Advertisement
ಐಟಿ-ಬಿಟಿ ಕೇಂದ್ರವಾಗಿರುವುದರಿಂದ ಕನಿಷ್ಠ ಪ್ರಮಾಣದ ಸಿಬ್ಬಂದಿಯು ಕಚೇರಿಗೆ ತೆರಳಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಲಭ್ಯವಿರುವ ಸ್ಥಳೀಯ ಕಾರ್ಮಿಕರೊಂದಿಗೆ ಮೆಟ್ರೋ ಕಾಮಗಾರಿ ಪುನಾರಂಭ ಮಾಡಲು ಅನುಮತಿ ನೀಡಲಾಗಿದೆ. ಅದೇ ರೀತಿ, ವಿವಿಧ ಇಲಾಖೆಗಳ ಸರ್ಕಾರಿ ನೌಕರರೂ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ಜತೆಗೆ ಕಟ್ಟಡ ಕಾಮಗಾರಿ ಪುನಾರಂಭ, ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳು, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಎಂ-ನರೇಗ) ಅಡಿ ಕಾಮಗಾರಿಗಳು, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ ಲಾಕ್‌ಡೌನ್‌ನಿಂದ ಅಲ್ಪಮಟ್ಟಿಗೆ ಸಡಿಲಿಕೆ ನೀಡಲಾಗಿದ್ದು, ಬುಧವಾರದಿಂದ ಅವೆಲ್ಲವೂ ಕಾರ್ಯಾರಂಭ ಮಾಡಲಿವೆ. ಇವು ಯಾವುವೂ ನಗರಕ್ಕೆ ಅನ್ವಯ ಆಗುವುದಿಲ್ಲ!
ನಗರದಲ್ಲಿ 34 ವಾರ್ಡ್‌ಗಳು ಹಾಟ್‌ಸ್ಪಾಟ್‌ಗಳಾಗಿ ಗುರುತಿಸಿದ್ದು, ಈ ಪೈಕಿ 19 ಕಂಟೈನ್ಮೆಂಟ್ ಝೋನ್ (ನಿಯಂತ್ರಿತ ವಲಯ)ಗಳಾಗಿವೆ. ಸೀಲ್‌ಡೌನ್‌ಗೆ ಅನುಸರಿಸುವ ಎಲ್ಲ ನಿಯಮಗಳೂ ಈ ನಿಯಂತ್ರಿತ ವಲಯಕ್ಕೂ ಅನ್ವಯ ಆಗುತ್ತವೆ. ಹಾಗಾಗಿ, ಅಲ್ಲೆಲ್ಲಾ ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ ಆಗದು. ಅದರಂತೆ “ಬಿಡುಗಡೆ ಭಾಗ್ಯ’ಕ್ಕೆ ಆ ಭಾಗದ ಜನ ಮೇ 3ರವರೆಗೆ ಕಾಯುವುದು ಅನಿವಾರ್ಯ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.