Advertisement

Bengaluru-Chennai ಪ್ರಯಾಣ ಇನ್ನು 2 ಗಂಟೆ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

12:42 AM Mar 11, 2024 | Team Udayavani |

ಮೈಸೂರು: ಬೆಂಗಳೂರು- ಚೆನ್ನೈಎಕ್ಸ್‌ಪ್ರೆಸ್‌ ಹೈವೇಯು ಮುಂದಿನ ವರ್ಷದ ಜನವರಿ ವೇಳೆಗೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದ್ದು, ಬಳಿಕ ಬೆಂಗಳೂರು-ಚೆನ್ನೈ ಪ್ರಯಾಣವು ಕೇವಲ 2 ಗಂಟೆಗೆ ಇಳಿಕೆಯಾಗಲಿದೆ ಎಂದು ಕೇಂದ್ರದ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದರು.

Advertisement

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ರವಿವಾರ ಜರಗಿದ ಸಮಾರಂಭದಲ್ಲಿ 4 ಸಾವಿರ ಕೋಟಿ ರೂ. ವೆಚ್ಚದ ರಾಜ್ಯದ ಒಟ್ಟು 22 ರಾಷ್ಟ್ರೀಯ ಹೆದ್ದಾರಿಗಳ 268 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಅಂದಾಜು 20 ಸಾವಿರ ಕೋಟಿ ರೂ. ವೆಚ್ಚದ, 262 ಕಿ.ಮೀ. ದೂರದ ಬೆಂಗಳೂರು-ಚೆನ್ನೈಎಕ್ಸ್‌ಪ್ರೆಸ್‌ ಹೈವೇ ಕಾಮಗಾರಿಯಿಂದ ಬೆಂಗಳೂರು ಚೆನ್ನೈ ಇನ್ನೂ ಸಮೀಪವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ 282 ಕಿ.ಮೀ. ವರ್ತುಲ ರಸ್ತೆಯೂ ಈ ವರ್ಷದ ಡಿಸೆಂಬರ್‌ಗೆ ಪೂರ್ಣಗೊಳಿಸುವ ವಿಶ್ವಾಸವಿದೆ. ಇದರಿಂದ ರಾಜಧಾನಿಯ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಈ ವರ್ತುಲ ರಸ್ತೆ ಹಾಗೂ ಎಕ್ಸ್‌ಪ್ರೆಸ್‌ ಹೈವೇಯೂ ಒಂದಕ್ಕೊಂದು ಸಂಪರ್ಕ ಕಲ್ಪಿಸುವುದರಿಂದ ಅಕ್ಕಪಕ್ಕದ ಜಿಲ್ಲೆಗಳಾದ ರಾಮನಗರ, ಬೆಂಗಳೂರು ಗ್ರಾಮಾಂತರಗಳಿಗೂ ಅನುಕೂಲ ವಾಗುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ 275ರ ಮೈಸೂರು-ಕುಶಾಲನಗರ ನಡುವಿನ ಐದು ಪ್ಯಾಕೇಜಿನಲ್ಲಿ 5,200 ಕೋಟಿ ರೂ. ವೆಚ್ಚದಲ್ಲಿ 115 ಕಿ.ಮೀ ಕಾಮಗಾರಿ ಆರಂಭವಾಗಿದೆ. ಇದು ಪೂರ್ಣಗೊಂಡರೆ ಕುಶಾಲನಗರದಿಂದ ಬೆಂಗಳೂರಿಗೆ ತೆರಳುವ ಸಮಯ ಕೇವಲ ಐದು ಗಂಟೆಗಳ ಬದಲಿಗೆ ಎರಡೂವರೆ ಗಂಟೆಗಳಲ್ಲಿ ತಲುಪಬಹುದು ಎಂದರು.

Advertisement

ರಾಜ್ಯದ ಚಿತ್ರಣ ಬದಲು
ರಾಜ್ಯದಲ್ಲಿ ಈವರೆಗೂ 772 ಕಿ.ಮೀ.ನ 6 ಪಥಗಳ ರಸ್ತೆಗಳು, 2,380 ಕಿ.ಮೀ.ನ 4 ಪಥಗಳ ರಸ್ತೆಗಳು, 1,082 ಕಿ.ಮೀ.ನ 2 ಪಥಗಳ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಇದಲ್ಲದೆ 70 ಯೋಜನೆಗಳು ಆರಂಭವಾಗಲಿದ್ದು, ಇದರ ಅಂದಾಜು ವೆಚ್ಚ 1 ಲಕ್ಷ ಕೋಟಿ ರೂ.ಗಳಾಗಿದೆ. ಹೀಗಾಗಿ 2024ರ ಅಂತ್ಯದ ವೇಳೆಗೆ ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಯೋಜನೆಗಳು ಮುಕ್ತಾಯವಾಗಲಿದ್ದು ಇದರಿಂದ ಕರ್ನಾಟಕದ ಚಿತ್ರಣ ಬದಲಾಗಲಿದೆ ಎಂದು ನಿತಿನ್‌ ಗಡ್ಕರಿ ಹೇಳಿದರು.

15 ದಿನಗಳಲ್ಲಿ ಒಪ್ಪಿಗೆ
ಸಂಸದರಾದ ಪ್ರತಾಪ್‌ ಸಿಂಹ ಹಾಗೂ ಸುಮಲತಾ ಅವರು ಬೆಂಗಳೂರು-ಮೈಸೂರು ದಶಪಥ ಹೈವೇ ರಸ್ತೆಯಲ್ಲಿ ಅಂಡರ್‌ ಪಾಸ್‌, ಆಗಮನ-ನಿರ್ಗಮನಗಳ ನಿರ್ಮಾಣಕ್ಕೆ ಮನವಿ ಮಾಡಿದ್ದು, ಇದರ ಕುರಿತು 15 ದಿನಗಳಲ್ಲಿ ಒಪ್ಪಿಗೆ ನೀಡಲಿದ್ದೇನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್‌.ಸಿ. ಮಹದೇವಪ್ಪ, ಸಂಸದರಾದ ಪ್ರತಾಪಸಿಂಹ, ಮುನಿಸ್ವಾಮಿ, ಸುಮಲತಾ ಅಂಬರೀಷ್‌, ಶಾಸಕರಾದ ಎಚ್‌.ಡಿ.ರೇವಣ್ಣ, ಟಿ.ಎಸ್‌.ಶ್ರೀವತ್ಸ, ಜಿ.ಡಿ.ಹರೀಶ್‌ ಗೌಡ, ಎಂ.ಟಿ.ಕೃಷ್ಣಪ್ಪ, ಎಚ್‌.ಕೆ. ಸುರೇಶ್‌, ಪರಿಷತ್‌ ಸದಸ್ಯರಾದ ಎಚ್‌.ವಿಶ್ವನಾಥ್‌, ಸಿ.ಎನ್‌.ಮಂಜೇಗೌಡ ಉಪಸ್ಥಿತರಿದ್ದರು.

ಮಂಗಳೂರು ಅಭಿವೃದ್ಧಿಗೆ ಗ್ರೀನ್‌ ಎಕ್ಸ್‌ಪ್ರೆಸ್‌ ಹೈವೇ
ಹೊಸದಾಗಿ 514 ಗ್ರೀನ್‌ ಫೀಲ್ಡ್ ಯೋಜನೆಗೆ ಚಿಂತನೆ ಹೊಂದಿದ್ದು, ಮಂಗಳೂರು ಹಾಗೂ ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಪ್ರಮಾಣದಲ್ಲಿ ಗ್ರೀನ್‌ ಎಕ್ಸ್‌ಪ್ರೆಸ್‌ ಹೈವೇ ನಿರ್ಮಾಣ ಮಾಡಲಾಗುತ್ತಿದೆ. ಗ್ರೀನ್‌ ಫೀಲ್ಡ್‌ನಲ್ಲಿ ಒಟ್ಟು ಮಾರ್ಗ 10 ಸಾವಿರ ಕಿ.ಮೀ. ಆಗಿದ್ದು ಗ್ರೀನ್‌ ಎಕ್ಸ್‌ಪ್ರೆಸ್‌ ಹೈವೇ ನಿರ್ಮಾಣಕ್ಕೆ 5.50 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ 45 ಸಾವಿರ ಕೋಟಿ ರೂ.ಗಳ 607 ಕಿ.ಮೀ. ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಗಡ್ಕರಿ ತಿಳಿಸಿದರು.

ನಂಜನಗೂಡಿಗೆ 6 ಪಥ: ಶೀಘ್ರ ಡಿಪಿಆರ್‌
ಮೈಸೂರಿನಿಂದ ನಂಜನಗೂಡು ಹೆದ್ದಾರಿಯನ್ನು 6 ಪಥದ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಶೀಘ್ರವೇ ಡಿಪಿಆರ್‌ ಮಾಡಲಾಗುತ್ತದೆ. ಹಾಗೇ ಕಾಮಗಾರಿಯೂ ಕೂಡ ಬಹು ಬೇಗನೇ ಶುರುವಾಗಲಿದೆ ಎಂದು ಗಡ್ಕರಿ ಹೇಳಿದರು. ಅಂತೆಯೇ ಕುಶಾಲನಗರ-ಮಾಣಿವರೆಗಿನ ರಸ್ತೆ ನಿರ್ಮಾಣಕ್ಕೆ ಡಿಪಿಆರ್‌ಮಾಡಲು ಆದೇಶ ನೀಡಿದ್ದು, ಶೀಘ್ರವೇ ಈ ಕೆಲಸ ಆರಂಭಿಸಲಾಗುವುದು ಎಂದರು.

ಬಂಡೀಪುರ ಮಾರ್ಗ ಕೈಬಿಟ್ಟ ಕೇಂದ್ರ
ಮೈಸೂರಿನಿಂದ ವಯನಾಡು- ಬಂಡೀಪುರ ಮಾರ್ಗವಾಗಿ ಕಲ್ಲಿಕೋಟೆಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಯೋಜನೆಯನ್ನು ಕೇಂದ್ರ ಸರಕಾರ ಕೈ ಬಿಟ್ಟಿದೆ. ಯಾಕೆಂದರೆ ಹೆದ್ದಾರಿ ಹಾದು ಹೋಗುವ ಮಾರ್ಗದಲ್ಲಿ ಹುಲಿ ಸಂರಕ್ಷಿತ ಅರಣ್ಯಗಳು ಬರುತ್ತವೆ. ಅಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6ವರೆಗೆ ವಾಹನ ಸಂಚಾರವನ್ನು ನಿಷೇಧಗೊಳಿಸಲಾಗಿದೆ. ಆದ್ದರಿಂದ ಕೇರಳದ ಪರ್ಯಾಯ ಮಾರ್ಗವನ್ನು ಗುರುತಿಸಲಾಗಿದೆ. ಮೈಸೂರಿನಿಂದ ಮಲಪ್ಪುರಂಗೆ 2,550 ಕೋಟಿ ರೂ. ವೆಚ್ಚದಲ್ಲಿ ಹೆದ್ದಾರಿ ನಿರ್ಮಾಣ ಮಾಡಲಾಗುತ್ತದೆ ಎಂದರು.

ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ
ಮೈಸೂರಿನ ಚಾಮುಂಡಿಬೆಟ್ಟಕ್ಕೆ ರೋಪ್‌ವೇ ನಿರ್ಮಾಣಕ್ಕೆ ಕೇಂದ್ರ ಸರಕಾರ 114 ಕೋ. ರೂ. ಮಂಜೂರು ಮಾಡಲಿದೆ ನಿತಿನ್‌ ಗಡ್ಕರಿ ತಿಳಿಸಿದರು. ಸುಮಾರು ಒಂದೂವರೆ ಕಿ.ಮೀ. ಉದ್ದದಷ್ಟು ರೋಪ್‌ವೇ ನಿರ್ಮಾಣ ಮಾಡಬೇಕು ಎಂದು ತಿಳಿಸಿದ ಅವರು, ಕರ್ನಾಟಕದಲ್ಲಿ 5 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಸೋಲಾರ್‌ ರೋಪ್‌ವೇ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದು, ಕಲ್ಲತಿರಿ ಬೆಟ್ಟ, ಅಂಜನಾದ್ರಿ ಬೆಟ್ಟ ಹಾಗೂ ದೇವರಾಯನ ದುರ್ಗದ ಬೆಟ್ಟದಲ್ಲಿ ರೋಪ್‌ವೇ ನಿರ್ಮಿಸಲಾಗುತ್ತಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next