ಬೆಂಗಳೂರು: ಮಹಿಳೆಯೊಬ್ಬರು ಸೆಲ್ಫೀ ವಿಡಿಯೋ ಮಾಡಿ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಂಧ್ರಹಳ್ಳಿ ನಿವಾಸಿ ಮಾನಸ (25) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈ ಸಂಬಂಧ ಮಾನಸಳ ತಂದೆ ಶ್ರೀನಿವಾಸಮೂರ್ತಿ ಎಂಬುವರು ನೀಡಿದ ದೂರಿನ ಮೇರೆಗೆ ಮಾನಸಳ ಪತಿ ದಿಲೀಪ್, ಆತನ ತಂದೆ ಮಹೇಶ್, ತಾಯಿ ವಸಂತ ಹಾಗೂ ಮಂಜುಳಾ ಎಂಬಾಕೆ ವಿರುದ್ಧ ಬ್ಯಾಡರಹಳ್ಳಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ದಿಲೀಪ್ ಹಾಗೂ ಮಾನಸ ಪರಸ್ಪರ ಪ್ರೀತಿಸಿ 2019ರಲ್ಲಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ದಿಲೀಪ್ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ನಂದಿನಿ ಲೇಔಟ್‌ನ ಕಂಠೀರವನಗರದಲ್ಲಿ ವಾಸವಾಗಿದ್ದರು. ಆರಂಭದಲ್ಲಿ ದಂಪತಿ ಚೆನ್ನಾಗಿದ್ದು, ಒಂದು ಹೆಣ್ಣು ಮಗು ಕೂಡ ಇದೆ. ಈ ಮಧ್ಯೆ ದಿಲೀಪ್, ಮದ್ಯ ವ್ಯಸನಿಯಾಗಿದ್ದು, ನಿತ್ಯ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ. ಬಹಳಷ್ಟು ಸಾಲ ಕೂಡ ಮಾಡಿಕೊಂಡಿದ್ದ. ಆಗ ಮಾನಸ ತಂದೆಯೇ ಅಳಿಯನ ಸಾಲ ತೀರಿಸಿದ್ದರು. ಇನ್ನು ಮಾವ ಮಹೇಶ್, ಮಾನಸಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಈ ಸಂಬಂಧ ಆಕೆ ನಂದಿನಿ ಲೇಔಟ್ ಠಾಣೆಯಲ್ಲಿ ಪತಿ ಮತ್ತು ಆತನ ಮನೆಯವರ ವಿರುದ್ಧ 5-6 ಬಾರಿ ದೂರು ನೀಡಿದ್ದರು. ಆಗ ಪೊಲೀಸರು ದಿಲೀಪ್ ಹಾಗೂ ಆತನ ಕುಟುಂಬ ಸದಸ್ಯರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು.
ಬಳಿಕ ದಿಲೀಪ್ ಅಂಧ್ರಹಳ್ಳಿಗೆ ಮನೆ ಸ್ಥಳಾಂತರ ಮಾಡಿಕೊಂಡಿದ್ದು, ಅಲ್ಲಿಯೂ ಕುಟುಂಬದವರ ಜತೆ ಸೇರಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಜತೆಗೆ ಪತಿ ದಿಲೀಪ್ ಅಕ್ರಮ ಸಂಬಂಧ ಹೊಂದಿದ್ದು, ಈ ವಿಚಾರವಾಗಿಯೂ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಮತ್ತೂಂದೆಡೆ ಮಂಜುಳಾ ಎಂಬಾಕೆಯಿಂದ ದಿಲೀಪ್ ಸಾವಿರಾರು ರೂ. ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಮಂಜುಳಾ, ಮನೆಗೆ ಬಂದು ಮಾನಸಳಿಗೆ ಸಾಲ ತೀರಿಸುವಂತೆ ಬೆದರಿಕೆ ಹಾಕಿದ್ದಳು. ಈ ಎಲ್ಲಾ ವಿಚಾರಗಳಿಗೆ ಬೇಸತ್ತ ಮಾನಸ ಭಾನುವಾರ ಸಂಜೆ ಮನೆಯ ಕೋಣೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ತಂದೆ ಶ್ರೀನಿವಾಸಮೂರ್ತಿ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ಪತಿಯ ಮನೆಯವರ ಕಿರುಕುಳ ಬಗ್ಗೆ ವಿಡಿಯೋದಲ್ಲಿ ಹೇಳಿಕೆ : ಆತ್ಮಹತ್ಯೆ ಸಂದರ್ಭದಲ್ಲಿ ಸೆಲ್ಫೀ ವಿಡಿಯೋ ಮಾಡಿರುವ ಮಾನಸ ತನ್ನ ಪತಿ ಮತ್ತು ಆತನ ಮನೆಯವರ ಕಿರುಕುಳದ ಬಗ್ಗೆ ಹೇಳಿಕೆ ನೀಡಿದ್ದಾರೆ. ಅಲ್ಲದೆ, ತಾನೂ ಆತ್ಮಹತ್ಯೆ ಮಾಡಿಕೊಳ್ಳು ವುದನ್ನು ಆಕೆ ವಿಡಿಯೋ ಮಾಡಿದ್ದಳು. ಈ ವಿಡಿಯೋ ಕೂಡ ತಮಗೆ ಲಭ್ಯವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪತಿ ದೀಲೀಪ್ ಮತ್ತು ಆತನ ತಂದೆ-ತಾಯಿಗೆ ನೋಟಿಸ್ ನೀಡಲಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.