Advertisement

Bengaluru Kambala: ಬೆಂಗಳೂರು ಕಂಬಳ ಕಣ್ತುಂಬಿಕೊಂಡ ಕ್ಷಣ

02:40 PM Dec 05, 2023 | Team Udayavani |

ಪ್ರಪ್ರಥಮ ಬಾರಿಗೆ ತುಳುನಾಡಿನ ಕ್ರೀಡೆ ಕಂಬಳ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದ್ದು, ನವೆಂಬರ್‌ 25ರಂದು ರಾಜ್ಯ ರಾಜಧಾನಿಯಲ್ಲಿ ಕರಾವಳಿಯ ವೈಭವವೇ ಮನೆಮಾಡಿತ್ತು.

Advertisement

ಈ ಹಿಂದೆ ಕಂಬಳದ ಕುರಿತು ಕೇಳಿದ್ದೆ, ಮಾಧ್ಯಮಗಳಲ್ಲಿ ನೋಡಿದ್ದೆ ಆದರೆ ನೇರವಾಗಿ ನೋಡಿ ಕಣ್ತುಂಬಿಕೊಳ್ಳಲು ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಕಂಬಳ ರಾಜ್ಯಧಾನಿಯಲ್ಲಿ ಆಯೋಜಿರುವುದು ನಮ್ಮ ಭಾಗ್ಯವೇ ಸರಿ ಎಂದು ಅರಮನೆ ಮೈದಾನಕ್ಕೆ ಭೇಟಿ ನೀಡಿ ಕಂಬಳ ನೋಡಿ ಕಣ್ತುಂಬಿಕೊಂಡೆ.

ಅರಮನೆ ಮೈದಾನದ ಸುತ್ತಮುತ್ತಲೂ ಸಾಲು ಸಾಲು ವಾಹನಗಳ ರಂಪಾಟ, ಜನರ ಆತುರ-ತುಡಿತ ಹತೋಟಿಗೆ ತರಲು ಪೊಲೀಸರ ಪರದಾಟ. ಸರತಿ ಸಾಲಿನಲ್ಲಿ ಜನರ ನೂಕಲಾಟ, ಎತ್ತ ನೋಡಿದರತ್ತ ಚಿತ್ತವಿಲ್ಲದಂತ ಜನಸಾಗರ, ಸುತ್ತ ಹಸುರ ಹೊದಿಕೆಯ ಚಿತ್ತ, ಬಾನೆತ್ತರದಲ್ಲಿ ಡ್ರೋಣ್‌ಗಳ ಹಾರಾಟ, ಜನಗಳ ಮಧ್ಯದಲ್ಲಿ ಮಕ್ಕಳ ಅಳಲಾಟ, ಎಲ್ಲೆಡೆ ಸುದ್ದಿ ಕಳುಹಿಸಲು ಮಾಧ್ಯಮ ಮಿತ್ರರ ಸಂಕಟ, ಒಟ್ಟಾರೆ ಎಲ್ಲಿ ನೋಡಿದರೂ ಹಬ್ಬದ ಕಳೆಗಟ್ಟಿತ್ತು.

ಹಲ್ಲು ಬೆಳೆಯುವ ಮಕ್ಕಳಿಂದ ಹಿಡಿದು ಹಲ್ಲು ಬೀಳುವ ಮುದುಕಿಯರ ವರೆಗೂ ಕಂಬಳ ನೋಡಲು ಹರಸಾಹವೇ ಪಡುತ್ತಿದ್ದರು. ಅದರಲ್ಲೂ ಸದಾ ಬ್ಯೂಸಿ ಲೈಫ್ನಲ್ಲಿರುವ ಬೆಂಗಳೂರಿಗರಿಗಂತೂ ಮೂಡ್‌ ಬದಲಾವಣೆಗೆ ಇದೊಂತರ ವಿಕೇಂಡ್‌ ಮಸ್ತಿಯಾಗಿತ್ತು. ಶಾಲೆ, ಓದು-ಬರಹ, ಟೀಚರ್‌ಗಳ ಕಾಟ, ಪರೀಕ್ಷೆ ಎಂತೆಲ್ಲ ಕಾಲಕಳೆಯುತ್ತಿದ್ದ ಮಕ್ಕಳಿಗಂತೂ ಅಂದು ಪಂಜರದ ಗಿಳಿಯನ್ನು ಹೊರ ಬಿಟ್ಟಂತಾಗಿತ್ತು.

ಇಲ್ಲಿಗೆ ಕಾಲಿಟ್ಟಾಗ ಕೋಣಗಳ ಜಟಾಪಟಿ ನೋಡಿ ನನ್ನೂರು ನೆನಪಾಯಿತು. ಕೋಣಗಳ ನಾಯಕರು ಅವುಗಳನ್ನು ಪ್ರೀತಿಸುವ ಪರಿ ನಿಜಕ್ಕೂ ತಾಯಿ ಮಕ್ಕಳ ಸಂಬಂಧಕ್ಕೆ ಸಾಕ್ಷಿಯಾಗಿತು. ತಿಳಿಸಂಜೆಯ ಆ ತಂಪನೆಯ ಗಾಳಿಯಲ್ಲಿ ಮೈಮನ ಮರೆತಂತಾಯಿತು. ನಾನು ನಂದು ಎನ್ನುವ ಜನರ ಬಾಯಲ್ಲಿ ನಮ್ಮ ತುಳುನಾಡು, ನಮ್ಮ ತುಳುನಾಡ ಸಂಭ್ರಮ, ನಮ್ಮ ಭಾಷೆ, ನಮ್ಮ ಆಹಾರ ಎನ್ನುವ ಸಂತಸದ ಪದಗಳ ಜೋಡಣೆ ಕೇಳತೊಡಗಿತು.

Advertisement

175 ಕೋಣಗಳು ಯುದ್ಧ ಭೂಮಿಯಲ್ಲಿ ಸಜ್ಜಾಗಿ ಒಂದಾದ ಅನಂತರ ಒಂದು ಜೋಡಿ ತಮ್ಮ ಬಲಪ್ರದರ್ಶನ ಮಾಡಿದವು. ಕೆಲವು ಗೆದ್ದು ಬೀಗಿದವು, ಇನ್ನು ಕೆಲವು ಮಾಲಕನ ಆಸೆ ಹುಸಿಯಾಯಿತಲ್ಲ ಎಂದು ಕಂಣಂಚಿನಲ್ಲಿ ನೋವನ್ನು ಹೊತ್ತು ಹೊರಟವು.

ಕೋಣಗಳ ಓಟಕ್ಕೆ ಜನರ ಧ್ವನಿ ಹಾಹಾಕಾರ ಸಂಗೀತವಾಗಿ, ತಾಳ-ಮೇಳ ಹಾಕಿದಂತಾಗಿತ್ತು. ಇದೆಲ್ಲ ಒಂದು ಕಡೆಯಾದರೆ ಮತ್ತೂಂದೆಡೆ ನೋಡುಗರ ಕಣ್ಣಿಗೆ ಸ್ವರ್ಗವೇ ಧರೆಗಿಳಿದಿತ್ತು. ಕರಾವಳಿ ಭಾಗದ ಸಂಪ್ರದಾಯ, ಅಲ್ಲಿನ ಆಹಾರ ಪದ್ಧತಿ, ಕಲರ್‌ಫ‌ುಲ್‌ ಆಹಾರ ಮಳಿಗೆಗಳು, ಸಾಂಪ್ರದಾಯಿಕ ಹುಲಿ ಕುಣಿತ, ನೃತ್ಯ, ಬೊಂಬೆಗಳ ಕುಣಿತ, ತುಳುನಾಡಿನ ಪುರಾತನ ಪರಿಕರಗಳ ವಸ್ತುಪ್ರದರ್ಶನ, ಲಯಬದ್ಧ ಸಂಗೀತದ ಜತೆ ಹೆಜ್ಜೆಗೆಜ್ಜೆಗಳ ಸಮಾಗಮ ಎಲ್ಲೆಡೆ ನೆಲೆಸಿತ್ತು.

ಒಟ್ಟಾರೆಯಾಗಿ ನಾನೆಂದು ಬೀಗುವ ಮನುಜನ ಅಹಂ ಅಳಸಿ ಹೋಗಿ ನಾವೆಲ್ಲ ಒಂದು ಎನ್ನುವ ಕೂಗು ಕೇಳಿ ಬರುತ್ತಿತ್ತು. ಎರಡು ದಿನದ ಈ ಸಂಭ್ರಮದ ಕಳೆ ಅಚ್ಚೆ ಹಾಕಿ ಮನದಲ್ಲಿ ಬಚ್ಚಿ ಕುಳಿತಿದೆ.

ಲಕ್ಷ್ಮೀ ಬಾಗಲಕೋಟೆ

ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next