ಸ್ನೇಹಿತರ ಅತಿರೇಕದ ಹುಚ್ಚಾಟ; ತಮಾಷೆಗೆಂದು ಏರ್‌ಪ್ರಷರ್‌ನಿಂದ ಗುದದ್ವಾರಕ್ಕೆ ಗಾಳಿ; ಕರುಳು, ಇತರ ಅಂಗಾಗ ಸ್ಫೋಟದಿಂದ ಯುವಕ ಸಾವು
ಬೆಂಗಳೂರು: ಇಬ್ಬರು ಸ್ನೇಹಿತರ ನಡುವಿನ ಹುಚ್ಚಾಟದಲ್ಲಿ ಒಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಹೈ ಏರ್ ಪ್ರಷರ್ ಪೈಪ್‌ನಿಂದ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದರಿಂದ ಹೊಟ್ಟೆಯೊಳಗಿನ ಕರುಳು ಹಾಗೂ ಇತರೆ ಅಂಗಗಳು ಸ್ಫೋಟಗೊಂಡು ಯುವಕ ಮೃತಪಟ್ಟಿರುವ ದಾರುಣ ಘಟನೆ ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಂಪಿಗೇಹಳ್ಳಿ ನಿವಾಸಿ ಯೋಗೀಶ್ (28) ಮೃತ ಯುವಕ. ಈ ಸಂಬಂಧ ಆತನ ಸ್ನೇಹಿತ ಮುರಳಿ(25) ಎಂಬಾತನನ್ನು ಬಂಧಿಸಲಾಗಿದೆ. ಮಾ.25ರಂದು ಬೈಕ್ ರಿಪೇರಿಗಾಗಿ ಸಂಪಿಗೆಹಳ್ಳಿಯ ಸಿಎನ್‌ಎಸ್ ಕಾರ್ ಸ್ಪಾ ಕಾರ್ ಸರ್ವಿಸ್ ಸೆಂಟರ್‌ಗೆ ಬಂದಾಗ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು.
ಆರೋಪಿ ಮುರಳಿ ಸಿಎನ್‌ಎಸ್ ಕಾರ್ ಸ್ಪಾ ಸರ್ವೀಸ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ. ದೇವನ ಹಳ್ಳಿಯ ವಿಜಯಪುರ ಮೂಲದ ಯೋಗೀಶ್ ಈವೆಂಟ್ ಮ್ಯಾನೆಜ್‌ಮೆಂಟ್ ಕಂಪನಿ ಹಾಗೂ ಡೆಲಿವರಿ ಏಜೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸಹೋದರಿಯ ಮದುವೆ ಕಾರ್ಯಕ್ರಮ ಹಿನ್ನೆಲೆಯಲ್ಲಿ 15 ದಿನಗಳಿಂದ ಕೆಲಸಕ್ಕೆ ಹೋಗಿರಲಿಲ್ಲ. ಮಾ.25ರಂದು ಸ್ನೇಹಿತನ ಕಾರ್ ಸ್ಪಾ ಸರ್ವಿಸ್ ಸೆಂಟರ್‌ಗೆ ಬೈಕ್ ವಾಶ್‌ಗೆ ಬಂದಿದ್ದಾನೆ. ಆಗ ನೀರಿನಿಂದ ತೊಳೆದ ಕಾರುಗಳನ್ನು ಅಧಿಕ ಏರ್ ಪ್ರಷರ್ ಪೈಪ್‌ನಿಂದ ಆರಿಸುತ್ತಿದ್ದ. ಈ ವೇಳೆ ತಮಾ ಷೆಗಾಗಿ ನಿಂತಿದ್ದ ಯೋಗೇಶ್‌ನ ಮುಖ, ತಲೆಗೆ ಗಾಳಿ ಬಿಟ್ಟಿದ್ದಾನೆ. ಹೆಚ್ಚು ಗಾಳಿ ಬಂದಿದ್ದರಿಂದ ಯೋಗೇಶ್, ಹಿಮ್ಮುಖವಾಗಿ ನಿಂತಿದ್ದಾನೆ.
ಆಗ ಮುರಳಿ, ಯೋಗೇಶ್ ಗುದದ್ವಾರದ ಕಡೆ ಗಾಳಿ ಬಿಟ್ಟಿದ್ದು, ಕೆಲ ಕ್ಷಣಗಳಲ್ಲೇ ಯೋಗೇಶ್‌ನ ಹೊಟ್ಟೆ ಊದಿಕೊಂಡು ಒಳಭಾಗದಲ್ಲೇ ಕರಳು ಸ್ಫೋಟಗೊಂಡು ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ. ಈ ಸಂಬಂಧ ಯೋಗೇಶ್‌ನ ಸಹೋದರಿ ಜಯಶ್ರೀ ಎಂಬವರು ನೀಡಿದ್ದು, ಈ ಹಿನ್ನೆಲೆಯಲ್ಲಿ ಐಪಿಸಿ 304 ಅಡಿ (ನರಹತ್ಯೆ) ಪ್ರಕರಣ ದಾಖಲಿಸಿಕೊಂಡು ಮುರಳಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಹೈ ಪ್ರಷರ್ ಏರ್‌ಪೈಪ್‌ನಿಂದ ಯೋಗೇಶ್‌ನ ಗುದದ್ವಾರಕ್ಕೆ ಗಾಳಿ ಬಿಟ್ಟ ಪರಿಣಾಮ ಆತನ ದೇಹದ ಒಳಭಾಗಗಳು ಸ್ಫೋಟಗೊಂಡು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ. ಈ ಸಂಬಂಧ ಮುರಳಿ ಎಂಬಾತನನ್ನು ಬಂಧಿಸಲಾಗಿದೆ. ●
ಲಕ್ಷ್ಮೀಪ್ರಸಾದ್, ಈಶಾನ್ಯ ವಿಭಾಗ ಡಿಸಿಪಿ