Advertisement
ಬಾಗಲೂರು ವಿನಾಯಕ ನಗರದ ನಿವಾಸಿ 12 ವರ್ಷದ ಬಾಲಕ ಪಬ್ ಜಿ ಆಟದ ಹುಚ್ಚು ಬೆಳೆಸಿಕೊಂಡಿದ್ದ. ಸದಾ ಪಾಲಕರ ಮೊಬೈಲ್‌ನಲ್ಲಿ ಆಟವಾಡುತ್ತಿದ್ದ. ಪೋಷಕರು ಇತ್ತೀಚೆಗೆ ಸ್ಮಾರ್ಟ್‌ಫೋನ್ ಕೊಡದಿದ್ದರೂ ಅವರ ಕಣ್ತಪ್ಪಿಸಿ ಸ್ನೇಹಿತನೊಂದಿಗೆ ಪಬ್ ಜಿ ಆಡುತ್ತಿದ್ದ. ಬಾಲಕನ ಸ್ನೇಹಿತ ಮಾ.30ರಂದು 2 ಗಂಟೆಗೆ ಯಲಹಂಕ ರೈಲು ನಿಲ್ದಾಣದಿಂದ ಕಾಚಿಗುಡ್ಡ ಎಕ್ಸ್‌ಪ್ರೆಸ್‌ನಲ್ಲಿ ತೆರಳಬೇಕಿತ್ತು. ಸ್ನೇಹಿತ ಹೋದರೆ ತನಗೆ ಆಡಲು ಯಾರೂ ಇರುವುದಿಲ್ಲ ಎಂದು ಬೇಸರಗೊಂಡಿದ್ದ. ಹೇಗಾದರೂ ಮಾಡಿ ಸ್ನೇಹಿತ ರೈಲಿನಲ್ಲಿ ಹೋಗುವುದನ್ನು ತಪ್ಪಿಸಬೇಕೆಂದು ಚಿಂತಿಸಿ, ಮಾ.30ರಂದು ಮಧ್ಯಾಹ್ನ 11.30ರಲ್ಲಿ ತಾಯಿಯ ಕೀ ಪ್ಯಾಡ್ ಮೊಬೈಲ್‌ನಿಂದ ಯಲಹಂಕ ರೈಲ್ವೇ ಕಂಟ್ರೋಲ್ ರೂಂಗೆ ಕರೆ ಮಾಡಿ, “ಯಲಹಂಕ ರೈಲು ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದಾರೆ’ ಎಂದು ಹೇಳಿ ಕರೆ ಕಡಿತಗೊಳಿಸಿದ್ದ.
ಕೂಡಲೇ ಎಚ್ಚೆತ್ತುಕೊಂಡ ರೈಲ್ವೆ ಪೊಲೀಸರು ಹಾಗೂ ಭದ್ರತಾ ಸಿಬಂದಿ, ಬಾಂಬ್ ಹಾಗೂ ಶ್ವಾನದಳದೊಂದಿಗೆ ಆಗಮಿಸಿ ಪರಿಶೀಲಿಸಿದ್ದಾರೆ. ಆದರೆ ಬಾಂಬ್ ಪತ್ತೆಯಾಗಿರಲಿಲ್ಲ. ಬಳಿಕ ಕರೆ ಬಂದಿದ್ದ ಮೊಬೈಲ್ ನಂಬರ್ ಅನ್ನು ಪತ್ತೆ ಹಚ್ಚಿದಾಗ ಬಾಲಕನ ಪೋಷಕರ ಸುಳಿವು ಸಿಕ್ಕಿತ್ತು. ಕೂಡಲೇ ಅವರ ಮನೆಗೆ ತೆರಳಿ ವಿಚಾರಿಸಿದಾಗ ಬಾಲಕ ಕೃತ್ಯ ಬೆಳಕಿಗೆ ಬಂದಿದೆ. ಸ್ನೇಹಿತನಿಗೆ ಕರೆ ಮಾಡಿದ್ದೆ
ನನ್ನ ಸ್ನೇಹಿತನಿಗೆ ಕರೆ ಮಾಡಿ ಬಾಂಬ್ ಇದೆ ಎಂದು ಹೆದರಿಸಲು ಮುಂದಾಗಿದ್ದೆ. ಅದು ತಪ್ಪಿ ರೈಲ್ವೆ ಕಂಟ್ರೋಲ್ ರೂಂಗೆ ಕರೆ ಹೋಗಿದೆ ಎಂದು ವಿಚಾರಣೆ ವೇಳೆ ಬಾಲಕ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಕರೆ ಮಾಡಿರುವುದು ಅಪ್ರಾಪ್ತ ವಯಸ್ಕನಾದ ಹಿನ್ನೆಲೆಯಲ್ಲಿ ಪೊಲೀಸರು, ಪ್ರಕರಣ ದಾಖಲಿಸದೆ ಎಚ್ಚರಿಕೆ ಕೊಟ್ಟು ಬಿಟ್ಟಿದ್ದಾರೆ.