ಬೆಂಗಳೂರು: ಸುಪಾರಿ ಹಂತಕ ಹಾಗೂ ರೌಡಿಶೀಟರ್ ದಿನೇಶ್‌ನನ್ನು ಮಾರಕಾಸ್ತ್ರಗಳಿಂದ ಆತನ ಸ್ನೇಹಿತರೇ ಭೀಕರವಾಗಿ ಹತ್ಯೆಗೈದಿರುವ ಘಟನೆ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ದಿನೇಶ್ (37) ಕೊಲೆಯಾದ ರೌಡಿಶೀಟರ್.
ಕೃತ್ಯ ಎಸಗಿದ ಆತನ ಸ್ನೇಹಿತರ ಪೈಕಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ರೌಡಿಶೀಟರ್ ದಿನೇಶ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಗೆ ಸುಪಾರಿ ಪಡೆದ ಆರೋಪದಡಿ ಪ್ರಕರಣಗಳು ದಾಖಲಾಗಿವೆ. ಬುಧವಾರ ಮಧ್ಯಾಹ್ನ ತನ್ನ 7 ಮಂದಿ ಸ್ನೇಹಿತರ ಜತೆ ಕಮ್ಮನಹಳ್ಳಿಯ ಓಯೋ ಹೋಟೆಲ್‌ಗೆ ರೂಮ್ ಬಾಡಿಗೆ ಪಡೆಯಲು ಬಂದಿದ್ದಾನೆ.
ಈ ವೇಳೆ ಹೋಟೆಲ್‌ನ ಸ್ವಾಗತಕಾರರ ಜತೆ ದಿನೇಶ್‌ನ ಇಬ್ಬರು ಸ್ನೇಹಿತರು ಹಣ ಪಾವತಿ ಬಗ್ಗೆ ಚರ್ಚಿಸುತ್ತಿದ್ದರು. ಆಗ ನಗದು ಇಲ್ಲ. ಕಾರ್ಡ್ ಕೊಡುವುದಾಗಿ ಹೇಳಿದ್ದಾರೆ. ಆಗ ಸ್ವಾಗತಕಾರರು ನಗದು ರೂಪದಲ್ಲೇ ಕೊಡಬೇಕು. ಕಾರ್ಡ್ ಬಳಕೆ ಮಾಡುವುದಿಲ್ಲ ಎಂದಿದ್ದಾರೆ. ಹೀಗಾಗಿ ಇಬ್ಬರು ಆರೋಪಿಗಳು ಹಣ ತರಲು ಹೊರಗಡೆ ಹೋಗಿದ್ದಾರೆ.
ಈ ವೇಳೆ ಸೋಫಾ ಮೇಲೆ ದಿನೇಶ್ ಜತೆ ಕೂತಿದ್ದ ಐವರು ಏಕಾಏಕಿ ದಿನೇಶ್ ಮೇಲೆ ಮಾರಕಾಸ್ತ್ರಗಳಿಂದ ಮನಸೋ ಇಚ್ಚೆ ಹಲ್ಲೆ ನಡಸಿದ್ದಾರೆ. ಅದೇ ವೇಳೆ ಹೊರಗಡೆಯಿಂದ ಮತ್ತೆ ಐದು ಮಂದಿ ಆರೋಪಿಗಳು ಮಾರಕಾಸ್ತ್ರಗಳನ್ನು ತಂದು ದಿನೇಶ್ ಮೇಲೆ ಸಾಮೂಹಿಕ ದಾಳಿ ನಡೆಸಿ ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಸೋಫಾ ಮೇಲಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಪೂರ್ವವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈಯಕ್ತಿಕ ದ್ವೇಷವೇ ಕಾರಣ
ಪ್ರಾಥಮಿಕ ಮಾಹಿತಿ ಪ್ರಕಾರ ವೈಯಕ್ತಿಕ ದ್ವೇಷ ದಿಂದಲೇ ದಿನೇಶ್‌ನ ಹತ್ಯೆಗೈಯಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡ ರಚಿಸಲಾಗಿದ್ದು, ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ತನಿಖಾ ತಂಡಗಳು ತೆರಳಿವೆ ಎಂದು ಪೊಲೀಸರು ಹೇಳಿದರು.