ಬೆಂಗಳೂರು: ನಗರದಲ್ಲಿ ಈದ್ ಮಿಲಾದ್ ವೇಳೆ ಸ್ಥಳೀಯ ಪೊಲೀಸರ ಅನುಮತಿ ಪಡೆದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಧ್ವನಿವರ್ಧಕ ಬಳಸಬೇಕು. ಮೆರವಣಿಯಲ್ಲಿ ಡಿ.ಜೆ. ಸೌಂಡ್ ಸಿಸ್ಟಂ ಅಳವಡಿಕೆಗೆ ಅವಕಾಶವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ.16ರಂದು ನಗರಾದ್ಯಂತ ಈದ್ ಮಿಲಾದ್ ಹಬ್ಬ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದವರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳು, ಧ್ವನಿವರ್ಧಕಗಳನ್ನು ಬಳಸಿಕೊಂಡು ನಡಿಗೆಯಲ್ಲಿ ವೈಎಂಸಿಎ ಮೈದಾನ, ಮಿಲ್ಲರ್ ರಸ್ತೆಯ ಖುದ್ದುಸಾಬ್ ಈದ್ಗಾ ಮೈದಾನ, ಶಿವಾಜಿನಗರದ ಚೋಟಾ ಮೈದಾನ, ಭಾರತಿನಗರದ ಸುಲ್ತಾನ್ ಗುಂಟಾ ಮೈದಾನ ಸೇರಿ ಇತರೆಡೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಹಬ್ಬ ಆಚರಣೆ ವೇಳೆ ಕೆಲವೊಂದು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಮೆರವಣಿಗೆ ಸಾಗುವ ಹಾದಿಯಲ್ಲಿ ಸಾರ್ವಜನಿಕರಿಗೆ ಆಡಚಣೆಯಾಗದಂತೆ ಸ್ವಯಂ ಸೇವಕರು ಹಾಗೂ ಆಯೋಜಕರು ರಸ್ತೆಯ ಎರಡೂ ಬದಿಯಲ್ಲಿ ನಿಂತು ಮೆರವಣಿಗೆಗೆ ಸೂಕ್ತ ನಿರ್ದೇಶನ ನೀಡಬೇಕು. ಈ ಮೂಲಕ ಮೆರವಣಿಗೆ ಶಾಂತ ರೀತಿಯಲ್ಲಿ ಸಾಗುವಂತೆ ಸಹಕರಿಸಬೇಕು. ಜತೆಗೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸೂಚಿಸಿದ್ದಾರೆ.
ದೇವಸ್ಥಾನ-ಚರ್ಚ್ ಎದುರು ಘೋಷಣೆ ಕೂಗುವಂತಿಲ್ಲ: ಮೆರವಣಿಗೆಯಲ್ಲಿ ಯಾವುದೇ ಹರಿತ ವಸ್ತು ಜತೆಗೆ ಕೊಂಡೊಯ್ಯಬಾರದು, ಮೆರವಣಿಗೆ ವೇಳೆ ಡಿ.ಜೆ.ಸಿಸ್ಟಂ ಬಳಸಬಾರದು. ಸ್ತಬ್ಧ ಚಿತ್ರಗಳು ಯಾವುದೇ ಪ್ರಚೋದಾನಾತ್ಮಕ ಅಂಶಗಳನ್ನು ಒಳಗೊಂಡಿ ರಬಾರದು. ಯಾವುದೇ ಪೂಜಾ ಸ್ಥಳ (ದೇವಸ್ಥಾನ/ಚರ್ಚ್) ಎದುರು ಘೋಷಣೆ ಕೂಗಬಾರದು. ಆಯೋಜಕರು ಮೆರವಣಿಗೆ ವೇಳೆ ಬೆಸ್ಕಾಂ ನೆರವು ಪಡೆದು ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಈಗಾಗಲೇ ಸೂಚಿಸಲಾಗಿದೆ ಎಂದರು.
ಧ್ವನಿವರ್ಧಕ ಬಳಕೆ: ಮೆರವಣಿಗೆ ವೇಳೆ ಆಯೋಜಕರು ಬೆಂಕಿ ನಂದಿಸುವ ಉಪಕರಣ ಇರಿಸಿಕೊಳ್ಳಬೇಕು. ರಾತ್ರಿ ಮೆರವಣಿಗೆ ಮುಗಿದ ಬಳಿಕ ದ್ವಿಚಕ್ರ ವಾಹನಗಳಲ್ಲಿ ಇಬ್ಬರಿಗಿಂತ ಹೆಚ್ಚಿನವರು ತೆರಳಬಾರದು. ಹಿರಿಯ ನಾಗರಿಕರು, ಶಾಲಾ ಮಕ್ಕಳು ಹಾಗೂ ಇತರರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಬಳಸಬೇಕು ಎಂದು ಹೇಳಿದರು.