ಬೆಂಗಳೂರು: ಭಾರಿ ಮಳೆಯಿಂದ ಬೆಂಗಳೂರಿನಲ್ಲಿ ಹಲವು ಪ್ರದೇಶಗಳು ಜಲಾವೃತವಾಗಿ ಜನರು ಸರಕಾರಕ್ಕೆ ಹಿಡಿ ಶಾಪ ಹಾಕಿದ ಬೆನ್ನಲ್ಲೇ , ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಬಿಎಂಪಿ ಅಧಿಕಾರಿಗಳನ್ನು ಗುರುವಾರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿಟಿ ರೌಂಡ್ಸ್ ನಂತರ ಕೃಷ್ಣಾದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಫುಲ್ ಗರಂ ಆದ ಸಿಎಂ,ಅಧಿಕಾರಿಗಳನ್ನು ಬೆಂಡೆತ್ತಿದರು. ವರ್ಷಪೂರ್ತಿ ಏನು ಕೆಲಸ ಮಾಡುತ್ತೀರಾ? ಮಳೆಗಾಲ ಬರುತತ್ತದೆ ಸಮಸ್ಯೆ ಆಗುತ್ತದೆ ಅನ್ನುವುದು ಗೊತ್ತಾಗುವುದಿಲ್ಲವೇ? ವರ್ಷಪೂರ್ತಿ ಮಲಗಿರೋದು.ಮಳೆ ಬಂದಾಗ ಎಚ್ಚೆತ್ತುಕೊಳ್ಳೋದು.ಇದೇ ಆಗೋಯ್ತು ನಿಮ್ಮ ಹಣೆ ಬರಹ ಎಂದು ಕೆಂಡಾಮಂಡಲವಾಗಿದ್ದಾರೆ.
ಬಿಬಿಎಂಪಿ ಎಂಜಿನಿಯರ್‌ಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಿಎಂ, ನೀವು ನಿಮ್ಮ ಕರ್ತವ್ಯ ಮರೆತಿದ್ದೀರಿ. ಮಳೆಗಾಲ ಕ್ಕೂ ಮುನ್ನ ಚರಂಡಿಗಳ ಹೂಳೆತ್ತಿಸಬೇಕು. ಮಳೆ ನೀರು ಚರಂಡಿಗಳನ್ನು ಸ್ವಚ್ಛ ಗೊಳಿಸಬೇಕು .ಇದು ನಿಮ್ಮ ಕೆಲಸ ಅಲ್ವಾ? ಈ ಕೆಲಸ ಬಿಟ್ಟು ಬೇರೆ ಎಲ್ಲಾ ಕೆಲಸ ಮಾಡುತ್ತೀರಾ. ಫೀಲ್ಡಿಗಿಳಿದು ಕೆಲಸ ಮಾಡಿ. ತಾಂತ್ರಿಕ ವಿಭಾಗವನ್ನು ಬಲಪಡಿಸಿ ಎಂದು ಆಯುಕ್ತರಿಗೆ ಸಿಎಂ ಖಡಕ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಸಿಎಂ ಬಳಿ ಕಣ್ಣೀರು ಹಾಕಿದ್ದ ಕುಗ್ರಾಮದ ವಾಣಿಗೆ 625 ರಲ್ಲಿ 620 ಅಂಕ
ಮಳೆ ಆರಂಭಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕಿತ್ತು, ಎಲ್ಲ ಚರಂಡಿಗಳಲ್ಲಿನ ಹೂಳು ಎತ್ತಿಸಬೇಕಿತ್ತು. ಅದನ್ನು ಮಾಡದೇ ಜನ ಪರದಾಡುವ ಹಾಗೆ ಮಾಡುತ್ತೀರಿ. ವಲಯಗಳ ಆಯುಕ್ತರು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಕಾಮಗಾರಿಗಳನ್ನು ನೀವೇ ಮಾಡಿಸಿ ಬಿಲ್ ಪಾವತಿಸಿ. ಅಧಿಕಾರ ವಿಕೇಂದ್ರೀಕರಣ ಮಾಡಿ. ಎಂಜಿನಿಯರಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೆಲಸ ಮಾಡದ ಎಂಜಿನಿಯರಗಳ ಮೆಲೆ ಕ್ರಮ ಕೈಗೊಳ್ಳಿ
ಎಂದು ಆಯುಕ್ತರಿಗೆ ಸೂಚನೆ ನೀಡಿದ್ದಾರೆ.