ಬೆಂಗಳೂರು: 262 ಕಿಲೋ ಮೀಟರ್ ಉದ್ದದ ಬೆಂಗಳೂರು- ಚೆನ್ನೈ ಎಕ್ಸ್ ಪ್ರೆಸ್ ವೇ (ನ್ಯಾಷನಲ್ ಎಕ್ಸ್ ಪ್ರೆಸ್ 7) ಮೂರು ಹಂತದಲ್ಲಿ ನಿರ್ಮಾಣವಾಗುತ್ತಿದೆ. ಈ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಯೋಜನೆ ಪೂರ್ಣಗೊಂಡರೆ ಪ್ರಸ್ತುತ 6ರಿಂದ 7ಗಂಟೆವರೆಗಿನ ಪ್ರಯಾಣದ ದೂರ 2ರಿಂದ 3ಗಂಟೆಗೆ ಇಳಿಕೆಯಾಗಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Mandya: ಕಬ್ಬಿಣ ಹಾಕಲು ನಿರ್ಮಾಣ ಮಾಡಿದ್ದ ಶೆಡ್ ನಲ್ಲಿ ರಾಶಿ ರಾಶಿ ಗೋವಿನ ಮೂಳೆಗಳು ಪತ್ತೆ
ಈ ಬೆಳವಣಿಗೆ ಜೊತೆಯಲ್ಲಿ ಸರ್ಕಾರವು ಇತ್ತೀಚೆಗೆ ಎಕ್ಸ್ ಪ್ರೆಸ್ ವೇ ಮತ್ತು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಸಮಗ್ರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಇದು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡುವ ಸೂಚನೆಯಾಗಿದೆ ಎಂದು ವರದಿ ವಿವರಿಸಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಅನುಮೋದಿಸಿದ ಈ ಮಾರ್ಗಸೂಚಿ ಜಾಗತಿಕ ಮಟ್ಟದ ಅಧ್ಯಯನದೊಂದಿಗ ವಿನ್ಯಾಸಗೊಳಿಸಲಾಗಿದೆ. ಎಕ್ಸ್ ಪ್ರೆಸ್ ವೇ ಸ್ಪಷ್ಟ ಗೋಚರತೆ ಮತ್ತು ಚಾಲಕರಿಗೆ ಯಾವುದೇ ಗೊಂದಲಗಳಿಲ್ಲದೆ ಮಾರ್ಗದರ್ಶನ ನೀಡಲು ಸಹಕಾರಿಯಾಗಲಿದೆ ಎಂದು ಸಾರಿಗೆ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ತಿಳಿಸಿದೆ.
ಗ್ರೀನ್ ಫೀಲ್ಡ್ ಕಾರಿಡಾರ್ ಅಂದಾಜು 17,000 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರು-ಚೆನ್ನೈ ನಡುವೆ ಸಂಪರ್ಕ ಮತ್ತು ಆರ್ಥಿಕ ಅಭಿವೃದ್ಧಿ ಹೆಚ್ಚಿಸುವ ಗುರಿ ಹೊಂದಿರುವ ಪ್ರಮುಖ ಮೂಲಸೌಕರ್ಯದ ಹೂಡಿಕೆಯಾಗಿದೆ.
ಎಕ್ಸ್ ಪ್ರೆಸ್ ವೇಯಲ್ಲಿ ಬಹುಭಾಷಾ ವಿಧಾನ ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲೂ ಮಾಹಿತಿ ಒಳಗೊಂಡಿರುತ್ತದೆ. ಈ ಕ್ರಮದಿಂದಾಗಿ ವಾಹನ ಸವಾರರಿಗೆ ಉತ್ತಮವಾದ ಸಂವಹನ ಮತ್ತು ಅರಿವು ಮೂಡಿಸಲು ನೆರವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಬೆಂಗಳೂರು ಚೆನ್ನೈ ಎಕ್ಸ್ ಪ್ರೆಸ್ ವೇ ಕಾಮಗಾರಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು 2023ರ ಜನವರಿಯಲ್ಲಿ ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲನೆ ನಡೆಸಿದ್ದರು. ಇದೀಗ 2024ರ ಅಕ್ಟೋಬರ್ ನಲ್ಲಿ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.