ಬೆಂಗಳೂರು:ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಡೈರಿ ವಿವಾದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಡಿಜಿ ಬಾಲಕೃಷ್ಣನ್ ಅವರು, ಐಟಿ ಇಲಾಖೆಯಿಂದ ಡೈರಿ ಮಾಹಿತಿ ಸೋರಿಕೆ ಆಗಿಲ್ಲ ಎಂದು ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಐಟಿ ದಾಳಿಯಲ್ಲಿ ಸಿಕ್ಕ ಮಾಹಿತಿ ಬಹಿರಂಗಗೊಳಿಸುವಂತಿಲ್ಲ. ಹಾಗಾಗಿ ಐಟಿ ಇಲಾಖೆ ಯಾವುದೇ ಡೈರಿ ಮಾಹಿತಿ ಲೀಕ್ ಮಾಡಿಲ್ಲ ಎಂದು ಹೇಳಿದರು.
ಹಾಗಾದರೆ ಐಟಿ ಇಲಾಖೆ ದಾಳಿ ವೇಳೆ ಗೋವಿಂದರಾಜು ಅವರ ಮನೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪಕಾಣಿಕೆ ಸಲ್ಲಿಸಿರುವ ವಿವರ ಇದ್ದ ಡೈರಿ ಸಿಕ್ಕಿದ್ದು ನಿಜವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಯಾವುದೇ ಉತ್ತರ ನೀಡಿಲ್ಲ ಎಂದು ಮಾಧ್ಯಮದ ವರದಿ ತಿಳಿಸಿದೆ.
ಕಾಂಗ್ರೆಸ್ ಎಂಎಲ್ ಸಿ ಗೋವಿಂದರಾಜು ಅವರ ಮನೆ ಮೇಲೆ ಐಟಿ ಇಲಾಖೆ ದಾಳಿ ನಡೆಸಿದ್ದ ವೇಳೆ ಡೈರಿಯೊಂದು ಸಿಕ್ಕಿತ್ತು ಎನ್ನಲಾಗಿತ್ತು. ಬಳಿಕ ಡೈರಿ ಕುರಿತಂತೆ, ಸಿಎಂಗೆ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಯೋಜನೆಯಲ್ಲಿ 65 ಕೋಟಿ ಕಿಕ್ ಬ್ಯಾಕ್ ಪಾವತಿಯಾಗಿರುವ ಅಂಶ ಡೈರಿಯಲ್ಲಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಬಾಂಬ್ ಸಿಡಿಸಿದ್ದರು.
ಈ ಆರೋಪ, ಪ್ರತ್ಯಾರೋಪದ ನಡುವೆ ಡೈರಿ ಮಾಹಿತಿ ರಾಷ್ಟ್ರೀಯ ಆಂಗ್ಲ ಮಾಧ್ಯಮವೊಂದರಲ್ಲಿ ಬಹಿರಂಗಗೊಂಡಿತ್ತು. ಆದರೆ ಡೈರಿ ವಿಚಾರ ಸತ್ಯಕ್ಕೆ ದೂರ ಎಂದು ಕಾಂಗ್ರೆಸ್ ಮುಖಂಡರು ವಾದಿಸಿದ್ದರು.
ಡೈರಿ ಯುದ್ಧದಲ್ಲಿ ಕಾಂಗ್ರೆಸ್ ನಾಯಕರು ತಿರುಗೇಟು ನೀಡುವ ನಿಟ್ಟಿನಲ್ಲಿ ಬಿಜೆಪಿ ವಿರುದ್ಧ ಸೀಡಿ ಬಿಡುಗಡೆ ಮಾಡಿದ್ದರು. ಇದರ ಪರಿಣಾಮ ಎಂಬಂತೆ ಬೆಂಗಳೂರಿನ ಸ್ಟೀಲ್ ಫ್ಲೈ ಓವರ್ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿತ್ತು.