Advertisement

ಬೆಂಗಳೂರು-ಮೈಸೂರು ದಶಪಥ ಡೆತ್‌ ವೇ

11:50 AM Jun 17, 2023 | Team Udayavani |

ರಾಮನಗರ: ರಾಜ್ಯದ ರಾಜಧಾನಿ ಮತ್ತು ಸಾಂಸ್ಕೃತಿಕ ನಗರಿಯ ನಡುವಿನ ಸಂಚಾರದ ಸಮಯವನ್ನು ತಗ್ಗಿಸುವ ಮಹತ್ವಾಕಾಂಕ್ಷೆಯೊಂದಿಗೆ ನಿರ್ಮಾಣ ಮಾಡಿ ರುವ ಎಕ್ಸ್‌ಪ್ರೆಸ್‌ ವೇ ಇದೀಗ ಡೆತ್‌ವೇಯಾಗಿ ಪರಿಣಮಿಸಿದೆ.

Advertisement

ಹೌದು, 4 ತಾಸುಗಳ ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಸಮಯದಲ್ಲಿ 75 ನಿಮಿಷಗ ಳಿಗೆ ಕಡಿಮೆ ಮಾಡುವ ಉದ್ದೇಶದೊಂದಿಗೆ ಆರಂಭ ಗೊಂಡ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಅಪಘಾತಗಳು ನಿತ್ಯನಿರಂತರವಾಗಿವೆ. ಈಗಾಗಲೇ ಕಾಮಗಾರಿ ಪೂರ್ಣಗೊಂಡಿರುವ ಮೊದಲ ಹಂತದಲ್ಲಿ ಮೃತರ ಸಂಖ್ಯೆ ಸೆಂಚ್ಯುರಿ ಬಾರಿಸಿದ್ದರೆ, ಇನ್ನೂ ಕಾಮಗಾರಿ ಪೂರ್ಣಗೊಳ್ಳದ ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಸಾವಿನ ಸಂಖ್ಯೆ ಅರ್ಧಸೆಂಚ್ಯುರಿ ದಾಟಿದೆ.

ಸಾವಿನಲ್ಲಿ ಒಂದೂವರೆ ಶತಕ: ಬೆಂ-ಮೈ ಹೆದ್ದಾರಿ ಶೇ. 95 ರಷ್ಟು ರಾಮನಗರ ಮತ್ತು ಮಂಡ್ಯ ಜಿಲ್ಲೆಯ ನಡುವೆ ಹಾಯ್ದು ಹೋಗಿದೆ. 2022ರ ಸೆಪ್ಟೆಂಬರ್‌ ಮೊದಲ ವಾರದಿಂದ ಹೆದ್ದಾರಿಯಲ್ಲಿ ಸಂಚಾರ ಆರಂಭಿಸಲಾಗಿತ್ತು. ಅಂದಿನಿಂದ ಇಲ್ಲಿಯ ವರೆಗೆ 849 ರಸ್ತೆ ಅಪಘಾತಗಳು ಸಂಭವಿಸಿದ್ದು, ಈ ಅಪಘಾತಗಳಲ್ಲಿ 155 ಮಂದಿ ಸಾವಿಗೀಡಾಗಿದ್ದಾರೆ. ಇನ್ನು 613 ಮಂದಿ ತೀವ್ರಗಾಯಗೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಇದುವರೆಗೆ 279 ಅಪಘಾತಗಳು ಸಂಭವಿಸಿದ್ದು, 100 ಮಂದಿ ಸಾವಿಗೀಡಾಗಿದ್ದಾರೆ, 298 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 84 ತೀವ್ರ ಸ್ವರೂಪದ ಅಪಘಾತಗಳಾಗಿದ್ದು, 185 ಸಾಮಾನ್ಯ ಅಪಘಾತಗಳಾಗಿವೆ.

ಇನ್ನು ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಭೀಕರ ಅಪಘಾತ ಗಳ ಸಂಖ್ಯೆಯೇ ಹೆಚ್ಚಿದ್ದು ಕನಿಷ್ಠ ಮೂರರಿಂದ 5 ಮಂದಿ ಸಾವಿಗೀಡಾಗಿರುವ ಅಪಘಾತಗಳು ಹೆಚ್ಚಿವೆ. ಮಂಡ್ಯ ಜಿಲ್ಲೆ ವ್ಯಾಪ್ತಿಯ ಎಕ್ಸ್‌ಪ್ರೆಸ್‌ವೇನಲ್ಲಿ ಇದುವರೆಗೆ 570 ಅಪಘಾತಗಳು ಸಂಭವಿಸಿದ್ದು, 55 ಮಂದಿ ಸಾವಿಗೀಡಾಗಿದ್ದಾರೆ. 52 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. 184 ಮಂದಿಗೆ ತೀವ್ರಗಾಯಗಳಾಗಿದ್ದು 279 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ಹಾಟ್‌ಸ್ಪಾಟ್‌ಆದ ಬೈಪಾಸ್‌: ರಾಮನಗರ-ಚನ್ನಪಟ್ಟಣ ನಡುವೆ 22.50 ಕಿ.ಮೀ. ಉದ್ದ ನಿರ್ಮಾಣಗೊಂಡಿರುವ ಬೈಪಾಸ್‌ ರಸ್ತೆ ಅಪಘಾತಗಳ ಹಾಟ್‌ಸ್ಪಾಟ್‌ ಆಗಿ ಪರಿಣಮಿಸಿದೆ.

ಬೆಂ-ಮೈ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತಗಳಲ್ಲಿ ಹೆಚ್ಚಿನವು ಈ ಬೈಪಾಸ್‌ ರಸ್ತೆಯಲ್ಲೇ ಸಂಭವಿಸಿದೆ. ಕಾರು ಅಪಘಾತದಲ್ಲಿ ಒಂದೇ ಕುಟುಂಬದ 5 ಮಂದಿ, ಬುಧವಾರ 3 ಮಂದಿ ಬಲಿಪಡೆದ ಕಾರು-ಲಾರಿ ನಡುವಿನ ಅಪಘಾತ ಹೀಗೆ ಹೆಚ್ಚು ಮಂದಿಯನ್ನು ಬೈಪಾಸ್‌ ಬಲಿಪಡೆದಿದ್ದು, ಬೈಪಾಸ್‌ನಲ್ಲಿ ಸಂಚರಿಸಲು ಜನತೆ ಭಯಬೀಳುವಂತಾಗಿದೆ.

Advertisement

ಅಪಘಾತಕ್ಕೆ ಕಾರಣವೇನು?:

  • ಎಕ್ಸ್‌ಪ್ರೆಸ್‌ ವೇನಲ್ಲಿ ವೇಗಮಿತಿ ಇಲ್ಲದಿರು ವುದು, ವಾಹನಗಳು ಲೈನ್‌ ನಿಯಮವನ್ನು ಪಾಲಿಸದೇ ಇರುವುದು. ಪದೇಪದೆ ವಾಹನಗಳು ಲೈನ್‌ ಕ್ರಾಸ್‌ ಮಾಡುವುದು.
  • ಎಕ್ಸ್‌ಪ್ರೆಸ್‌ ಹೈವೇ ಬೈಪಾಸ್‌ ರಸ್ತೆಯಲ್ಲಿ ವಾಹನಗಳು 120-160 ಕಿ.ಮೀ. ವೇಗದಲ್ಲಿ ಪ್ರಯಾಣಿಸುತ್ತಿರುವುದು.
  • ಬೈಪಾಸ್‌ ರಸ್ತೆಗಳಲ್ಲಿ ಪ್ರಯಾಣಿಕರಿಗೆ ಸೂಚನಾಫಲಕ ಇಲ್ಲದಿರುವುದು. ತುರ್ತು ಸಂದರ್ಭದಲ್ಲಿ ಸಕಾಲದಲ್ಲಿ ಆಂಬ್ಯುಲೆನ್ಸ್‌ ಸೇವೆ, ತುರ್ತು ಚಿಕಿತ್ಸಾ ವ್ಯವಸ್ಥೆ ಲಭ್ಯವಾಗದಿರುವುದು.
  • ಬೇಕಾಬಿಟ್ಟಿ ಸಂಚರಿಸುವ ವಾಹನಗಳ ನಿಯಂತ್ರಣಕ್ಕೆ ಹೈವೇ ಪೆಟ್ರೋಲಿಂಗ್‌, ಕ್ಯಾಮರ ಕಣ್ಗಾವಲು ಹೀಗೆ.. ಯಾವುದೇ ವ್ಯವಸ್ಥೆ ಇಲ್ಲದಿರುವುದು.
  • ಹೆದ್ದಾರಿಯಲ್ಲಿ ಮಂದಗತಿಯಲ್ಲಿ ಸಾಗುವ ಆಟೋ, ಟ್ರಾಕ್ಟರ್‌, ಬೈಕ್‌ಗಳು ಸಂಚರಿಸುತ್ತಿರುವುದು.ಹೆದ್ದಾರಿಗೆ ಅಳವಡಿಸಿರುವ ತಂತಿ ಬೇಲಿ ಅಲ್ಲಲ್ಲಿ ತುಂಡಾಗಿದ್ದು ಇದರಿಂದ ವಾಹನಗಳು ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿರುವುದು ಹಾಗೂ ಸಾರ್ವಜನಿಕರು ರಸ್ತೆ ದಾಟುತ್ತಿರುವುದು.

ಪ್ರಮುಖ ಅಪಘಾತಗಳು:

  1. ಏ.22: ಚನ್ನಪಟ್ಟಣ ತಾಲೂಕಿನ ಲಂಬಾಣಿತಾಂಡ್ಯ ಬಳಿ ಸಂಭವಿಸಿದ ಅಪಘಾತದಲ್ಲಿ 5 ಮಂದಿ ಸಾವು.
  2. ಮೇ 1: ರಾಮನಗರ ಜಯಪುರ ಗೇಟ್‌ ಬಳಿ ಕಾರಿಗೆ ಬೈಕ್‌ ಡಿಕ್ಕಿ 3 ಮಂದಿ ಸಾವು
  3. ಜೂ.11: ಚನ್ನಪಟ್ಟಣ ತಾಲೂಕಿನ ಮುದುಗೆರೆ ಚಾಮುಂಡೇಶ್ವರಿ ಆಸ್ಪತ್ರೆ ಮುಂಭಾಗ ಕಾರು ಅಪಘಾತದಲ್ಲಿ 2 ಸಾವು, ಇಬ್ಬರಿಗೆ ಗಾಯ
  4. ಜೂ.14: ಚನ್ನಪಟ್ಟಣ ತಾಲೂಕಿನ ದೇವರಹೊಸಹಳ್ಳಿ ಬೈಪಾಸ್‌ ಬಳಿ ಅಪಘಾತದಲ್ಲಿ 3 ಸಾವು ಜ.20: ಮುದುಗೆರೆ ವೈಶಾಲಿ ಹೋಟೆಲ್‌ ಸಮೀಪ ಟಿಟಿ ಅಪಘಾತ ದಲ್ಲಿ 3 ಸಾವು 10 ಮಂದಿಗೆ ಗಾಯ

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next