Advertisement

Rave party: ದಾಳಿ ವೇಳೆ ಈಜುಕೊಳಕ್ಕೆ ಡ್ರಗ್ಸ್‌ ಎಸೆದ ವ್ಯಸನಿಗಳು

11:01 AM May 22, 2024 | Team Udayavani |

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಜಿ.ಆರ್‌. ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಕೆಲ ವ್ಯಸನಿಗಳು ಡ್ರಗ್ಸ್‌ಗಳನ್ನು ಹೊರಗಡೆ ಹಾಗೂ ಸ್ವಿಮ್ಮಿಂಗ್‌ ಫ‌ುಲ್‌, ಕಮೋಡ್‌ಗೆ ಎಸೆದು ನಾಶ ಪಡಿ ಸಲು ಯತ್ನಿಸಿರುವುದು ಕಂಡು ಬಂದಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ತಿಳಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಈಗ ಸ್ಥಳದಲ್ಲಿ ಕೊಕೇನ್‌, ಎಂಡಿಎಂಎ, ಹೈಡ್ರೊ ಗಾಂಜಾ ಸೇರಿ ಹಲವು ಮಾದರಿಯ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಪಾರ್ಟಿ ಆಯೋಜಕ ಸೇರಿ ಐವರನ್ನು ಬಂಧಿಸಲಾಗಿದೆ. ರಣಧೀರ್‌ (43), ವೈ.ಎಂ.ಅರುಣ್‌ಕುಮಾರ್‌ (35), ಎಲ್‌.ವಾಸು (35), ನಾಗಬಾಬು (32), ಮಹಮ್ಮದ್‌ ಅಬೂಬ್ಕರ್‌ ಸಿದ್ದಿಕ್ಕಿ (29) ಅವರನ್ನು ಬಂಧಿಸಿ ಕಸ್ಟಡಿಗೆ ಪಡೆಯಲಾಗಿದೆ.

ಆರೋಪಿಗಳು ಹೊರರಾಜ್ಯದಿಂದ ಮಾದಕ ವಸ್ತು ತಂದು ಪಾರ್ಟಿಗೆ ಪೂರೈಸಿದ್ದರು ಎಂಬ ಮಾಹಿತಿಯಿದೆ. ಶ್ವಾನ ದಳದಿಂದ ಡ್ರಗ್ಸ್‌ ಪತ್ತೆ: ರೇವ್‌ ಪಾರ್ಟಿ ಯಲ್ಲಿದ್ದರು ಕೆಲ ಡ್ರಗ್ಸ್‌ಗಳನ್ನು ಸ್ವಿಮ್ಮಿಂಗ್‌ ಫ‌ುಲ್‌, ಕಮಾಂಡ್‌ ಹಾಗೂ ಇತರೆಡೆ ಎಸೆದಾಗ ಮಾದಕ ವಸ್ತು ಪತ್ತೆಗಾಗಿ ತರಬೇತಿ ಪಡೆದುಕೊಂಡಿದ್ದ ಶ್ವಾನದಳದ ಶ್ವಾನಗಳು, ಆರೋಪಿಗಳು ಅವಿತಿಟ್ಟಿದ್ದ ಡ್ರಗ್ಸ್‌ಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿವೆ ಎಂದು ಪೊಲೀಸ್‌ ಆಯಕ್ತರು ಹೇಳಿದರು.

ಸಿಸಿಬಿಗೆ ವರ್ಗಾವಣೆ ಬಗ್ಗೆ ಚಿಂತನೆ: ಸದ್ಯ ದಾಳಿ ಸಂದರ್ಭದಲ್ಲಿ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಪಾರ್ಟಿ ಸ್ಥಳ ಹೆಬ್ಬಗೋಡಿ ಠಾಣೆ ವ್ಯಾಪ್ತಿಗೆ ಬರುವುದರಿಂದ ಅಲ್ಲಿಗೆ ವರ್ಗಾವಣೆ ಮಾಡಲಾಗಿದೆ. ದಾಳಿ ನಡೆಸಿ ಸಾಕಷ್ಟು ತನಿಖೆ ನಡೆಸಿರುವ ಹಿನ್ನೆಲೆಯಲ್ಲಿ ಸಿಸಿಬಿಗೆ ವರ್ಗಾವಣೆ ಮಾಡಿಕೊಳ್ಳುವ ಬಗ್ಗೆ ಚಿಂತನೆಯಿದೆ ಎಂದರು.

50-60 ಲಕ್ಷ ರೂ. ಖರ್ಚು: ಇಡೀ ರೇವ್‌ ಪಾರ್ಟಿಗೆ ಅಂದಾಜು 50-60 ಲಕ್ಷ ರೂ. ಖರ್ಚು ಮಾಡಲಾಗಿದೆ. ಪ್ರತಿ ವ್ಯಕ್ತಿಗೆ ಕನಿಷ್ಠ 5-10 ಸಾವಿರ ರೂ. ಶುಲ್ಕ ಪಡೆಯಲಾಗಿದೆ. ಅಲ್ಲದೆ, ಹೆಚ್ಚುವರಿಯಾಗಿ ಮಾದಕ ವಸ್ತುಗಳನ್ನು ಸ್ಥಳದಲ್ಲೇ ಖರೀದಿಗೆ ಅವಕಾಶ ನೀಡಲಾಗಿತ್ತು ಎಂದು ಸಹ ಮೂಲಗಳು ತಿಳಿಸಿವೆ. ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಜಿ.ಆರ್‌. ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿಯಲ್ಲಿ ತೆಲುಗು ಸಿನಿಮಾದ ಪೋಷಕರ ನಟಿ ಹೇಮಾ ಭಾಗಿಯಾಗಿರುವುದು ನಿಜ. ಆಕೆಯ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಒಂದು ವೇಳೆ ಆಕೆ ಡ್ರಗ್ಸ್‌ ಸೇವಿಸಿರುವುದು ಸಾಬೀತಾದರೆ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ಇತರೆ ನೂರಕ್ಕೂ ಹೆಚ್ಚು ಮಂದಿಯ ರಕ್ತದ ಮಾದರಿ ಕೂಡ ಪಡೆಯಲಾಗಿದ್ದು, ವೈದ್ಯಕೀಯ ಪರೀಕ್ಷೆಯ ವರದಿ ಬಂದ ಬಳಿಕ, ಪಾರ್ಟಿಯಲ್ಲಿದ್ದವರು ಡ್ರಗ್ಸ್‌ ಸೇವಿಸಿದ್ದರೆ ಅಥವಾ ಇಲ್ಲವೇ ಎಂಬುದು ತಿಳಿಯಲಿದೆ ಎಂದರು.

Advertisement

ಇನ್ನು ಯಾವುದೇ ರಾಜ್ಯದ ಚುನಾಯಿತ ಪ್ರತಿನಿಧಿಗಳು ರೇವ್‌ ಪಾರ್ಟಿಯಲ್ಲಿ ಇರಲಿಲ್ಲ. ಹೊರರಾಜ್ಯದ ಗ್ರಾಹಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಸ್ಥಳದಲ್ಲಿ ಆಂಧ್ರಪ್ರದೇಶದ ಮಾಜಿ ಶಾಸಕರ ಅವಧಿ ಮೀರಿದ ಪಾಸ್‌ ಪತ್ತೆ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಆ ಕಾರಿನ ಮಾಲೀಕರು ಯಾರು, ಆ ಪಾಸ್‌ ಪಡೆದವರು ಯಾರು, ಯಾರು ಕಾರಿನಲ್ಲಿ ಬಂದಿದ್ದರು ಎಂಬುದು ತನಿಖೆ ನಡೆಯಬೇಕಿದೆ ಎಂದರು.

ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ ನಟಿ ಹೇಮಾ!: ಸಿಸಿಬಿ ಪೊಲೀಸರು ಫಾರ್ಮ್ ಹೌಸ್‌ ಮೇಲೆ ದಾಳಿ ಮಾಡಿದ ವೇಳೆ ತೆಲುಗು ಸಿನಿಮಾ ನಟಿ ನಟಿ ಹೇಮಾ ಕೋಣೆಯೊಂದರಲ್ಲಿ ಮಲಗಿದ್ದರು. ಆಗ ಮಹಿಳಾ ಪೊಲೀಸ್‌ ಸಿಬ್ಬಂದಿ ಆಕೆಯನ್ನು ಎಚ್ಚರಗೊಳಿಸಿದಾಗ ಪೊಲೀಸರನ್ನು ಕಂಡು ತನ್ನ ಹೆಸರನ್ನು ಬಹಿರಂಗ ಪಡಿಸದಂತೆ ಕೋರಿಕೊಂಡರು. ಬಳಿಕ ಶೌಚಾಲಯಕ್ಕೆ ಹೋಗುವುದಾಗಿ ಹೇಳಿ, ಕೆಲ ಹೊತ್ತಾದರೂ ಹೊರಗಡೆ ಬಂದಿಲ್ಲ. ಆಗ ಪೊಲೀಸರು ಪಕ್ಕದ ಕೋಣೆಗೆ ಹೋದಾಗ, ನಟಿ ಹೇಮಾ, ಕೋಣೆಯಿಂದ ತಪ್ಪಿಸಿಕೊಂಡು ಹೊರಹೋಗಿ ಸ್ನೇಹಿತರೊಬ್ಬರ ಸಹಾಯದಿಂದ ಅದೇ ಫಾರ್ಮ್ ಹೌಸ್‌ನ ಹೊರಭಾಗದಿಂದ ವಿಡಿಯೋ ಮಾಡಿ, ನಾನು ಹೈದರಾಬಾದ್‌ನ ನನ್ನ ಫಾರ್ಮ್ ಹೌಸ್‌ನಲ್ಲಿ ಇದ್ದೇನೆ’ ಎಂದು ಹೇಳಿದ್ದಾರೆ. ಹೀಗಾಗಿ ಆಕೆಗೆ ನೋಟಿಸ್‌ ಕೊಡಲಾಗುತ್ತದೆ. ಜತೆಗೆ ಆಕೆಯ ರಕ್ತದ ಮಾದರಿಯನ್ನು ಪಡೆಯಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

 ಡಸ್ಟ್‌ ಬಿನ್‌ ಕವರ್‌ನಿಂದ ಮುಖ ಮುಚ್ಚಿಕೊಂಡರು!

ರೇವ್‌ ಪಾರ್ಟಿ ಮೇಲೆ ಸಿಸಿಬಿ ದಾಳಿ ಮಾಡಿದಾಗ ಪಾರ್ಟಿಯಲ್ಲಿದ್ದವರು ಮುಖಕ್ಕೆ ಮಾಸ್ಕ್ ಧರಿಸಿ ಹೊರಬಂದ 50ಕ್ಕೂ ಜನರು ಫಾರ್ಮ್ ಹೌಸ್‌ ನಿಂದ ಹೊರಗೆ ಹೋಗಲು ಯತ್ನಿಸಿದ್ದಾರೆ. ಆದರೆ, ಪೊಲೀಸರು ಸುತ್ತುವರಿದಿದ್ದರಿಂದ ಸಾಧ್ಯ ವಾಗಿಲ್ಲ. ಆಗ ಕೆಲ ಗಣ್ಯರು, ಸೆಲೆಬ್ರಿಟಿಗಳು ಡಸ್ಟ್‌ಬಿನ್‌ ಕವರ್‌ನಿಂದ ಮುಖ ಮುಚ್ಚಿ ಕೊಂಡು ಹೊರಬಂದರು. ಬಳಿಕ ಸಿಸಿಬಿ ಪೊಲೀಸರು ಎದುರು, ಮುಚ್ಚಳಿಕೆ ಪತ್ರ ಬರೆದು ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next