Advertisement

ಕೋಟಿ ರೂ. ದೋಚಿದ್ದು ಸಿಸಿಬಿ ಪೊಲೀಸರೇ..!

06:00 AM Dec 02, 2017 | |



Advertisement

ಬೆಂಗಳೂರು: ನೋಟು ಅಮಾನ್ಯಗೊಂಡು ವರ್ಷ ಕಳೆದರೂ ರಾಜಧಾನಿಯಲ್ಲಿ ಬ್ಲಾಕ್‌ ಅಂಡ್‌ ವೈಟ್‌ ದಂಧೆ ಮುಂದುವರಿದಿದ್ದು,  ಬೇಲಿಯೇ ಎದ್ದು ಹೊಲ ಮೇಯ್ದಂತೆ ಸಿಸಿಬಿ ಪೊಲೀಸರೇ ಈ ದಂಧೆಯ ಮೂಲಕ ಒಂದು ಕೋಟಿ ರೂ. ದೋಚಿರುವ ಆಘಾತಕಾರಿ ಅಂಶ ಇದೀಗ ಬಯಲಾಗಿದೆ.

ಇತ್ತೀಚೆಗೆ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನೋಟು ಬದಲಾವಣೆ ಮಾಡಿಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರನ್ನು ಅಡ್ಡಗಟ್ಟಿ ಪೊಲೀಸರ ಸೋಗಿನಲ್ಲಿ ಹೆದರಿಸಿ 1ಕೋಟಿ ರೂ. ದೋಚಿದ್ದವರೂ ನಿಜವಾದ ಸಿಸಿಬಿ ಪೊಲೀಸರೇ ಆಗಿದ್ದಾರೆ. ಸಿಸಿಬಿಯ ಎಎಸ್‌ಐ ಹೊಂಬಾಳೇಗೌಡ, ಪೇದೆಗಳಾದ ನರಸಿಂಹಮೂರ್ತಿ ಹಾಗೂ ಗಂಗಾಧರ್‌ ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ಅಂದು ದೋಚಿದ್ದು ಹೊಸ ನೋಟುಗಳೇ ಆಗಿದ್ದವು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಮತ್ತೂಂದೆಡೆ ನೋಟು ಅಮಾನ್ಯ ಸಂದರ್ಭದಲ್ಲಿ ನಡೆದ ದಾಳಿಯ ವೇಳೆ ಸಿಸಿಬಿ ಜಫ್ತಿ ಮಾಡಿ ಸ್ಟ್ರಾಂಗ್‌ರೂಂನಲ್ಲಿಟ್ಟಿದ್ದ ಹಣ ಮತ್ತು ಆಸ್ತಿ ದಾಖಲೆಗಳು ನಾಪತ್ತೆಯಾಗಿವೆ. ಜತೆಗೆ ಆರೋಪಿಗಳೂ ನಾಪತ್ತೆಯಾಗಿದ್ದಾರೆ. ಅಲ್ಲಿನ ಉಸ್ತುವಾರಿ ಎಸಿಪಿ ಮರಿಯಪ್ಪ ಕರ್ತವ್ಯ ಲೋಪದ ಬಗ್ಗೆಯೂ ಹಿರಿಯ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಹೀಗಾಗಿ, ಸಿಸಿಬಿ ಸ್ಟ್ರಾಂಗ್‌ ರೂಂನಲ್ಲಿ ನಾಪತ್ತೆಯಾಗಿರುವ ನೋಟುಗಳಿಗೂ ಹೈಗ್ರೌಂಡ್ಸ್‌ ಠಾಣೆ ವ್ಯಾಪ್ತಿಯಲ್ಲಿ ದೋಚಿದ 1 ಕೋಟಿ ರೂ.ಮೌಲ್ಯದ ನೋಟುಗಳೂ ಒಂದೇ ಆಗಿದೆಯಾ? ನೋಟು ಬದಲಾವಣೆ ದಂಧೆಯ ರೂವಾರಿಗಳೇ ಸಿಸಿಬಿ ಪೊಲೀಸರಾ? ಎಂಬ ಬಗ್ಗೆ ತನಿಖೆಗಾಗಿ ಜಂಟಿ ಪೊಲೀಸ್‌ ಆಯುಕ್ತ ಸತೀಶ್‌ಕುಮಾರ್‌, ಡಿಸಿಪಿ ಸೆಂಟ್ರಲ್‌ ಚಂದ್ರಗುಪ್ತ, ಸಿಸಿಬಿ ಡಿಸಿಪಿ ಜಿನೇಂದ್ರ ಖಣಗಾವಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.

Advertisement

ಸಿಸಿಬಿ ಸ್ಟ್ರಾಂಗ್‌ ರೂಂನಲ್ಲಿದ್ದ ಹೊಸ ನೋಟುಗಳನ್ನು ಅಲ್ಲಿಂದ ಎಗರಿಸಿ ಹಳೇ ನೋಟುಗಳನ್ನು ತಂದಿಡುವ ಪೂರ್ವನಿಯೋಜಿತ “ಯೋಜನೆ’ ನಡೆದಿತ್ತೇ? ಇದೇ ಕಾರಣಕ್ಕೆ ಹಳೇ ನೋಟು ಇದ್ದವರನ್ನು ಮಾಹಿತಿದಾರರ ಮೂಲಕ ಪತ್ತೆ ಹಚ್ಚಿ ಕರೆತಂದು ನೋಟು ಬದಲಾವಣೆಗಾಗಿ ಬಂದಾಗ ಬದಲಾಯಿಸುವ ನಾಟಕ ಮಾಡಿ ಮತ್ತೂಂದು ಕಡೆಯಿಂದ ದಾಳಿ ನಡೆಸಿ ದೋಚಲಾಗುತ್ತಿತ್ತೇ ಎಂಬ ಅನುಮಾನಗಳ ಸುತ್ತ ತನಿಖೆ ಕೈಗೊಳ್ಳಲಾಗಿದೆ. ಸಿಸಿಬಿ ದಾಳಿಗಾಗಿ ಬಳಕೆ ಮಾಡುತ್ತಿದ್ದ ಬಾಡಿಗೆ ಸ್ವಿಫ್ಟ್ ಕಾರನ್ನೇ ಹೈಗ್ರೌಂಡ್ಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೃತ್ಯಕ್ಕೂ ಬಳಸಿದ್ದು, ದೂರುದಾರರು ಕಾರಿನ ಸಂಖ್ಯೆ ಬರೆದಿಟ್ಟುಕೊಂಡಿದ್ದರಿಂದ ಇಡೀ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಂತಾಗಿದೆ.

ಈ ಘಟನೆ ಬೆನಲ್ಲೇ ಜಂಟಿ ಪೊಲೀಸ್‌ ಆಯುಕ್ತರು ಸಿಸಿಬಿ ಸ್ಟ್ರಾಂಗ್‌ ರೂಂಗೆ ತೆರಳಿ ಎಷ್ಟು ದಾಳಿಗಳು ನಡೆದಿದ್ದವು, ಎಷ್ಟು ಹಳೇ ಹಾಗೂ ಹೊಸ ನೋಟು ವಶಪಡಿಸಿಕೊಳ್ಳಲಾಗಿತ್ತು. ಆಸ್ತಿ ದಾಖಲೆಗಳು ಎಷ್ಟಿದ್ದವು, ಎಷ್ಟು ನಾಪತ್ತೆಯಾಗಿವೆ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಒಟ್ಟಾರೆ ಪ್ರಕರಣದಲ್ಲಿ ಸಿಸಿಬಿ ಎಸಿಪಿ ಮರಿಯಪ್ಪ ಅವರ ಪಾತ್ರ ಏನು ಎಂಬುದು ನಿಗೂಢವಾಗಿದೆ. ಏಕೆಂದರೆ ನಾಪತ್ತೆಯಾಗಿರುವ ಸಿಸಿಬಿ ಎಎಸ್‌ಐ ಹೊಂಬಾಳೇಗೌಡ, ಪೇದೆಗಳಾದ ನರಸಿಂಹಮೂರ್ತಿ, ಗಂಗಾಧರ್‌ ಮರಿಯಪ್ಪ ಅವರ ವಿಭಾಗದಲ್ಲೇ ಕೆಲಸ ಮಾಡುತ್ತಿದ್ದರು. ಹೀಗಾಗಿ, ಮರಿಯಪ್ಪ ಅವರ ಪಾತ್ರ ಏನಿರಬಹುದು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಏನಿದು ಘಟನೆ?
ಇತ್ತೀಚೆಗೆ ಬಿಎಂಟಿಸಿ ನಿರ್ವಾಹಕ ಸುಬಾನು ಎಂಬುವರು ಹೈಗೌಂಡ್ಸ್‌ ಠಾಣೆಗೆ ದೂರು ನೀಡಿ ನೋಟು ಬದಲಾವಣೆಗೆ ಸ್ನೇಹಿತರ ಜತೆ ಬಂದಿದ್ದಾಗ ಪೊಲೀಸರ ಸೋಗಿನಲ್ಲಿ ಬಂದವರು 1 ಕೋಟಿ ರೂ. ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದರು. ಜತೆಗೆ  ಆರು ಜನರ ವಿರುದ್ಧ ಅನುಮಾನ ಇರುವ ಬಗ್ಗೆ ದೂರು ನೀಡಿದ್ದರು. ತನಗೆ ಬ್ಯಾಂಕ್‌ನಲ್ಲಿ ಸಾಲ ಇದ್ದ ಕಾರಣ ನೋಟು ಬದಲಾವಣೆ ದಂಧೆಗೆ ಮುಂದಾಗಿದ್ದಾಗಿ ಅದಕ್ಕಾಗಿ ಸ್ನೇಹಿತರ ನೆರವು ಪಡೆದಿದ್ದಾಗಿಯೂ ದೂರಿನಲ್ಲಿ ಒಪ್ಪಿಕೊಂಡಿದ್ದರು. ಅಂದು ಪೊಲೀಸರ ಸೋಗಿನಲ್ಲಿ ಬಂದವರು ಬಳಸಿದ್ದ ಸ್ವಿಫ್ಟ್ ಕಾರಿನ ಸಂಖ್ಯೆಯನ್ನೂ ಮೌಖೀಕವಾಗಿ ಹೇಳಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಸಿಸಿಬಿ ಪೊಲೀಸರೇ ಒಂದು ಕೋಟಿ ರೂ.ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆಘಾತಕಾರಿ ವಿಚಾರ ಪತ್ತೆಯಾಯಿತು.

ಬ್ಲ್ಯಾಕ್‌ ಆ್ಯಂಡ್‌ ವೈಟ್‌ ದಂಧೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಬೆದರಿಕೆಯೊಡ್ಡಿ 1 ಕೋಟಿ ಹಣ ದೋಚಿರುವುದು ಸಿಸಿಬಿಯ ಎಎಸ್‌ಐ ಹೊಂಬಾಳೇಗೌಡ, ಪೇದೆಗಳಾದ ನರಸಿಂಹಮೂರ್ತಿ ಹಾಗೂ ಗಂಗಾಧರ್‌ ಎಂದು ತನಿಖೆಯಿಂದ ತಿಳಿದು ಬಂದಿದೆ. ಎಸಿಪಿ ಮರಿಯಪ್ಪ ಅವರ ಪಾತ್ರ ಇರುವ ಬಗ್ಗೆ ಮಾಹಿತಿ ಇಲ್ಲ. ಅಲ್ಲದೇ ಸಿಸಿಬಿ ಖಜಾನೆಯಲ್ಲಿ ಹಣ ನಾಪತ್ತೆ ಪ್ರಕರಣಕ್ಕೂ ಇದಕ್ಕೂ ಸಂಬಂಧವಿಲ್ಲ.
 -ಚಂದ್ರಗುಪ್ತ, ಕೇಂದ್ರ ವಿಭಾಗ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next