ಬೆಂಗಳೂರು: ಸಿನಿಮಾ ಶೂಟಿಂಗ್ ವೇಳೆ ಹಾನಿಗೊಳಗಾದ ಡ್ರೋನ್‌ಗೆ ಪರಿಹಾರ ಹಣ ನೀಡದಕ್ಕೆ ಬೇಸರಗೊಂಡ ಡ್ರೋನ್ ಟೆಕ್ನಿಷಿಯನ್ ಸಂತೋಷ್ ಎಂಬವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಸಂಬಂಧ ವಸತಿ ಸಚಿವ ಜಮೀರ್ ಅಹ್ಮದ್ ಪುತ್ರ, ನಟ ಜೈದ್ ಖಾನ್ ಮತ್ತು ನಿರ್ದೇಶಕ ಅನಿಲ್ ವಿರುದ್ಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಗಂಭೀರ ಸ್ವರೂಪವಲ್ಲದ ಪ್ರಕರಣ(ಎನ್‌ಸಿಆರ್) ದಾಖಲಾಗಿದೆ. ಅಗ್ರಹಾರ ದಾಸರಹಳ್ಳಿ ನಿವಾಸಿ ಸಂತೋಷ್(32) ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಹೇಳಿಕೆ ಆಧರಿಸಿ ಜೈದ್ ಖಾನ್ ಮತ್ತು ಅನಿಲ್ ವಿರುದ್ಧ ಎನ್‌ಸಿಆರ್ ದಾಖಲಿಸಿ ಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ನಟ ಜೈದ್ ಖಾನ್ “ಕಲ್ಟ್’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ ಎಂದು ಹೇಳಲಾಗಿದೆ. ಕೆಲ ದಿನಗಳ ಹಿಂದೆ ಚಿತ್ರದುರ್ಗದಲ್ಲಿ ಸಿನಿಮಾ ಚಿತ್ರೀಕರಣ ನಡೆದಿದ್ದು, ಈ ವೇಳೆ ಸಂತೋಷ್ ತಮ್ಮ 25 ಲಕ್ಷ ರೂ. ಮೌಲ್ಯದ ಡ್ರೋನ್ ಬಳಸಿ ಚಿತ್ರೀಕರಣ ಮಾಡುತ್ತಿದ್ದರು. ಪ್ರತಿ ದಿನ 25 ಸಾವಿರ ರೂ.ಗೆ ಬಾಡಿಗೆ ನೀಡಲಾಗುತ್ತಿತ್ತು. ಆದರೆ, ಚಿತ್ರೀಕರಣದ ವೇಳೆ ವಿಂಡ್ ಫ್ಯಾನ್‌ಗೆ ಡ್ರೋನ್ ತಗುಲಿ ಹಾನಿಗೊಳಲಾಗಿತ್ತು. ಹೀಗಾಗಿ ಅದರ ಪರಿಹಾರ ಮೊತ್ತವನ್ನು ಜೈದ್ ಖಾನ್ ಮತ್ತು ನಿರ್ದೇಶಕ ಅನಿಲ್ ಬಳಿ ಕೇಳಿದ್ದಾರೆ. ಆದರೆ, ಇಬ್ಬರು ಕೊಡಲು ಸಾಧ್ಯವಿಲ್ಲ ಎಂದಿದ್ದರು. ಜತೆಗೆ ಲಕ್ಷಾಂತರ ರೂ. ಮೌಲ್ಯದ ಮೆಮೊರಿ ಕಾರ್ಡ್ ಕಿತ್ತುಕೊಂಡಿದ್ದರು ಎಂದು ಹೇಳಲಾಗಿದೆ. ಅದಕ್ಕೆ ನೊಂದಿದ್ದ ಸಂತೋಷ್, ನ.23ರಂದು ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಕುಟುಂಬ ಸದಸ್ಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಸಂತೋಷ್ ಅವರಿಂದ ಹೇಳಿಕೆ ಪಡೆಯಲಾಗಿದೆ.
ಈ ಸಂಬಂಧ ಎನ್‌ಸಿಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಅಗತ್ಯಬಿದ್ದರೆ ಜೈದ್ ಖಾನ್ ಮತ್ತು ಅನಿಲ್ ಅವರ ಹೇಳಿಕೆ ಪಡೆಯಲಾಗುತ್ತದೆ ಎಂದು ಪೊಲೀಸರು ಹೇಳಿದರು.
ಏನಿದು ಘಟನೆ?
ಸಿನಿಮಾಗೆ 25 ಲಕ್ಷ ರೂ. ಡ್ರೋನ್ ಬಳಕೆ
ಶೂಟಿಂಗ್ ವೇಳೆ ಡ್ರೋನ್‌ಗೆ ಹಾನಿ
ಪರಿಹಾರ ನೀಡುವಂತೆ ಟೆಕ್ನಿಷಿಯನ್ ಸಂತೋಷ್ ಮನವಿ
ಪರಿಹಾರ ನೀಡಲು ನಿರಾಕರಿಸಿದ ನಟ ಜೈದ್‌ಖಾನ್
ಇದರಿಂದ ಮನನೊಂದು ಸಂತೋಷ್ ಮನೆಯಲ್ಲಿ ಆತ್ಮಹತ್ಯೆಗೆ ಯತ್ನ