Advertisement

ಸಿಡಿಲಬ್ಬರದ ಮಳೆಗೆ ಕುರಿಗಾಹಿ ಸಾವು 

06:00 AM May 12, 2018 | Team Udayavani |

ಬೆಂಗಳೂರು: ರಾಜ್ಯದ ಮೇಲೆ ಹಾದು ಹೋಗಿರುವ ಮೇಲ್ಮೆ„ ಸುಳಿಗಾಳಿ ಮತ್ತು ಕಡಿಮೆ ಒತ್ತಡದ ತಗ್ಗು (ಟ್ರಫ್) 
ಉಂಟಾಗಿರುವುದರಿಂದ ಶುಕ್ರವಾರ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಅಬ್ಬರಿಸಿದೆ.
ಶನಿವಾರ ಕೂಡ ಇದು ಮುಂದುವರಿಯುವ ಸಾಧ್ಯತೆ ಇದೆ.

Advertisement

ಸಿಡಿಲಬ್ಬರದ ಮಳೆಗೆ ಬಾಗಲಕೋಟೆ ತಾಲೂಕಿನ ಗುಂಡನಪಲ್ಲೆ ಗ್ರಾಮದಲ್ಲಿ ಮಹದೇವಪ್ಪ ದಳವಾಯಿ (40) ಎಂಬುವರು ಮೃತಪಟ್ಟಿದ್ದಾರೆ. ಹೊಲದ ಪಕ್ಕ ಕುರಿ ಕಾಯುತ್ತಿರುವ ವೇಳೆ ಸಿಡಿಲು ಬಡಿಯಿತು. ಬೆಳ್ತಂಗಡಿ ತಾಲೂಕಿನಲ್ಲಿ ಸಿಡಿಲಿಗೆ ಇಬ್ಬರು ಗಾಯಗೊಂಡಿದ್ದಾರೆ. ಇದೇ ವೇಳೆ, ದಕ್ಷಿಣ ಮತ್ತು ಉತ್ತರ ಒಳನಾಡು, ಕರಾವಳಿ ಪ್ರದೇಶ, ಮಲೆನಾಡಿನಲ್ಲಿ ಶುಕ್ರವಾರ ಸಂಜೆ ಮಳೆಯಾಗಿದೆ. ಮತದಾ ನದ ಮುನ್ನಾದಿನ ಸುರಿದ ಮಳೆಯು ಚುನಾವಣಾ ಕಾವಿಗೆ ತಣ್ಣೀರೆರಚಿತು. ಕೊನೆಯ ಹಂತದ ಬಿರುಸಿನ ಪ್ರಚಾರದಲ್ಲಿ ಮುಳುಗಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳ ಉತ್ಸಾಹಕ್ಕೆ ಮಳೆ ಬ್ರೇಕ್‌ ಹಾಕಿತು. ಇದರಿಂದ ಕೆಲವರು ಹಿಡಿಶಾಪ ಹಾಕಿದರೆ, ಮತ್ತೆ ಹಲವರು ಕೈ-ಕೈ ಹಿಸುಕಿಕೊಂಡರು.

ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಹೆಚ್ಚಿತ್ತು. ಮಂಡ್ಯ, ತುಮಕೂರು, ಕೊಡಗು, ಹಾಸನ, ಕೋಲಾರ, ಮೈಸೂರು, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರದಲ್ಲಿ ಕನಿಷ್ಠ 40ರಿಂದ ಗರಿಷ್ಠ 63 ಮಿ.ಮೀ.ಮಳೆಯಾಗಿದೆ. ಇನ್ನು ಉತ್ತರ ಕರ್ನಾಟಕದ ಬೆಳಗಾವಿ, ರಾಯಚೂರು, ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ, ಧಾರವಾಡ, ವಿಜಯಪುರ  ಸೇರಿದಂತೆ ವಿವಿಧೆಡೆ ಕನಿಷ್ಠ 11ರಿಂದ ಗರಿಷ್ಠ 46.5 ಮಿ.ಮೀ. ಮಳೆ ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ. 

ಮತದಾನಕ್ಕೆ ಮಳೆ ಅಡ್ಡಿ?: ಲಕ್ಷದ್ವೀಪದಿಂದ ತಮಿಳುನಾಡು ನಡುವೆ ಮೇಲ್ಮೆ„ಸುಳಿಗಾಳಿ ಮತ್ತು ಟ್ರಫ್ ಉಂಟಾಗಿದೆ. ಇದು
ರಾಜ್ಯದ ಮೇಲೆ ಹಾದುಹೋಗಿರುವುದರಿಂದ ಮಳೆಯಾಗುತ್ತಿದೆ. ಶನಿವಾರ ಕೂಡ ಈ ಪೂರ್ವಮುಂಗಾರು ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ “ಉದಯವಾಣಿ’ಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತದಾನಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈ ಮಧ್ಯೆ, ಮಳೆಯಿಂದ ರಾಜ್ಯದ ಉಷ್ಣಾಂಶದಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next