Advertisement

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

08:27 AM Mar 19, 2024 | Team Udayavani |

ಬೆಂಗಳೂರು: ಹಿಂದಿ ಭಜನೆ ಹಾಕಿ ಧ್ವನಿವರ್ಧಕ ಶಬ್ಧ ಹೆಚ್ಚಿಸಿದ ವಿಚಾರಕ್ಕೆ ಮೊಬೈಲ್‌ ರಿಪೇರಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಮೂವರು ಯುವಕರನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಮತ್ತೂಂದೆಡೆ ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಸಂಸದ ತೇಜಸ್ವಿ ಸೂರ್ಯ ಮತ್ತು ಪಿ.ಸಿ.ಮೋಹನ್‌ ಹಲ್ಲೆಗೊಳಗಾದ ಯುವಕನನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.

ಕುಂಬಾರಪೇಟೆ ನಿವಾಸಿಗಳಾದ ಸುಲೇಮಾನ್‌ (27), ಶಹನವಾಜ್‌(27) ಮತ್ತು ರೋಹಿತ್‌(28) ಬಂಧಿತರು. ಇತರೆ ಮೂವರು ಆರೋಪಿಗಳಾದ ಡ್ಯಾನೀಶ್‌, ದಡಿಯಾ ಅಲಿಯಾಸ್‌ ತರುಣ್‌ ಹಾಗೂ ಮತ್ತೂಬ್ಬ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಆರೋಪಿಗಳು ಮಾ.17ರಂದು ಸಂಜೆ ನಗರತ್‌ ಪೇಟೆಯ ಸಿದ್ದಣ್ಣಗಲ್ಲಿಯ ಜುಮ್ಮಾ ಮಸೀದಿಯಲ್ಲಿ ಮೊಬೈಲ್‌ ಅಂಗಡಿ ಮಾಲೀಕ ಮುಖೇಶ್‌ ಎಂಬಾತನ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಮುಖೇಶ್‌ ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಜೀವಬೆದರಿಕೆ, ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡಲು ಪ್ರಚೋದನೆ, ಕೊಲೆಗೆ ಯತ್ನ ಆರೋಪದಡಿ ಐವರು ಹಾಗೂ ಇತರೆ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಕಿಡ್ನಾಪ್‌ ಕೇಸಲ್ಲಿ ಸೆರೆಯಾಗಿದ್ದ ಸುಲೇಮಾನ್‌:

Advertisement

ಆರೋಪಿಗಳ ಪೈಕಿ ಸುಲೇಮಾನ್‌ ವಿರುದ್ಧ 2018 ರಲ್ಲಿ ಅಪಹರಣ, 2023ರಲ್ಲಿ ಹಲ್ಲೆ ಆರೋಪದಡಿ ಹಲಸೂರು ಗೇಟ್‌ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿತ್ತು. ಜಾಮೀನು ಪಡೆದು ಆರೋಪಿ ಬಿಡುಗಡೆಯಾಗಿದ್ದ. ಇತರೆ ಇಬ್ಬರು ಆರೋಪಿಗಳ ವಿರುದ್ಧ ಸದ್ಯ ಯಾವುದೇ ಕೇಸುಗಳು ದಾಖಲಾಗಿಲ್ಲ. ತನಿಖೆ ಮುಂದುವರಿದಿದೆಂದು ಪೊಲೀಸರು ಹೇಳಿದರು.

ಹಲ್ಲೆ ಮಾಡಿ, ಮುಖಕ್ಕೆ ಗುದ್ದಿದ್ರು!

ಘಟನೆ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದ ಮುಖೇಶ್‌, ಭಾನುವಾರ ಸಂಜೆ ಅಂಗಡಿಯಲ್ಲಿದ್ದೆ. ಈ ವೇಳೆ 6 ಮಂದಿ ನಮ್ಮ ಅಂಗಡಿಗೆ ಬಂದು ನಮ್ಮ ಆಜಾನ್‌ ಸಮಯಕ್ಕೆ ಭಜನೆ ಹಾಡು ಏಕೆ ಹಾಕುತ್ತೀಯಾ? ಏಕೆ ಜೋರು ಶಬ್ಧ ಕೊಟ್ಟಿದ್ದಿಯಾ, ಈ ಸಮಯಕ್ಕೆ ಭಜನೆ ಹಾಡು ಹಾಕಿದ್ರೆ ಪರಿಣಾಮ ಸರಿ ಇರಲ್ಲ ಎಂದು ಏರುಧ್ವನಿಯಲ್ಲಿ ಎಚ್ಚರಿಕೆ ನೀಡಿದರು. ಆಗ ನಾನೇಕೆ ಭಜನೆ ಹಾಡು ನಿಲ್ಲಿಸಬೇಕು ಎಂದು ಪ್ರಶ್ನಿಸಿದೆ. ಅಷ್ಟಕ್ಕೆ ನನ್ನ ಕೊರಳಪಟ್ಟಿ ಹಿಡಿದು ಹಲ್ಲೆ ಮಾಡಿ, ಅಂಗಡಿಯಿಂದ ಹೊರಗೆಳೆದು ಹಲ್ಲೆ ಮಾಡಿದರು. ಆಯುಧದ ರೀತಿಯ ವಸ್ತುನಿಂದ ಮುಖಕ್ಕೆ ಹೊಡೆದರು. ಧ್ವನಿವರ್ಧಕಗಳಿಂದ ತಲೆಗೆ ಹೊಡೆದರು. ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ಹಲ್ಲೆಗೊಳಗಾಗಿದ್ದ ಮೊಬೈಲ್‌ ಅಂಗಡಿ ಮಾಲೀಕ ಮುಖೇಶ್‌ನನ್ನು ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್‌, ಶಾಸಕರಾದ ಉದಯ್‌ ಗರುಡಾಚಾರ್‌, ಸಿ.ಕೆ.ರಾಮಮೂರ್ತಿ, ಎಂಎಲ್ಸಿ ಚಲವಾದಿ ನಾರಾಯಣ ಸ್ವಾಮಿ ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ವೇಳೆ ಮಾತ ನಾಡಿದ ತೇಜಸ್ವಿ ಸೂರ್ಯ, ಮುಖೇಶ್‌ ಹಿಂದಿ ಭಾಷಿಕನಾಗಿದ್ದು, ಕನ್ನಡ ಅಷ್ಟಾಗಿ ಬರಲ್ಲ. ಪೊಲೀಸರು ಹನುಮಾನ್‌ ಚಾಲಿಸಾ ಬಗ್ಗೆ ಕೇಸಲ್ಲಿ ಉಲ್ಲೇಖಿಸಿಲ್ಲ. ಸರ್ಕಾರದಿಂದ ಯಾವುದೇ ಒತ್ತಡ ಬಂದರೂ, ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರಿಗೆ ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಕ್ತಿ ಬಂದಿದೆ. ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ದೃಢಪಟ್ಟಿದೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಕೆಲ ದಿನಗಳಲ್ಲೇ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟವಾಯಿತು. ಆಗ ಸಿಲಿಂಡರ್‌ ಸ್ಫೋಟ ಎಂದು ದಾರಿ ತಪ್ಪಿಸಲು ಯತ್ನಿಸಿದ್ದರು. ಮಂಗಳವಾರದೊಳಗೆ ಎಲ್ಲಾ ಆರೋಪಿಗಳ ಬಂಧನವಾಗಬೇಕು. ಇಲ್ಲವಾದರೆ, ನಗರತ್‌ಪೇಟೆ ಬಂದ್‌ ಆಗುತ್ತೆ ಎಂದು ಎಚ್ಚರಿಕೆ ನೀಡಿದರು.

ಸಿಸಿ ಕ್ಯಾಮೆರಾದಲ್ಲಿ ಹಲ್ಲೆ ದೃಶ್ಯ ಸೆರೆ: ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಆರೋಪಿಗಳು ಸಂಜೆ 6.25ರ ಸುಮಾರಿಗೆ ಅಂಗಡಿಗೆ ಬಂದು ಮುಖೇಶ್‌ ಜತೆ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ಬಳಿಕ ರಸ್ತೆಗೆ ಎಳೆದುಕೊಂಡು ಹಲ್ಲೆ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ರಾಷ್ಟ್ರಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆ ಸಂಬಂಧ ಮುಖೇಶ್‌ ದೂರು ನೀಡಿದ ಬೆನ್ನಲ್ಲೇ ಹಲಸೂರು ಗೇಟ್‌ ಠಾಣೆ ಪೊಲೀಸರು, ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಸಂಗ್ರಹಿಸಿ ಪರಿಶೀಲಿಸಿದ್ದರು. ಅದರ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಿಜೆಪಿ ನಾಯಕರಿಂದ ಹನುಮಾನ್‌ ಚಾಲೀಸಾ ಪಠಣ

ಮೊಬೈಲ್‌ ಅಂಗಡಿ ಮಾಲೀಕ ಮುಖೇಶ್‌ ಮೇಲಿನ ಹಲ್ಲೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ನೂರಾರು ವರ್ತಕರು ಘಟನಾ ಸ್ಥಳದಲ್ಲಿ ಹನುಮಾನ್‌ ಚಾಲೀಸಾ ಪಠಿಸಿದರು.

ಠಾಣೆ ಎದುರು ನಗರತ್‌ಪೇಟೆ, ಕಬ್ಬನ್‌ಪೇಟೆ ವರ್ತಕರ ಪ್ರತಿಭಟನೆ: ಪೊಲೀಸ್‌ ಬಂದೋಬಸ್ತ್

ಘಟನೆ ವಿಚಾರ ತಿಳಿಯುತ್ತಿದ್ದಂತೆ ನಗರತ್‌ಪೇಟೆ, ಕಬ್ಬನ್‌ಪೇಟೆ ಸೇರಿ ಪಕ್ಕ-ಪಕ್ಕದ ನೂರಾರು ವರ್ತಕರು ಭಾನುವಾರ ತಡರಾತ್ರಿ ಹಲಸೂರು ಗೇಟ್‌ ಪೊಲೀಸ್‌ ಠಾಣೆ ಎದುರು ಜಮಾಯಿಸಿ ಪ್ರತಿಭಟಿಸಿದರು.

ಕಳೆದ 15 ದಿನಗಳಿಂದ ನಗರತ್‌ಪೇಟೆಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮಕೈಗೊಳ್ಳುತ್ತಿಲ್ಲ. ಆದರಿಂದ ಅಂಗಡಿಗೆ ನುಗ್ಗಿ ಮುಖೇಶ್‌ ಮೇಲೆ ಹಲ್ಲೆ ನಡೆಸಿದ ಪುಂಡರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಸೋಮವಾರ ಬೆಳಗ್ಗೆಯೂ ಕೆಲ ವರ್ತಕರು ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದಲ್ಲದೆ, ಒಂದು ವೇಳೆ ಆರೋಪಿಗಳ ಬಂಧಿಸದಿದ್ದಲ್ಲೇ ಇಡೀ ನಗರತ್‌ಪೇಟೆ ಬಂದ್‌ ಮಾಡಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ನೂರಾರು ಜನ ನಗರತ್‌ಪೇಟೆಯಲ್ಲಿ ಜಮಾವಣೆಗೊಳ್ಳುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕೂಡಲೇ ಎರಡು ಕೆಎಸ್‌ ಆರ್‌ಪಿ ತುಕಡಿಯನ್ನು ಸ್ಥಳಕ್ಕೆ ಕರೆಸಿಕೊಂಡು ಎಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next