ಬೆಂಗಳೂರು : ಪ್ರತಿಯೊಬ್ಬ ಭಾರತೀಯ ಕೂಡ ವಿಐಪಿ ಎಂದು ಪ್ರಧಾನಿ ನರೇಂದ್ರ ಮೋದಿ ಈಚೆಗೆ ಹೇಳಿದ್ದ ಮಾತುಗಳನ್ನು ಅಕ್ಷರಶಃ ಜಾರಿಗೆ ತಂದ ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಅಧಿಕಾರಿ ಎಂ ಎಲ್ ನಿಜಲಿಂಗಪ್ಪ ಅವರೀಗ ಎಲ್ಲರ ಹೃದಯವನ್ನು ಗೆದ್ದಿದ್ದಾರೆ; ಬಹುಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ರಾಷ್ಟ್ರಪತಿಗಳ ವಾಹನಗಳ ಸಾಲನ್ನು ತಡೆದು ಅಂಬುಲೆನ್ಸ್‌ಗೆ ದಾರಿ ಮಾಡಿಕೊಡುವ ಮೂಲಕ ಎಸ್‌ಐ ನಿಜಲಿಂಗಪ್ಪ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಪ್ರಸಂಗಾವಧಾನತೆಯನ್ನು ತೋರಿದ್ದಾರೆ.
ಇದಕ್ಕೆ ಕಾರಣವಾದ ಘಟನೆ ಇಂತಿದೆ: ಮೊನ್ನೆ ಶನಿವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ನಮ್ಮ ಮೆಟ್ರೋ ಗ್ರೀನ್ ಲೈನ್ ಉದ್ಘಾಟಿಸಲು ಬೆಂಗಳೂರಿಗೆ ಬಂದಿದ್ದರು. ಆಗ ಅವರ ವಾಹನಗಳ ಸಾಲು ನಗರದ ಮುಖ್ಯ ರಸ್ತೆ ಮೂಲಕ ರಾಜಭವನಕ್ಕೆ ಸಾಗುವುದಿತ್ತು.
ಆಗ ಎಸ್ ಐ ನಿಜಲಿಂಗಪ್ಪ ಅವರು ಟ್ರಿನಿಟಿ ಸರ್ಕಲ್‌ನಲ್ಲಿ ಕರ್ತವ್ಯಕ್ಕೆ ನಿಯುಕ್ತರಾಗಿದ್ದರು. ಎಲ್ಲರಗೂ ತಿಳಿದಿರುವ ಪ್ರಕಾರ ಟ್ರಿನಿಟಿ ಸರ್ಕಲ್ ಅತ್ಯಂತ ವಾಹನ ದಟ್ಟನೆಯ ತಾಣ. ಅಂಥದ್ದರಲ್ಲಿ ರಾಷ್ಟ್ರಪತಿಯವರ ವಾಹನಗಳ ಸಾಲು ಆ ಮೂಲಕ ಸಾಗುವಾಗ ಟ್ರಾಫಿಕ್ ಅಧಿಕಾರಿಯ ಹೊಣೆಗಾರಿಕೆ ಅತ್ಯಂತ ಗುರುತರವಾದದ್ದು.
ರಾಷ್ಟ್ರಪತಿಗಳ ವಾಹನ ಸಾಲು ಸಾಗುತ್ತಿರುವಂತೆಯೇ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯೊಬ್ಬರನ್ನು ಎಚ್‌ಎಎಲ್ ಸಮೀಪದ ಖಾಸಗಿ ಆಸ್ಪತ್ರೆಗೆ ತುರ್ತಾಗಿ ಒಯ್ಯುತ್ತಿದ್ದ ಅಂಬುಲೆನ್ಸ್, ಮುಂದೆ ಸಾಗಲು ದಾರಿ ಕಾಣದೆ ಸಿಲುಕಿಕೊಂಡಿತು. ಇದನ್ನು ಕಂಡ ಎಸ್ ಐ ನಿಜಲಿಂಗಪ್ಪ ಅವರು ಒಡನೆಯೇ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟರು. ಆದೇ ಹೊತ್ತಿಗೆ ರಾಷ್ಟ್ರಪತಿಗಳ ವಾಹನಗಳ ಸಾಲು ರಾಜ ಭವನದತ್ತ ಸಾಗುತ್ತಿತ್ತು.
ಈ ಸಂದರ್ಭದಲ್ಲಿ ಅತ್ಯಂತ ಚುರುಕುತನ ಹಾಗೂ ಚಾಣಾಕ್ಷತೆಯಿಂದ ಕಾರ್ಯವೆಸಗಿದ ನಿಜಲಿಂಗಪ್ಪ ಅವರು ಅತ್ಯಂತ ನಿಬಿಡವಾಗಿದ್ದ ರಸ್ತೆಯ ಮೂಲಕ ಸಾಗುವುದಕ್ಕೆ ಅಂಬುಲೆನ್ಸ್‌ಗೆ ಅನುಕೂಲ ಮಾಡಿಕೊಡುವ ಮೂಲಕ ಅಮೂಲ್ಯ ಜೀವವೊಂದನ್ನು ಉಳಿಸಿದರು.
ಎಸ್ ಐ ನಿಜಲಿಂಗಪ್ಪ ತೋರಿದ ಕಾರ್ಯಕ್ಷಮತೆ, ಸಮಯಪ್ರಜ್ಞೆ ಇತ್ಯಾದಿಗಳನ್ನು ಪ್ರಶಂಸಿಸಿ ಬೆಂಗಳೂರು ಪೊಲೀಸ್ ದಳ ಅವರಿಗೆ ಬಹುಮಾನ ಪ್ರಕಟಿಸಿದೆ.
ಇದನ್ನು ಅನುಸರಿಸಿ ಟ್ವಿಟರ್, ಫೇಸ್‌ಬುಕ್ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸ್ (ಬಿಟಿಪಿ) ಅಂತರ್ಜಾಲ ಪುಟಗಳು ಎಸ್‌ಐ ನಿಜಲಿಂಗಪ್ಪ ಅವರ ಮೇಲೆ ಪ್ರಶಂಸೆಯ ಸುರಿಮಳೆಯನ್ನೇ ಗೈವ ಸಂದೇಶಗಳಿಂದ ತುಂಬಿ ಹೋಗಿದೆ.