲಾಗಿರುವ ಬಗ್ಗೆ ನಮ್ಮ ಬಳಿ ಬಲವಾದ ಸಾಕ್ಷ್ಯವಿದೆ. ಮೂಲಭೂತವಾದ ಸಂಘಟನೆ ಜತೆ ಕೈಜೋಡಿಸಿರುವ ಬಗ್ಗೆಯೂ ಸುಳಿವು ಸಿಕ್ಕಿದೆ. ಅಷ್ಟೇ ಅಲ್ಲ ಅಮಾಯಕರಿಗೆ ಶಿಕ್ಷೆ ಖಂಡಿತ ಆಗಲ್ಲ. ಆದರೆ ಗಲಭೆಕೋರರ ಆಸ್ತಿ ವಶಪಡಿಸಿಕೊಂಡು ನಷ್ಟ ವಸೂಲಿ ಮಾಡುವುದು ನಿಶ್ಚಿತ ಎಂದು ತಿಳಿಸಿದ್ದರು.

ಆಸ್ತಿ ನಷ್ಟ ವಸೂಲಿ ಸಿದ್ದರಾಮಯ್ಯ ಹೇಳಿದ್ದೇನು?

ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗಲಭೆಕೋರರಿಂದಲೇ ಆಸ್ತಿ ಪಾಸ್ತಿ ಹಾನಿಯ ನಷ್ಟ ವಸೂಲಿ ಮಾಡುವ ರಾಜ್ಯ ಸರ್ಕಾರ ನಿರ್ಧಾರವನ್ನು ಸ್ವಾಗತಿಸುವುದಾಗಿ ಹೇಳಿದ್ದರು. ಆದರೆ ಇದನ್ನು ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕು ಎಂದು ತಿಳಿಸಿದ್ದಾರೆ. ಇಂತಹ ಗಲಭೆಯಲ್ಲಿ ಆಸ್ತಿ ಪಾಸ್ತಿ ಹಾನಿ ಮಾಡಿದ ಎಲ್ಲಾ ಸಮುದಾಯದವರಿಂದಲೂ ವಸೂಲಿ ಮಾಡಬೇಕು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“ಕಳೆದ 30 ವರ್ಷಗಳ ಹಿಂದಿನಿಂದ ಈವರೆಗೆ ನಡೆದು ಬಂದ ಎಲ್ಲಾ ಕೋಮು ಹಾಗೂ ಇತರ ಹಿಂಸಾಚಾರ ಪ್ರಕರಣಗಳಲ್ಲಿ ಸಂಭವಿಸಿದ ನಷ್ಟವನ್ನು ಸರ್ಕಾರ ವಸೂಲಿ ಮಾಡಬೇಕು ಎಂದು ನಾನು ಸರ್ಕಾರಕ್ಕೆ ಒತ್ತಾಯಿಸುವುದಾಗಿ” ತಿಳಿಸಿದ್ದರು.

ಈ ಹಿಂದೆಯೂ ಡಿಜಿ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಗಲಭೆ ಸಂಭವಿಸಿತ್ತು. ಇದೊಂದು ಸೂಕ್ಷ್ಮ ಪ್ರದೇಶ ಎಂದು ಗೊತ್ತಿದ್ದರೂ ಸರ್ಕಾರ ಹಾಗೂ ಪೊಲೀಸರು ನಿರ್ಲಕ್ಷ್ಯ ವಹಿಸಿರುವುದಾಗಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಈ ಪ್ರಕರಣವನ್ನು ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

(ಮಾಹಿತಿ: ಟೈಮ್ಸ್ ಆಫ್ ಇಂಡಿಯಾ ಡಾಟ್ ಕಾಮ್)

Advertisement

Udayavani is now on Telegram. Click here to join our channel and stay updated with the latest news.

Next