ಬೆಂಗಳೂರು : ಒಂದೂವರೆ ಕೋಟಿ ರೂ. ಹಣಕಾಸಿನ ಲೆಕ್ಕ ಕೊಡಲಿಲ್ಲ ಎಂಬ ಕಾರಣಕ್ಕೆ ತಂದೆಯೇ ಪುತ್ರನನ್ನು ಸಾರ್ವಜನಿಕವಾಗಿ ಥಿನ್ನರ್ ಸುರಿದು ಬೆಂಕಿ ಹಚ್ಚಿ ಕೊಂದಿರುವ ಹೃದಯ ವಿದ್ರಾವಕ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ.
ಚಾಮರಾಜಪೇಟೆಯ ಆಜಾದ್‌ನಗರ ನಿವಾಸಿ ಅರ್ಪಿತ್ (25) ಕೊಲೆಯಾದ ಪುತ್ರ. ಕೃತ್ಯ ಎಸಗಿದ ಆತನ ತಂದೆ ಸುರೇಂದ್ರ ಕುಮಾರ್ ಅಲಿಯಾಸ್ ಸುರೇಂದ್ರ ಬಾಬು(51)ನನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಸುರೇಂದ್ರಕುಮಾರ್ 25 ವರ್ಷಗಳಿಂದಲೂ ಕನ್‌ಸ್ಟ್ರಕ್ಷನ್ ಮತ್ತು ಫ್ಯಾಬ್ರಿಕೇಷನ್ ವ್ಯವಹಾರ ಮಾಡಿಕೊಂಡಿದ್ದಾರೆ. ಮೂರು ವರ್ಷಗಳಿಂದ ಪುತ್ರ ಅರ್ಪಿತ್ ತಂದೆ ಜತೆ ವ್ಯವಹಾರ ನೋಡಿಕೊಳ್ಳುತ್ತಿದ್ದಾನೆ. ಈ ಮಧ್ಯೆ ಅರ್ಪಿತ್, ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ. ಫ್ಯಾಬ್ರಿಕೇಷನ್ ವ್ಯವಹಾರದ ಕೋಟ್ಯಂತರ ರೂ. ಹಣದ ಬಗ್ಗೆ 8-10 ತಿಂಗಳಿಂದ ಲೆಕ್ಕ ಕೊಟ್ಟಿರಲಿಲ್ಲ. ಅದರಿಂದ ಆಕ್ರೋಶಗೊಂಡಿದ್ದ ತಂದೆ, ನಿತ್ಯ ಪುತ್ರನಿಗೆ ಲೆಕ್ಕ ಕೊಡುವಂತೆ ಪೀಡಿಸುತ್ತಿದ್ದ. ಇತ್ತೀಚೆಗೆ 12 ಸಾವಿರ ರೂ.ಪಡೆದುಕೊಂಡ ಬಗ್ಗೆಯೂ ಲೆಕ್ಕ ಕೊಟ್ಟಿರಲಿಲ್ಲ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ : ಕುಣಿಗಲ್: 161 ಅಡಿ ಆಂಜನೇಯ ವಿಗ್ರಹ ಏ 10 ರಂದು ಪ್ರಧಾನಿಯಿಂದ ಲೋಕಾರ್ಪಣೆ
ಏ.1ರಂದು ಹಣಕಾಸಿನ ವಿಚಾರಕ್ಕೆ ವಾಗ್ವಾದ ನಡೆದಿದೆ. ಆಕ್ರೋಶಗೊಂಡ ಸುರೇಂದ್ರ ಕುಮಾರ್, ಮನೆಯಲ್ಲಿದ್ದ ಥಿನ್ನರ್‌ನನ್ನು ಪುತ್ರ ಅರ್ಪಿತ್ ಮೈಮೇಲೆ ಸುರಿದಿದ್ದಾನೆ. ಪುತ್ರ ಮನೆಯಿಂದ ಹೊರಗಡೆ ಬಂದಿದ್ದಾನೆ. ಆದರೂ ಬಿಡದ ಸುರೇಂದ್ರ ಕುಮಾರ್, ಮನೆ ಮುಂಭಾಗವೇ ಬೆಂಕಿ ಕಡ್ಡಿ ಗೀರಿ ಎಸೆದಿದ್ದಾನೆ. ಮೊದಲ ಬಾರಿಗೆ ಹೊತ್ತಿಕೊಳ್ಳದ್ದರಿಂದ, ಎರಡನೇ ಬಾರಿ ಬೆಂಕಿ ಕಡ್ಡಿ ಗೀರಿ ಮೈಮೇಲೆ ಎಸೆದ ಕೂಡಲೇ ಬೆಂಕಿ ತಗುಲಿದ್ದರಿಂದ, ಅರ್ಪಿತ್ ಕೂಗಿಕೊಂಡು ರಸ್ತೆಯೆಲ್ಲ ಓಡಾಡಿದ್ದಾನೆ. ಬಳಿಕ ಸ್ಥಳೀಯರು ಬೆಂಕಿ ನಂದಿಸಿದ್ದಾರೆ.
ಅನಂತರ ತಂದೆಯೇ ಮಗನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಳು ದಿನಗಳ ಕಾಲ ಚಿಕಿತ್ಸೆ ಪಡೆದ ಅರ್ಪಿತ್, ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.