Advertisement

Bengaluru: ನಗರದಲ್ಲಿ ಬೈಕ್‌ ಕಳ್ಳತನ ತಡೆಗೆ ಸೈರನ್‌ ಅಳವಡಿಸಿ: ಕಮಿಷನರ್‌

12:05 PM Sep 28, 2024 | Team Udayavani |

ಬೆಂಗಳೂರು: ನಗರದಲ್ಲಿ ದ್ವಿಚಕ್ರ ವಾಹನ ಕಳವು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದ್ವಿಚಕ್ರ ವಾಹನಗಳ ಮಾರಾಟ ಸಂದರ್ಭದಲ್ಲಿ ಕೆಲ ಸುರಕ್ಷಿತ ಪರಿಕರಗಳನ್ನು ಅಳವಡಿಸುವಂತೆ ನಗರದ ದ್ವಿಚಕ್ರ ವಾಹನಗಳ ವಿತರ ಕರಿಗೆ ಪತ್ರ ಬರೆಯು ವುದಾಗಿ ನಗರದ ಪೊಲೀಸ್‌ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ದ್ವಿಚಕ್ರ ವಾಹನಗಳ ಕಳವು ಹೆಚ್ಚಳವಾಗಿದ್ದು, ದ್ವಿಚಕ್ರ ವಾಹನಗಳಲ್ಲಿ ಸುರಕ್ಷಿತ ಪರಿಕರಗಳು ಸಮಂಜಸವಾಗಿಲ್ಲದ ಕಾರಣ ಕಳ್ಳರು ಸುಲಭವಾಗಿ ದ್ವಿಚಕ್ರ ವಾಹನಗಳ ಕಳ್ಳತನ ಮಾಡುತ್ತಿದ್ದಾರೆ.ಹೀಗಾಗಿ ನಗರದಲ್ಲಿ ದ್ವಿಚಕ್ರ ವಾಹನಗಳ ಕಳವು ತಡೆ ನಿಟ್ಟಿನಲ್ಲಿ ದ್ವಿಚಕ್ರ ವಾಹನ ಮಾರಾಟ ಸಂದರ್ಭದಲ್ಲಿ ಅತ್ಯಾಧುನಿಕ ಪರಿಕರಗಳನ್ನು ಅಳವಡಿಸಿ, ಗ್ರಾಹಕರಿಗೆ ಮಾಹಿತಿ ನೀಡುವಂತೆ ನಗರದ ದ್ವಿಚಕ್ರ ವಾಹನಗಳ ವಿತರಕರಿಗೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಪಿಎಸ್‌, ವೀಲ್‌ಲಾಕ್‌, ಪ್ರಬಲ ಹ್ಯಾಂಡಲ್‌ ಲಾಕ್‌:

ದ್ವಿಚಕ್ರ ವಾಹನಗಳ ಮಾರಾಟದ ವೇಳೆ ಜಿಪಿಎಸ್‌ ಸಿಸ್ಟಂ, ವೀಲ್‌ ಲಾಕಿಂಗ್‌, ಪ್ರಬಲ ಹ್ಯಾಂಡಲ್‌ ಲಾಕ್‌, ನಕಲಿ ಕೀ ಅಥವಾ ಸರ್ಕ್ನೂಟ್‌ ಬ್ರೇಕ್‌ ಮಾಡಿ ವಾಹನ ಕಳ್ಳತನಕ್ಕೆ ಯತ್ನಿಸಿದಾಗ ಸೈರನ್‌ ಆಗುವಂತಹ ವ್ಯವಸ್ಥೆ ಅಥವಾ ಮೊಬೈಲ್‌ಗೆ ಮಾಹಿತಿ ಬರುವಂತಹ ವ್ಯವಸ್ಥೆ ಮಾಡಬೇಕು ಸೇರಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಆ್ಯಂಟಿ ಥೆಫ್ಟ್ ಮೆಷರ್ಸ್‌ ಅಳವಡಿಸುವಂತೆ ಡಿಸ್ಟ್ರಿಬ್ಯೂಟರ್‌ಗಳಿಗೆ ಸೂಚಿಸ ಲಾಗುವುದು.

ಅದರಿಂದ ದ್ವಿಚಕ್ರ ವಾಹನಗಳ ಕಳವು ನಿಯಂತ್ರಿಸಲು ಸಹಕಾರಿಯಾಗಲಿದೆ. ಈ ಬಗ್ಗೆ ಇತ್ತೀಚೆಗೆ ನಡೆದ ದ್ವಿಚಕ್ರ ವಾಹನಗಳ ಉತ್ಪಾದಕರ ಸಮ್ಮೇಳನದಲ್ಲಿಯೂ ಗಮನ ಸೆಳೆಯಲಾಗಿದೆ. ಸಾರ್ವಜನಿಕರು ಸಹ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆಯೂ ತಿಳಿಸುವುದಾಗಿ ಹೇಳಿದರು. ಹಾಗೆಯೇ ವಾಹನ ಮಾಲೀಕರು ಕೂಡ ಕೆಲವೊಂದು ಕ್ರಮಕೈಗೊಳ್ಳಬೇಕಾಗುತ್ತದೆ. ನಿರ್ಜನ ಪ್ರದೇಶ ಹಾಗೂ ಸಿಸಿ ಕ್ಯಾಮೆರ ಇಲ್ಲದ ಸ್ಥಳದಲ್ಲಿ ನಿಲುಗಡೆ ಮಾಡಬಾರದು ಎಂದು ಆಯುಕ್ತರು ಕೋರಿದ್ದಾರೆ.

Advertisement

ರಾಜಧಾನಿಯಲ್ಲಿ ಪ್ರತಿದಿನ 16 ಬೈಕ್‌ ಕಳವು

ನಗರದಲ್ಲಿ ಒಟ್ಟು ಸುಮಾರು 80 ಲಕ್ಷ ದ್ವಿಚಕ್ರ ವಾಹನಗಳಿವೆ. ಪ್ರತಿದಿನ ಸುಮಾರು ಒಂದೂವರೆಯಿಂದ ಎರಡು ಸಾವಿರ ದ್ವಿಚಕ್ರ ವಾಹನಗಳು ಹೊಸದಾಗಿ ನೋಂದಣಿಯಾಗುತ್ತಿವೆ. ಈ ಪೈಕಿ ಕಳೆದ 3 ವರ್ಷಗಳಿಂದ ನಿತ್ಯ ಸರಾಸರಿ ಸುಮಾರು 14ರಿಂದ 16 ದ್ವಿಚಕ್ರ ವಾಹನಗಳು ಕಳ್ಳತನವಾಗುತ್ತಿವೆ. ಕಳೆದ 3 ವರ್ಷಗಳಲ್ಲಿ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 13,628 ದ್ವಿಚಕ್ರ ವಾಹನ ಕಳವು ಪ್ರಕರಣಗಳು ದಾಖಲಾಗಿವೆ. ಅದರಂತೆ 2022-4,785, 2023-5,580, 2024(ಆ.31)- 3,263 ದ್ವಿಚಕ್ರ ವಾಹನಗಳು ಕಳ್ಳತನವಾಗಿವೆ. ಈ ಪೈಕಿ 4,420 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪಟಾಕಿ ವರ್ತಕರ ಜತೆ ಪೊಲೀಸ್‌ ಆಯುಕರ ಸಭೆ

ಬೆಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಪಟಾಕಿ ವರ್ತಕರೊಂದಿಗೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಶುಕ್ರವಾರ ಸಭೆ ನಡೆಸಿದರು.

ಸಭೆಯಲ್ಲಿ ಬಿಬಿಎಂಪಿ, ಬೆಸ್ಕಾಂ, ಅಗ್ನಿಶಾಮಕ ಮತ್ತು ತುರ್ತು ಸೇವೆ, ಜಿಎಸ್‌ಟಿ ಇಲಾಖೆಗಳ ಪ್ರತಿನಿಧಿಗಳು ಹಾಗೂ ಪಟಾಕಿ ವರ್ತಕರು ಭಾಗಿಯಾಗಿದ್ದರು.

ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಮಾರಾಟ ಮಾಡಲು ದಾಸ್ತಾನು ಮಾಡಲಾಗಿದ್ದ ಪಟಾಕಿಗಳ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ 17 ಮಂದಿ ಮೃತಪಟ್ಟಿದ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆ ವ್ಯಾಪ್ತಿಯಲ್ಲಿ ನಡೆದಿತ್ತು. ನಗರದಲ್ಲಿ ಅಂತಹ ಯಾವುದೇ ದುರಂತ ಮರುಕಳಿಸದಂತೆ ಮುನ್ನೆ ಚ್ಚರಿಕೆ ವಹಿಸಿರುವ ಬೆಂಗಳೂರು ಪೊಲೀಸ್‌ ಇಲಾಖೆ, ವರ್ತಕರೊಂದಿಗೆ ಸಭೆ ನಡೆಸಿ ವಿವಿಧ ಇಲಾಖೆಗಳ ಅಹವಾಲುಗಳನ್ನು ಸ್ವೀಕರಿಸಿದೆ.

ಪಟಾಕಿ ಮಾರಾಟಗಾರರು ಪೊಲೀಸ್‌, ಅಗ್ನಿಶಾಮಕ, ಬಿಬಿಎಂಪಿ, ಬೆಸ್ಕಾಂ ಇಲಾಖೆಗಳಿಂದ ಅನುಮತಿ ಪಡೆದಿರಬೇಕು. ಹಾಗೂ ಆಯಾ ಇಲಾಖೆಗಳು ನಿಗದಿಪಡಿಸಿರುವ ನಿಯಮಗಳನ್ನು ಪಾಲಿಸಬೇಕು. ಅಲ್ಲದೇ, ಸುಪ್ರೀಂ ಕೋರ್ಟ್‌ ಆದೇಶದಂತೆ ಹಸಿರು ಪಟಾಕಿಗಳನ್ನು ಮಾತ್ರವೇ ಮಾರಾಟ ಮಾಡಬೇಕು. ನಕಲಿ ಪಟಾಕಿ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next