Advertisement

Bengaluru Kambala: ಬೆಂಗಳೂರಿಗೂ ಕಾಲಿಟ್ಟ ಕಂಬಳ

11:20 AM Nov 19, 2023 | Team Udayavani |

ಕಂಬಳ ಅಂದರೆ ಗಂಪ+ಕಲ (ಗಂಪ ಕೆಸರು) ಕೆಸರು ಮಣ್ಣಿನಿಂದ ಕೂಡಿದ ವಿಶಾಲವಾದ ಭತ್ತ ಬೆಳೆಯುವ ಗದ್ದೆ. ಅತಿ ಸಣ್ಣ ಸಾಮಾನ್ಯ ರೈತನ ಎರಡು ಎಕರೆ ವಿಶಾಲವಾದ ಭತ್ತ ಬೆಳೆಯುವ ಗದ್ದೆಯಾದರೆ, ಗುತ್ತು, ಬರ್ಕೆ, ಬಾವ, ಸೀಮೆ ಹೀಗೆ ಅವರವರ ಅಂತಸ್ತಿಗನುಗುಣವಾಗಿ ಸುಮಾರು 30 ಎಕರೆ ವಿಸ್ತೀರ್ಣದವರೆಗೂ ಕಂಬಳ ಗದ್ದೆಗಳು ಕರಾವಳಿಯಲ್ಲಿ ನಿರ್ಮಾಣವಾಗುತ್ತಿದ್ದವು. ಕಂಬಳ ಗದ್ದೆಯ ನಿರ್ಮಾಣದ ಕುರಿತು “ತಾಳಿಪ್ಪಾಡಿಯ ಶಾಸನ’  ಕಂಬಳ ಗದ್ದೆಯ ಉದ್ದಗಲ (ವಿಸ್ತೀರ್ಣ)ದ ಕುರಿತು ಶೃಂಗೇರಿಯ ಶಾಸನ, ಕಂಬಳ್ಳೋತ್ಸವವನ್ನು ವಿಜೃಂಭಣೆಯಂದ ಆಚರಣೆ ಮಾಡಿದ ಕುರಿತು ಕಲ್ಲು ಮಾಗಣೆಯ ಶಾಸನ, ಕಂಬಳ ಗದ್ದೆಯನ್ನು ನಿರ್ಮಾಣ ಮಾಡಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಭಕ್ತ ನೀಡಿದ ಸೂರಾಲಿನ ಶಾಸನ, ಹೀಗೆ ಹತ್ತು ಹಲವು ಶಾಸನಗಳು ಕಂಬಳ ಗದ್ದೆಯ ಮಹತ್ವದ ಕುರಿತು ಬೆಳಕು ಚೆಲ್ಲುತ್ತವೆ.

Advertisement

ಕಂಬಳ ಕಣ್ಣಿಗೆ ಹಬ್ಬ

ವಿಶಾಲವಾದ ಕೆಸರು ಮಣ್ಣಿನಿಂದ ಕೂಡಿದ ಕಂಬಳ ಗದ್ದೆಯ ಉಳುಮೆಗೆ ನೂರಾರು ಜತೆ ಕೋಣಗಳು, ಸಾವಿರಾರು ಸಂಖ್ಯೆಯ ಜನಗಳು, ಕಂಬಳ್ಳೋತ್ಸವದಲ್ಲಿ ಪಾಲ್ಗೊಳ್ಳುವ ರೈತಾಪಿ ವರ್ಗದ ಜನಸ್ತೋಮಕ್ಕೆ ಅಂತಸ್ತಿಗನುಗುಣವಾಗಿ ಅತಿಥಿ ಸತ್ಕಾರ, ಹೀಗೆ ಆ ಊರಿನ ಜಾತ್ರೆಯಾಗಿ ಸಂಭ್ರಮಿಸುವ ದಿನಗಳು, ಆನಂದಿಸುವ ಕ್ಷಣಗಳು, ಹೀಗೆ ಉಳುಮೆಯ ಕೊನೆಯಲ್ಲಿ ಭಾಗವಹಿಸಿದ ಕೋಣಗಳ ಓಟಕ್ಕೆ ಸಮರ್ಪಕವಾದವುಗಳನ್ನು  ಸಾಲಾಗಿ ನಿಲ್ಲಿಸಿ ಓಡಿಸುವ ಆ ದೃಶ್ಯವೇ ರೋಮಾಂಚನಕಾರಿ. ಅಡ್ಡ-ದಿಡ್ಡಿಯಾಗಿ ಓಡುವ, ಕೆಸರು ಮಣ್ಣಿನಲ್ಲಿ ಬೀಳುವ, ಬಿದ್ದವರು ಎದ್ದು ಮತ್ತೆ ಓಡುವ ಹೀಗೆ ಕೊನೆಯಲ್ಲಿ ಗೆದ್ದವರಿಗೆ ಎಲೆ-ಅಡಿಕೆ, ನಿಂಬೆ ಹಣ್ಣು ಎಳನೀರ ಗೊನೆ ಬಹುಮಾನ ನೀಡುವ ಈ ದೃಶ್ಯಾವಳಿಗಳನ್ನು ಕಣ್‌ ತುಂಬಿಸಿ ಆನಂದಿಸಿಕೊಳ್ಳುವ ಜನಮಾನಸದ ಸಂಭ್ರಮವೇ ಒಂದು ದೊಡ್ಡ ಉತ್ಸವ. ಕಂಬಳ ಆಯೋಜಕರಿಗೆ ಸಲ್ಲುವ ಗೌರವ.

ಭಕ್ತಿ ಪ್ರಧಾನ ಕಂಬಳ

ವಿಶಾಲವಾದ ಗದ್ದೆ, ಗದ್ದೆ ಉಳುಮೆಯಿಂದ ಮೊದಲ್ಗೊಂಡು, ಭತ್ತದ ನಾಟಿ, ಅಥವಾ ಬಿತ್ತನೆ ಕೆಲಸ, ಕಟಾವು ಮುಗಿಸಿ ಮನೆಯಂಗಳಕ್ಕೆ ತರುವಲ್ಲಿಗೆ ಮಾನವ ಪ್ರಯತ್ನದೊಂದಿಗೆ ದೈವ-ದೇವರ ಅನುಗ್ರಹವು ಬಹುಮುಖ್ಯ. ಈ ಹಿನ್ನೆಲೆಯಲ್ಲಿ ಭೂತಾರಾಧನೆ, ನಾಗಾರಾಧನೆ, ನಂಬಿದ ದೇವರಿಗೆ ಪ್ರಾರ್ಥನೆ, ಹರಕೆ ಸಲ್ಲಿಸುವುದು ಅನಿವಾರ್ಯ. ಕಂಬಳ ಗದ್ದೆಯು ಪಾವಿತ್ರ್ಯತೆಯ ನಿಟ್ಟಿನಲ್ಲಿ ವಿವಿಧ ರೀತಿಯ ಆಚರಣೆ, ಆರಾಧನೆಗಳು, ಕಂಬಳಾಚರಣೆಯ ಅಂಗವಾಗಿ ಈ ಸಾಂಪ್ರದಾಯಿಕ ಕಂಬಳಗಳು “ಭಕ್ತಿ ಪ್ರಧಾನ’ ಕಂಬಳಗಳೆನಿಸಿದವು. ಒಂದು ಕಾಲದಲ್ಲಿ ಇಂತಹ ಸಾಂಪ್ರದಾಯಿಕ ಕಂಬಳಗಳು ಕೇವಲ ಕಂಬಳಾಚರಣೆಗಳು ಮಾತ್ರವಲ್ಲದೆ ಒಂದೊಂದು ತಿಂಗಳ ಜಾತ್ರೆಯಾಗಿ ವಿವಿಧ ಮನರಂಜನೆಗಳೊಂದಿಗೆ ರೈತರ ಕೃಷಿ ಉಪಕರಣಗಳ ಕೊಡು-ಕೊಳ್ಳುವ ವ್ಯವಹಾರ ಕೇಂದ್ರಗಳಾಗಿಯೂ ಪ್ರಸಿದ್ಧಿ ಪಡೆದುದು ಬಹುಮುಖ್ಯವಾದ ಅಂಶ. ಉದಾ: ಮುಲ್ಕಿ ಸೀಮೆಯ ಅರಸು ಕಂಬಳ ಹಾಗೂ ವಂಡಾರು ಬೀಡಿನ ಕಂಬಳಾಚರಣೆಗಳು. ಇಂತಹ ಪ್ರಮುಖ ಕಂಬಳಗಳ ದಿನ ನಿಗದಿಯಾದ ನಂತರ ಕಂಬಳ್ಳೋತ್ಸವ ಮುಗಿಯುವವರೆಗೆ ಆ ಊರಿನಲ್ಲಿ ಯಾವುದೇ ಶುಭ ಸಮಾರಂಭಗಳಿಗೆ ಅವಕಾಶವಿರಲಿಲ್ಲವೆನ್ನುವುದು ಕಂಬಳ ಗದ್ದೆಯ ಆಚರಣೆಯ ಪ್ರಾಮುಖ್ಯತೆಗೆ ನೀಡುತ್ತಿದ್ದ ಸಹಕಾರಕ್ಕೆ ಸಾಕ್ಷಿಯಾಗುತ್ತದೆ.

Advertisement

ವಿವಿಧ ಪ್ರಕಾರಗಳು, ಆಧುನಿಕತೆಯ ಸ್ಪರ್ಶ!

ಇಂದು ನಾವು ಮೂರು ತರದ ಕಂಬಳಗಳನ್ನು ಕಾಣಬಹುದು. 1970ರ ಫೆಬ್ರವರಿ ತಿಂಗಳ ಮೊದಲ ಭಾನುವಾರದಂದು ಕಾರ್ಕಳ ತಾಲೂಕಿನ ಬಜಗೋಳಿ ಪೇಟೆಯಲ್ಲಿ “ಲವ-ಕುಶ’ ಜೋಡುಕೆರೆಯ ಕಂಬಳವು ಪ್ರಾರಂಭಿಸಲ್ಪಟ್ಟು ನೇಗಿಲು, ಹಗ್ಗ, ಅಡ್ಡ ಹಲಗೆ ಮತ್ತು ಕಣೆಹಲಗೆಗಳೆಂಬ ನಾಲ್ಕು ವಿಭಾಗಗಳನ್ನು ಒಳಗೊಂಡ ಆಧುನಿಕ ಕಂಬಳ ಪ್ರಾರಂಭಿಸಲ್ಪಟ್ಟಿತು.

ಹಳೆಯ ಸಂಪ್ರದಾಯದೊಂದಿಗೆ ಭಕ್ತಿ ಪ್ರಧಾನವಾಗಿ ಆಚರಣೆ ಹಾಗೂ ಆರಾಧನೆಯನ್ನು ಒಳಗೊಂಡ “ಭಕ್ತಿ ಪ್ರಧಾನವಾದ ಕಂಬಳ. ಭಕ್ತಿ ಮತ್ತು ಶಕ್ತಿ ಪ್ರಧಾನವಾದ ಆಧುನಿಕ ಕಂಬಳಗಳು. ಹಳೆಯ ಸಂಪ್ರದಾಯಗಳನ್ನು ಉಳಿಸಿಕೊಂಡು, ಆಧುನಿಕತೆಯ ಸ್ಪರ್ಶಗಳೊಂದಿಗೆ ಆಚರಿಸಲ್ಪಡುವ “ಹಳೆ ಬೇರು ಹೊಸ ಚಿಗುರು’ ಅನ್ನುವ ಕಂಬಳ ಹೀಗೆ ಕಂಬಳದಲ್ಲಿ ಕ್ರಮೇಣ ಕೋಣಗಳ ಸ್ಪರ್ಧೆಯೇ ಮುಖ್ಯವಾಗಿ ಆಧುನಿಕ ಸೌಕರ್ಯಗಳೊಂದಿಗೆ ಜನಾಕರ್ಷಣೆಗೆ ಕಾರಣವಾಯಿತು.

ನವೆಂಬರದ ಸಂಕ್ರಮಣದಿಂದ ಡಿಸೆಂಬರ್‌ ತಿಂಗಳ ಸಂಕ್ರಮಣದ ಮಧ್ಯೆ ಹೆಚ್ಚಿನಲ್ಲಿ ಸಾಂಪ್ರದಾಯಿಕ ಕಂಬಳಗಳು ನೆರವೇರಿದರೆ ನವೆಂಬರ್‌ ತಿಂಗಳ ಮೊದಲ ವಾರದಿಂದ ಮಾರ್ಚ್‌ ತಿಂಗಳ ಕೊನೆಯವರೆಗೆ ಆಧುನಿಕ ಕಂಬಳಗಳು ಸಂಘಟಿಸಲ್ಪಡುತ್ತವೆ. ಅವಶ್ಯಕತೆಗಳಿಗನು­ಗುಣವಾಗಿ ನೂತನ ಪ್ರಯೋಗಗಳು ಪೆಟ್ರೋಮ್ಯಾಕ್ಸ್‌, ಟ್ಯೂಬ್‌ ಲೈಟ್‌, ಪ್ಲಡ್‌ ಲೈಟ್‌, ವಿಡಿಯೋ ಫಿನಿಶರ್‌ ಲೇಸರ್‌ ಬೀಮ್‌ ಸಮಯ (ಠಿಜಿಞಜಿnಜs) ಸಹತ ಕಂಬಳದಲ್ಲಿ ಪಾರದರ್ಶತೆಗೆ ಕಾರಣವಾದವು.  ಕಂಬಳ ಕ್ಷೇತ್ರದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು 5 ಸಾವಿರಕ್ಕಿಂತ ಹೆಚ್ಚು ಮಂದಿ ನೆಮ್ಮದಿಯ ಬದುಕನ್ನು ಸಾಗಿಸುತ್ತಿದ್ದಾರೆ.

ಅಡೆತಡೆಗಳನ್ನು ದಾಟಿ ನಿಂತ ಆಚರಣೆ

ಕಂಬಳ ಕ್ಷೇತ್ರ ಅನೇಕ ಏಳು-ಬೀಳುಗಳನ್ನು ಅಗ್ನಿಪರೀಕ್ಷೆಯನ್ನು ಕಾನೂನಿನ ಹೋರಾಟವನ್ನು ಎದುರಿಸಬೇಕಾಯಿತು. ಕಂಬಳ ಉಳಿಸುವುದಕ್ಕಾಗಿ ಒಂದೆಡೆ ಕಾನೂನಿನ ಹೋರಾಟವಾದರೆ ಮತ್ತೂಂದೆಡೆ ಸಂಘಟಿತವಾದ ಅಹಿಂಸಾತ್ಮಕ ಪ್ರತಿಭಟನೆ. ಸುಮಾರು 150ಕ್ಕೂ ಮಿಕ್ಕಿ ಜತೆ ಕೋಣಗಳೊಂದಿಗೆ 25 ಸಾವಿರಕ್ಕೂ ಹೆಚ್ಚು ಕಂಬಳ ಪ್ರೇಮಿಗಳು ನಡೆಸಿದ ಪ್ರತಿಭಟನಾ ಹೋರಾಟ ಇಂದಿಗೂ ಮರೆಯಲಾರದ ಘಟನೆಯಾಗಿದೆ. ಯಾವುದೇ ಜಾತಿ-ಮತವಿಲ್ಲದ, ಶ್ರೀಮಂತರು-ಬಡವರು ಎನ್ನುವ ತಾರತಮ್ಯವಿಲ್ಲದೆ ಕುಟುಂಬ ಸಹತವಾಗಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸುವ ಒಂದೇ ಒಂದು ಹಿಂಸಾತ್ಮಕವಾದ ಘಟನೆಗೆ ಅವಕಾಶವಿಲ್ಲದಂತೆ ಸಂಘಟಿಸಲ್ಪಡುವ ಜಾನಪದ ಕ್ರೀಡೆ ಕಂಬಳ ಮಾತ್ರ.

ಜನಪ್ರತಿನಿಧಿಗಳು, ಪಕ್ಷಬೇಧವಿಲ್ಲದೆ ಎಲ್ಲರೂ ಒಮ್ಮತದಿಂದ ವಿಧಾನಸಭೆ, ವಿಧಾನಪರಿಷತ್‌, ಲೋಕಸಭೆಯಲ್ಲಿಯೂ ಒಮ್ಮತದ ನಿರ್ಣಯ

ಮೂಲಕ ಕಂಬಳ ಉಳಿಸಲು ನೀಡಿದ ಸಹಕಾರ ಅವಿಸ್ಮರಣೀಯ. ಕಂಬಳ ಒಗ್ಗಟ್ಟಿನ ಹೋರಾಟದ ಕುರಿತು ಪತ್ರಿಕೆಯೊಂದು ಬರೆದ “ಕಂಬಳದಲ್ಲಿರುವ ಒಗ್ಗಟ್ಟು ನೇತ್ರಾವತಿ ತಿರುವು ಯೋಜನೆಯಲ್ಲಿರು­ತ್ತಿದ್ದರೆ, ಯಾವತ್ತೋ ಯಶಸ್ಸು ದೊರಕುತ್ತಿತ್ತು’ ಅನ್ನುವ ಮಾತು ಕಂಬಳ ಉಳಿವಿಗಾಗಿ ನಡೆಸಿದ ಹೋರಾಟಕ್ಕೆ ನೀಡಿದ ಪ್ರಶಸ್ತಿ ಪತ್ರದಂತಿತ್ತು.

ಮೂಲಸೌಕರ್ಯದ ಸದ್ಬಳಕೆ:

ಕಾರ್ಕಳದ ಮಿಯ್ನಾರಿನಲ್ಲಿ ಮೂಲಭೂತ ಸೌಕರ್ಯ, ಲವ-ಕುಶ ಶಾಶ್ವತ ಕಂಬಳ ಕ್ರೀಡಾಂಗಣ, ಮೂಡುಬಿದಿರೆಯ ಕೋಟೆ ಚೆನ್ನಯ್ಯ ಕ್ರೀಡಾಂಗಣಗಳು ನಿರಂತರವಾಗಿ ಕಂಬಳ ತರಬೇತಿಗೆ ಪೂರಕವಾಗಿ ಬಳಕೆಯಾಗುತ್ತಿದೆ.  ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೋಡುಕೆರೆ ನಿರ್ಮಾಣ ಮಾಡಿ ಕಂಬಳವನ್ನು ಅಂತಾರಾಷ್ಟ್ರೀಯವಾಗಿ ಪರಿಚಯಿಸುವ ಪ್ರಯತ್ನ ಇದೇ  ನವೆಂಬರ್‌ ತಿಂಗಳ 25-26ರಂದು ಅದ್ಧೂರಿಯಾಗಿ ನಡೆಯುತ್ತಿದೆ.

ಕಂಬಳ ರಕ್ಷಣೆ,  ನಿರ್ವಹಣೆ ತರಬೇತಿಗೂ ಇದೆ ಅಕಾಡೆಮಿ:

ಅನೇಕ ದಾಖಲೆಗಳನ್ನು ನಿರ್ಮಿಸಿದ ತರಬೇತಿ ಸಂಸ್ಥೆ ಇದು. ಈ ಸಂಸ್ಥೆಯ ಮೊದಲ ತಂಡದಲ್ಲಿ ತರಬೇತಿ ಪಡೆದ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಕಕ್ಯೆ ಪದವು ಕಂಬಳದಲ್ಲಿ ಮಿಜಾರು ಪ್ರಸಾದ್‌ ನಿಲಯ ಶ್ರೀ ಶಕ್ತಿ ಪ್ರಸಾದ್‌ ಶೆಟ್ಟರ ಕೋಣಗಳನ್ನು ಓಡಿಸಿ 100 ಮೀಟರ್‌ ಓಟವನ್ನು 8.78 ಸೆಕೆಂಡ್‌ಗಳಲ್ಲಿ ಓಡಿಸಿ ಜಾಗತಿಕ ದಾಖಲೆ  ನಿರ್ಮಿಸಿದುದು ಕಂಬಳ ಬಗ್ಗೆ ಜಗತ್ತು ಕಣ್ತೆರೆಯುವಂತೆ ಮಾಡಿದೆ.  ಕಂಬಳಕ್ಕೆ ಮೊದಲ ರಾಜ್ಯೋತ್ಸವ  ಪ್ರಶಸ್ತಿ ಬಾಕೂìರು ಶಾಂತಾರಾಮ ಶೆಟ್ಟಿರಿಗೆ ನಂತರದಲ್ಲಿ ಮೂಲ್ಕಿ ಪಯ್ಯೊಟ್ಟು ಸದಾಶಿವ ಸಾಲ್ಯಾನ್‌ರಿಗೆ ನೀಡಿದ ಪ್ರಶಸ್ತಿ ಕಂಬಳ ಗೌರವವನ್ನು ಇನ್ನಷ್ಟು ಹೆಚ್ಚಿಸಿದೆ. 1994ರಲ್ಲಿ ಬಜಗೋಳಿ ಕಂಬಳದ ಮುಖ್ಯಸ್ಥರಾದ ಮೂಡುಕೋಡಿ ಗುಣಪಾಲ ಜೈನಿವರಿಗೆ ಮತ್ತು ಜಿಲ್ಲಾ ಕಂಬಳ ಸಮಿತಿಯ ಸ್ಥಾಪಕ ಕಾರ್ಯದರ್ಶಿ

ಕೆ. ಗುಣಪಾಲ ಕಡಂಬರಿಗೆ ಕಂಬಳ ಸಂರಕ್ಷಣ ಮತ್ತು ನಿರ್ವಹಣೆಗಾಗಿ “ಕರ್ನಾಕಕ ರಾಜ್ಯ ದಸರಾ ಪ್ರಶಸ್ತಿ’ ನೀಡಿ ಕರ್ನಾಟಕ ಸರ್ಕಾರ ಪ್ರೋತ್ಸಾಹಿಸಿದ್ದು ಒಂದು ಇತಿಹಾಸ.  ಬೆಳ್ತಂಗಡಿಯ ಶಾಸಕ ಗಂಗಾಧರ ಗೌಡರು ಕ್ರೀಡಾ ಸಚಿವರಾಗಿದ್ದ ಅವಧಿಯಲ್ಲಿ ಓಟಗಾರರಿಗ ಮಾಸಾಶನ ನೀಡಿದ್ದು, ಕೆ. ಅಭಯಚಂದ್ರ ಜೈನ್‌ ಕ್ರೀಡಾ ಸಚಿವರಾಗಿದ್ದ ಅವಧಿಯಲ್ಲಿ ಕಂಬಳ ಓಟಗಾರರು ಹಾಗೂ ಪ್ರೋತ್ಸಾಹಕರಿಗೆ”ಕ್ರೀಡಾರತ್ನ ಪ್ರಶಸ್ತಿ’ ಪಾರಂಭಿಸಿದ್ದು ಕಂಬಳಕ್ಕೆ ದೊರಕಿದ ದೊಡ್ಡ ಯಶಸ್ಸು.

ಲೇಖನ:

ಕೆ. ಗುಣಪಾಲ ಕಡಂಬ,

ಕಂಬಳ ಅಕಾಡೆಮಿಯ ಸಂಚಾಲಕ

ಫೋಟೋಸ್‌:

ಆ್ಯಸ್ಟ್ರೋ ಮೋಹನ್‌ 

Advertisement

Udayavani is now on Telegram. Click here to join our channel and stay updated with the latest news.

Next