ಬೆಂಗಳೂರು: ನಡುರಾತ್ರಿ ಎಟಿಎಂ ದರೋಡೆಗೆ ಯತ್ನಿಸಿದ್ದ ಮೂವರು ದರೋಡೆಕೋರರನ್ನು ಸಿನಿಮೀಯ ಮಾದರಿಯಲ್ಲಿ ಮೂರ್‍ನಾಲ್ಕು ಕಿ. ಮೀ. ಬೆನ್ನಟ್ಟಿದ್ದ ಹುಳಿಮಾವು ಠಾಣೆಯ ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ಬಿ.ಕಾಂತರಾಜು, ಮುಖ್ಯ ಪೇದೆ ಸಿದ್ದಯ್ಯ ಅವರು ಒಬ್ಬ ದರೋಡೆಕೋರನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ಬೆಳಗಿನ ಜಾವ ಎಎಸ್‌ಐ ಮತ್ತು ಹೆಡ್ ಕಾನ್‌ಸ್ಟೆಬಲ್ ಅವರ ಸಮಯಪ್ರಜ್ಞೆಯಿಂದಾಗಿ ಖಾಸಗಿ ಬ್ಯಾಂಕ್‌ನ ಎಟಿಎಂ ದರೋಡೆ ತಪ್ಪಿದೆ.
ಎಎಸ್‌ಐ ಕಾಂತರಾಜು ಹಾಗೂ ಎಚ್.ಸಿ ಸಿದ್ದಯ್ಯ ಅವರು ಸೋಮವಾರ ರಾತ್ರಿ ಪಾಳಿಯ ಹೊಯ್ಸಳ ಗಸ್ತು ಕರ್ತವ್ಯದಲ್ಲಿದ್ದರು. ಅರಕೇರೆ ಜಾತ್ರೆ ಕೂಡ ನಡೆಯುತ್ತಿತ್ತು. ಮಂಗಳವಾರ ಬೆಳಗಿನ ಜಾವ 2.30ರ ಸುಮಾರಿಗೆ ಡಯಲ್ 100ಗೆ ಕರೆ ಮಾಡಿ ವೈಶ್ಯಾ ಬ್ಯಾಂಕ್ ಕಾಲೋನಿಯ ರಸ್ತೆಯಲ್ಲಿ ಖಾಸಗಿ ಬ್ಯಾಂಕ್‌ನ ಎಟಿಎಂ ದರೋಡೆಗೆ ಯತ್ನಿಸಿದ್ದು, ಶಟರ್ ಒಡೆಯಲಾಗುತ್ತಿದೆ ಎಂದು ಮಾಹಿತಿ ಬಂದಿದೆ.
ಈ ಮಾಹಿತಿ ತಲುಪಿದ ಕೂಡಲೇ ಹೊಯ್ಸಳದಲ್ಲಿದ್ದ ಎಎಸ್‌ಐ ಕಾಂತರಾಜು, ಎಚ್.ಸಿ ಸಿದ್ದಯ್ಯ ತಕ್ಷಣ ಸ್ಥಳಕ್ಕೆ ತೆರಳಿದ್ದಾರೆ. ಹೊಯ್ಸಳ ವಾಹನ ಬರುತ್ತಿದ್ದನ್ನು ಗಮನಿಸಿ ತಕ್ಷಣ ಮೂವರು ದುಷ್ಕರ್ಮಿಗಳು ಹೊರಟಿದ್ದಾರೆ. ಅವರನ್ನು ನಿಲ್ಲುವಂತೆ ಸಿಬ್ಬಂದಿ ಸೂಚಿಸಿದರೂ ನಿಲ್ಲಿಸದೇ ಹೋಗಿದ್ದಾರೆ.
ಹೊಯ್ಸಳ ವಾಹನ ಚಲಾಯಿಸುತ್ತಿದ್ದ ಎಚ್.ಸಿ ಅವರನ್ನು ಹಿಂಬಾಲಿಸಿದ್ದಾರೆ.ಆಟೋ ನಿಲ್ಲಿಸದೇ ವೇಗವಾಗಿ ಹೋಗುತ್ತಿದ್ದ ದುಷ್ಕರ್ಮಿಗಳು, ಬೆನ್ನಟ್ಟಿದ್ದ ಸಿಬ್ಬಂದಿ ಮೇಲೆ ಆರೆಯನ್ನು ಎಸೆದಿದ್ದಾರೆ. ಹುಳಿಮಾವು ಗೇಟ್, ಬನ್ನೇರುಘಟ್ಟ, ದೊಡ್ಡಮ್ಮನ ದೇವಸ್ಥಾನ ಸೇರಿ ಸಂದಿ ಗೊಂದಿಗಳಲ್ಲಿಯೂ ಆಟೋ ಓಡಿಸಿದ್ದಾರೆ. ಆಟೋ ಹೋಗುತ್ತಿದ್ದ ಜಾಗಗಳಲ್ಲಿ ಹೊಯ್ಸಳ ಹೋಗುತ್ತಿರಲಿಲ್ಲ. ಆಟೋ ಹೋದ ರಸ್ತೆಯ ತಿರುವಿಗೆ ಪುನ: ಹೊಯ್ಸಳ ಹೋಗಬೇಕಿತ್ತು. ಬಳಿಕ ದುಷ್ಕರ್ಮಿಗಳು ಮತ್ತೂಂದು ಕಿರಿದಾದ ರಸ್ತೆಗೆ ಹೋಗುತ್ತಿದ್ದರು.
ಅಂತಿಮವಾಗಿ ದೊಡ್ಡಮ್ಮ ದೇವಸ್ಥಾನದ ಸಮೀಪದ ಅವರನ್ನು ಚೇಸ್ ಮಾಡಿ ಹಿಡಿಯುವಷ್ಟರಲ್ಲಿ ಆಟೋ ಬಿಟ್ಟು ರಸ್ತೆಗೆ ಹಾರಿದ ಇಬ್ಬರು ಕೌಂಪೌಂಡ್ ಹಾರಿ ತಪ್ಪಿಸಿಕೊಂಡರೆ ಮತ್ತೂಬ್ಬ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಸೆಕ್ಯೂರಿಟಿಯೇ ಇರಲಿಲ್ಲ!
ಖಾಸಗಿ ಬ್ಯಾಂಕ್ ಎಟಿಎಂ ಕಾಲಿಗೆ ಭದ್ರತಾ ಸಿಬ್ಬಂದಿ ಇರಲಿಲ್ಲ. ಹೀಗಾಗಿಯೇ ದುಷ್ಕರ್ಮಿಗಳು ಎಟಿಎಂ ಕೇಂದ್ರದ ಶಟರ್ ಅನ್ನು ಅರೆ ಬಳಸಿ ಮೇಲಕ್ಕೆತ್ತಲಾಗಿದೆ. ಎಟಿಎಂನ ಕೀ ಬೋರ್ಡ್‌ನನ್ನು ಒಡೆದಿದ್ದಾರೆ.ಇನ್ನೇನು ದರೋಡೆ ಮಾಡಬೇಕು ಎನ್ನುವಷ್ಟರಲ್ಲಿ ಸಿಬ್ಬಂದಿ ಬರುವಿಕೆ ಗಮನಿಸಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಈಶಾನ್ಯ ವಿಭಾಗದ ಡಿಸಿಪಿ ಇಶಾಪಂಥ್, ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಎಸಿಪಿ ವಾಸು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಎಟಿಎಂ ದರೋಡೆಯತ್ನ ನಡೆಸಿದ ಆರೋಪಿತರನ್ನು ಜೀವದ ಹಂಗು ತೊರೆದು ಬೆನ್ನಟ್ಟಿ ಒಬ್ಬನನ್ನು ಹಿಡಿದ ಹೊಯ್ಸಳ ಗಸ್ತಿನಲ್ಲಿದ್ದ ಎಎಸ್‌ಐ ಕಾಂತರಾಜು, ಎಚ್‌ಸಿ ಸಿದ್ದಯ್ಯ ಅವರ ಕಾರ್ಯ ಅಭಿನಂದನೀಯ. ಆರೋಪಿಗಳ ಬಳಿಯಿದ್ದ ಆಟೋ ಜಪ್ತಿ ಮಾಡಲಾಗಿದೆ. ಪರಾರಿಯಾಗಿರುವ ಆರೋಪಿಗಳಿಬ್ಬರ ಬಂಧನಕ್ಕೆ ಕ್ರಮವಹಿಸಲಾಗಿದೆ’
– ಇಶಾಪಂಥ್, ಡಿಸಿಪಿ, ಆಗ್ನೇಯ ವಿಭಾಗ