Advertisement
ಗುರುವಾರ ಸಂಜೆ ಮೆಟ್ರೊ ಸಿಬ್ಬಂದಿ ಮತ್ತು ಭದ್ರತಾ ಪಡೆ ನಡುವೆ ತಪಾಸಣೆ ವಿಚಾರದಲ್ಲಿ ನಡೆದ ಕಲಹದಿಂದಾಗಿ ಶುಕ್ರವಾರ ಬೆಳಿಗ್ಗೆ ಮೆಟ್ರೊ ಸಿಬ್ಬಂದಿ ದಿಢೀರ್ ಮುಷ್ಕರ ನಡೆಸಿದರು. ಬೆಳಗ್ಗೆ ಆರು ಗಂಟೆಗೆ ಮೆಟ್ರೋದಲ್ಲಿ ಸಂಚರಿಸಲು ಬಂದವರು ಸೇವೆ ಸ್ಥಗಿತಗೊಂಡಿರುವುದು ಕೇಳಿ ಗಲಿಬಿಲಿಗೊಂಡಿದ್ದೇ ಅಷ್ಟೇ ಅಲ್ಲದೆ ಮಧ್ಯಾಹ್ನ 12 ಗಂಟೆವರೆಗೂ ಸೇವೆ ಪುನರಾರಂಭವಾಗದ ಕಾರಣ ಇಡೀ ಬೆಂಗಳೂರು “ಸಂಚಾರ ದಟ್ಟಣೆ’ಯಿಂದ ನಲುಗುವಂತಾಯಿತು.
Related Articles
Advertisement
ಮೆಟ್ರೋ ಸೇವೆ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರ್ಯಾಯ ಸಂಚಾರ ವ್ಯವಸ್ಥೆಗಾಗಿ ಪರದಾಡುವಂತಾಯಿತು. ಬಸ್ಸು, ಆಟೋ, ಟ್ಯಾಕ್ಸಿಗೆ ಮೊರೆ ಹೋಗುವಂತಾಯಿತು. ಆದರೂ ಏಕಾಏಕಿ ಲಕ್ಷಾಂತರ ಪ್ರಯಾಣಿಕರು ಒಮ್ಮೆಲೆ ಬಸ್ಸು, ಆಟೋ ಆ್ಯಪ್ ಆಧಾರಿತ ಟ್ಯಾಕ್ಸಿಗಳತ್ತ ಬಂದಿದ್ದರಿಂದ ಅಲ್ಲೂ ದಟ್ಟಣೆ ಹೆಚ್ಚಾಗಿತ್ತು.
ಸಿಬ್ಬಂದಿಯ ದಿಢೀರ್ ಮುಷ್ಕರ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸ್ ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳು ಸಂಧಾನ ಮಾತುಕತೆಗೆ ಮುಂದಾದರು. ಮುಷ್ಕರ ನಿರತರೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನಂತರ ಸಿಬ್ಬಂದಿ ಪ್ರತಿಭಟನೆ ಕೈಬಿಟ್ಟರು. ಮಧ್ಯಾಹ್ನ 12ರ ನಂತರ ಮೆಟ್ರೋ ಸಂಚಾರ ಯಥಾಸ್ಥಿತಿಗೆ ಬಂದಿತು.
ಎಸ್ಮಾ ಜಾರಿ: ಆದರೆ, ಮುಂದೆ ಇಂತಹ ಘಟನೆ ಮರುಕಳಿಸದಿರಲು ರಾಜ್ಯ ಸರ್ಕಾರ ಎಸ್ಮಾ ಜಾರಿ ಮಾಡಿ ಆದೇಶ ಹೊರಡಿಸಿತು. “ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ-2013’ರ ಕಲಂ 3ರ ಅನ್ವಯ ನಗರದ ನಾಗರಿಕರ ಹಿತದೃಷ್ಟಿಯಿಂದ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ದ ಸಿಬ್ಬಂದಿ ಮತ್ತು ಅಧಿಕಾರಿಗಳು ಯಾವುದೇ ರೀತಿಯ ಮುಷ್ಕರ ಮಾಡುವುದನ್ನು ನಿಷೇಧಿಸಿ ನಗರಾಭಿವೃದ್ಧಿ ಇಲಾಖೆ ಶುಕ್ರವಾರ ಅಧಿಸೂಚನೆ ಹೊರಡಿಸಿತು.
ನಡೆದಿದ್ದೇನು?: ಗುರುವಾರ ಸರ್.ಎಂ.ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣದಲ್ಲಿ ಸಿಬ್ಬಂದಿಯೊಬ್ಬ ತಪಾಸಣೆಗೆ ಒಳಪಡಲಿಲ್ಲ ಎಂದು ಕೈಗಾರಿಕಾ ಭದ್ರತಾ ಪೇದೆ ಆಕ್ಷೇಪ ವ್ಯಕ್ತಪಡಿಸಿದ್ದ. ಇದು ಮೆಟ್ರೋ ಸಿಬ್ಬಂದಿ ಹಾಗೂ ಕೈಗಾರಿಕೆ ಭದ್ರತಾ ಪಡೆಯ ನಡುವಿನ ಸಂಘರ್ಷವಾಗಿ ಮಾರ್ಪಟ್ಟು ಅತಿರೇಕಕ್ಕೆ ಹೋಗಿ ಶುಕ್ರವಾರ ಮೆಟ್ರೋ ಬಂದ್ ಹಂತ ತಲುಪಿತ್ತು.