ಮಂಡ್ಯ: ಬಹುನಿರೀಕ್ಷಿತ ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆಯನ್ನು ರವಿವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಭಾರೀ ಪ್ರಾಮುಖ್ಯ ಪಡೆದಿದೆ.
ಇದೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಗೆ ಮೋದಿ ಆಗಮಿಸುತ್ತಿದ್ದು, ಮದ್ದೂರಿನ ಗೆಜ್ಜಲಗೆರೆ ಕಾಲನಿ ಬಳಿಯ 200 ಎಕ್ರೆ ಪ್ರದೇಶದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ.
ರವಿವಾರ ಬೆಳಗ್ಗೆ ಮೈಸೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ, ಅಲ್ಲಿಂದ 11.30ಕ್ಕೆ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಆಗಮಿಸಲಿದ್ದಾರೆ. ಬಳಿಕ ಪ್ರವಾಸಿ ಮಂದಿರದ ವೃತ್ತದಿಂದ ತೆರೆದ ವಾಹನದಲ್ಲಿ ಎಸ್.ಡಿ.ಜಯರಾಂ ವೃತ್ತದವರೆಗೆ 1.5 ಕಿ.ಮೀ. ರೋಡ್ ಶೋ ನಡೆಸಲಿದ್ದಾರೆ. ಅಲ್ಲಿಂದ ಕಾರಿನ ಮೂಲಕ ಅಮರಾವತಿ ಹೊಟೇಲ್ ಬಳಿ ಎಕ್ಸ್‌ಪ್ರೆಸ್ ಕಾರಿಡಾರ್ ಪ್ರವೇಶಿಸಿ, ಅಲ್ಲಿ 50 ಮೀ.ವರೆಗೆ ನಡೆದು ಎಕ್ಸ್‌ಪ್ರಸ್ ವೇಯನ್ನು ಉದ್ಘಾಟಿಸುವರು. ಬಳಿಕ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಧಾರವಾಡ ಐಐಟಿ ಉದ್ಘಾಟನೆ
ಪ್ರಧಾನಿ ರವಿವಾರ ಮಧ್ಯಾಹ್ನ 2 ಗಂಟೆಗೆ ಧಾರವಾಡ ಐಐಟಿ, ವಿಶ್ವದ ಅತಿ ಉದ್ದನೆಯ ಹುಬ್ಬಳ್ಳಿಯ ರೈಲು ನಿಲ್ದಾಣ ಉದ್ಘಾಟನೆ, 250 ಕೋಟಿ ರೂ. ವೆಚ್ಚದ ಜಯದೇವ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ.
ಬೆಂಗಳೂರು- ಮೈಸೂರು ಹೆದ್ದಾರಿ ಒಂದು ಮಹತ್ವದ ಸಂಪರ್ಕ ಯೋಜನೆಯಾಗಿದ್ದು, ಅದು ಕರ್ನಾಟಕದ ಪ್ರಗತಿಯ ಪಥಕ್ಕೆ ತನ್ನದೇ ಆದ ಕೊಡುಗೆ ನೀಡಲಿದೆ.
– ನರೇಂದ್ರ ಮೋದಿ, ಪ್ರಧಾನಿ