Advertisement

ಬೆಂಗಳೂರು: ಚುನಾವಣೆ ಹೆಸರಲ್ಲಿ ಲೂಟಿಗಿಳಿದ ಸೈಬರ್‌ ವಂಚಕರು!

03:33 PM Apr 05, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ರಂಗೇರುತ್ತಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್‌ ವಂಚಕರು ಮತದಾರರ ಮಾಹಿತಿ ಕಳಿಸುವುದಾಗಿ ಚುನಾವಣಾ ಸ್ಪರ್ಧಿ ಗಳಿಂದ ಲಕ್ಷ-ಲಕ್ಷ ಪೀಕಲು ಮುಂದಾದರೆ, ಮತ್ತೊಂದೆಡೆ ಮತದಾರರಿಗೂ ವಿವಿಧ ಪಕ್ಷಗಳ ಹೆಸರಿನಲ್ಲಿ ಲಿಂಕ್‌ ಕಳಿಸಿ ಬ್ಯಾಂಕ್‌ ಖಾತೆಗೆ ಕನ್ನ ಹಾಕಲು ಸಂಚು ರೂಪಿಸಿದ್ದಾರೆ ಎಚ್ಚರ!

Advertisement

ಕರ್ನಾಟಕದ ವಿವಿಧ ಕ್ಷೇತ್ರಗಳ ಚುನಾವಣಾ ಸ್ಪರ್ಧಿಗಳು ಹಾಗೂ ಮತದಾರರೇ ಸದ್ಯಕ್ಕೆ ಸೈಬರ್‌ ಕಳ್ಳರ ಟಾರ್ಗೆಟ್‌. ಚುನಾವಣೆ ಹೊಸ್ತಿಲಲ್ಲಿ ವಿವಿಧ ಆಮಿಷವೊಡ್ಡಿ ಲಕ್ಷ-ಲಕ್ಷ ಪೀಕಲು ಹೊಸ ತಂತ್ರಗಾರಿಕೆ ಕಂಡುಕೊಂಡಿದ್ದಾರೆ. ಇದುವರೆಗೆ ಬ್ಯಾಂಕ್‌ ಸಿಬ್ಬಂದಿ ಹೆಸರಲ್ಲಿ ಓಟಿಪಿ ಪಡೆದು ಖಾತೆಗೆ ಕನ್ನ, ಸೇನಾ ಸಿಬ್ಬಂದಿ, ಬೆಸ್ಕಾಂ ಸಿಬ್ಬಂದಿ ಸೋಗಿನಲ್ಲಿ ವಂಚನೆ, ನೌಕ್ರಿ, ಮ್ಯಾಟ್ರಿಮೊನಿ, ಉಡುಗೊರೆ ಇತ್ಯಾದಿ ಹೆಸರಲ್ಲಿ ದುಡ್ಡು ಲಪಟಾಯಿಸುತ್ತಿದ್ದ ಸೈಬರ್‌ ಕಳ್ಳರಿಗೆ ಕರ್ನಾಟಕ ಚುನಾವಣೆ ವರವಾಗಿ ಪರಿಣಮಿಸಿದೆ. ಈ ಬೆಳವಣಿಗೆ ಬೆನ್ನಲ್ಲೆ ಚುನಾವಣಾ ಹೆಸರಿನ ವಂಚನೆ ಬಗ್ಗೆ ಸೈಬರ್‌ ಕಳ್ಳರ ಗಾಳಕ್ಕೆ ಬೀಳದಂತೆ ಎಚ್ಚರಿಕೆ ವಹಿಸಲು ಸೈಬರ್‌ ಕ್ರೈಂ ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

ಸೈಬರ್‌ ಕಳ್ಳರ ವಿರುದ್ಧ ಎಫ್ಐಆರ್‌: ಆನ್‌ಲೈನ್‌ನಲ್ಲಿ ದುಡ್ಡು ಹಾಕಿ ಹಾಗೂ ನಿಮ್ಮ ಕ್ಷೇತ್ರದ ಮತದಾರರ ಮಾಹಿತಿ, ಮೊಬೈಲ್‌ ನಂಬರ್‌ ಪಡೆಯಿರಿ ಎಂಬುದಾಗಿ ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವ ಸಂಭವನೀಯ ಅಭ್ಯರ್ಥಿಗಳಿಗೆ ಸಂದೇಶ ಕಳಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬಸವನಗುಡಿ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ ಸೂರ್ಯಕುಮಾರಿ ಕೊಟ್ಟ ದೂರಿನ ಆಧಾರದ ಮೇರೆಗೆ ದಕ್ಷಿಣ ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ಈ ಸಾಲಿನ ಚುನಾವಣೆಯಲ್ಲಿ ಬಹುಮತದೊಂದಿಗೆ ಜಯಗಳಿಸಿ. ವಾಟ್ಸ್‌ಆ್ಯಪ್‌, ಎಸ್‌ಎಂಎಸ್‌, ವಾಯ್ಸ ಕರೆ ಮೂಲಕ ಮತದಾರರಿಗೆ ನಿಮ್ಮ ಚುನಾವಣಾ ಪ್ರಣಾಳಿಕೆಗಳ ಬಗ್ಗೆ ಪ್ರಚಾರ ಮಾಡಿ. ನಿಮ್ಮ ಕ್ಷೇತ್ರದಲ್ಲಿರುವ ಎಲ್ಲ ಮತದಾರರ ಮೊಬೈಲ್‌ ನಂಬರ್‌ ಸಮೇತ ಮಾಹಿತಿ ನೀಡುತ್ತೇವೆ. ಇದಕ್ಕೆ ನೀವು 25 ಸಾವಿರ ರೂ. ಪಾವತಿಸಬೇಕು ಎಂಬ ಸಂದೇಶ ಹಾಗೂ ಕೆಲ ಲಿಂಕ್‌ಗಳನ್ನು ಸೈಬರ್‌ ಕಳ್ಳರು ಕಳುಹಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖೀಸಲಾಗಿದೆ. ಮತದಾರರ ಗೌಪ್ಯ ಹಾಗೂ ವೈಯಕ್ತಿಕ ಮಾಹಿತಿ ದುರ್ಬಳಕೆ ಮತ್ತು ಚುನಾವಣೆಗೆ ಸ್ಪರ್ಧಿಸುವ ಸಂಭವನೀಯ ಅಭ್ಯರ್ಥಿಗಳಿಗೆ ಮೋಸವೆಸಗಿ ಹಣ ಗಳಿಸುವ ಹಾಗೂ ವಂಚಿಸುವ ಸಂಭವವಿರುತ್ತದೆ.

ಈ ಮಾದರಿಯ ಸಂದೇಶ ಹಾಗೂ ಲಿಂಕ್‌ ಗಳನ್ನು ಸೃಷ್ಟಿಸಿ ಹರಡಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖೀಸಲಾಗಿದೆ. ಇದೀಗ ಸೈಬರ್‌ ಕ್ರೈಂ ಪೊಲೀಸರು ಸೈಬರ್‌ ಕಳ್ಳರಿಗೆ ಶೋಧ ಮುಂದುವರಿಸಿದ್ದಾರೆ.

Advertisement

ನಕಲಿ ಸಂದೇಶ ಕಳುಹಿಸಿ ವಂಚನೆ: ಜಾರ್ಖಂಡ್‌, ದೆಹಲಿ, ಪಶ್ಚಿಮ ಬಂಗಾಳ, ರಾಜಸ್ಥಾನ ಸೇರಿದಂತೆ ಉತ್ತರ ಭಾರತದಲ್ಲಿ ಸಕ್ರಿಯವಾಗಿರುವ ಸೈಬರ್‌ ಕಳ್ಳರ ಗ್ಯಾಂಗ್‌ಗಳು ದೇಶದ ವಿವಿಧ ರಾಜ್ಯಗಳ ಚುನಾವಣೆ ಬೆಳವಣಿಗೆ ಗಮನಿಸಿಕೊಂಡು ಅಮಾಯಕರಿಂದ ದುಡ್ಡು ಲಪಟಾಯಿಸಲು ಸಂಚು ರೂಪಿಸಿದ್ದಾರೆ. ಸದ್ಯ ಕರ್ನಾಟಕದ ಅಮಾಯಕ ಜನರೇ ಸೈಬರ್‌ ಕಳ್ಳರ ಟಾರ್ಗೆಟ್‌. ಮತದಾರರ ಮೊಬೈಲ್‌ಗೆ ವಿವಿಧ ಪಕ್ಷಗಳ ಹೆಸರಿನಲ್ಲಿ ನಕಲಿ ಸಂದೇಶ ಕಳುಹಿಸಿ ದುಡ್ಡು ಕೊಡುವುದಾಗಿ ಆಮಿಷವೊಡ್ಡುವ ಸಾಧ್ಯತೆಗಳಿವೆ. ಸೈಬರ್‌ ಕಳ್ಳರ ಮಾತಿನ ಮೋಡಿಗೆ ಮರುಳಾಗಿ ಅವರು ಕಳುಹಿಸುವ ಲಿಂಕ್‌ ಕ್ಲಿಕ್‌ ಮಾಡುವುದು, ಒಟಿಪಿ, ಬ್ಯಾಂಕ್‌ ಸೇರಿದಂತೆ ಇನ್ನೀತರ ಗೌಪ್ಯ ಮಾಹಿತಿ ನೀಡಿದರೆನಿಮ್ಮ ಬ್ಯಾಂಕ್‌ ಖಾತೆಯಲ್ಲಿರುವ ದುಡ್ಡು ಕ್ಷಣ ಮಾತ್ರದಲ್ಲೇ ಸೈಬರ್‌ ವಂಚಕರ ಖಜಾನೆ ಸೇರುವುದು ಗ್ಯಾರಂಟಿ.

ಸೈಬರ್‌ ಕಳ್ಳರ ಬಗ್ಗೆ ಪೊಲೀಸರು ಸದಾ ನಿಗಾ ವಹಿಸುತ್ತಿದ್ದಾರೆ. ಸಾರ್ವಜನಿಕರು ತಮ್ಮ ವೈಯಕ್ತಿಕ ಮಾಹಿತಿಗಳನ್ನು ಅಪರಿಚಿತರ ಜೊತೆಗೆ ಹಂಚಿಕೊಳ್ಳಬೇಡಿ. ಆತಂಕಪಡುವ ಅಗತ್ಯವಿಲ್ಲ.
● ಕೃಷ್ಣಕಾಂತ್‌, ಡಿಸಿಪಿ, ದಕ್ಷಿಣ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next