Advertisement

Bengaluru: ಜುಲೈಗೆ ಕಾವೇರಿ 5ನೇ ಹಂತದ ನೀರು ಪೂರೈಕೆ

12:34 PM Jun 22, 2024 | Team Udayavani |

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಳೆದ ಹಲವು ವರ್ಷಗಳಿಂದ ಆರಂಭಿಸಿರುವ ಕಾವೇರಿ 5ನೇ ಹಂತದ ಕಾಮಗಾರಿ ಕೊನೆಗೂ ಅಂತಿಮ ಹಂತಕ್ಕೆ ಬಂದಿದ್ದು, ಜುಲೈಗೆ 110 ಹಳ್ಳಿಗಳಿಗೆ ಕಾವೇರಿ ಹರಿದು ಬರಲಿದ್ದಾಳೆ.

Advertisement

ಜಲಮಂಡಳಿಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಂಡು ಜುಲೈ ಮೊದಲ ವಾರದಲ್ಲಿ 775 ಎಂಎಲ್‌ಡಿ ಕಾವೇರಿ ನೀರು ಬೆಂಗಳೂರಿನ 110 ಹಳ್ಳಿಗಳಿಗೆ ಹರಿದು ಬರಲಿದೆ. ಸದ್ಯ ಕಾವೇರಿ 5ನೇ ಹಂತದ ಕಾಮಗಾರಿಯಲ್ಲಿ ನೀರಿನ ಪರೀಕ್ಷೆ ನಡೆಸಲಾಗುತ್ತಿದೆ. ಒಂದೆರಡು ಕಡೆಗಳಲ್ಲಿ ವಾಲ್ಸ್‌ ಅಳವಡಿಸಲಾಗುತ್ತಿದೆ. ಕಾವೇರಿ ನೀರನ್ನು ಯಾವ ರೀತಿಯಲ್ಲಿ ಹರಿಸಬಹುದು ಎಂಬುದನ್ನು ಪರಿಶೀಲಿಸಲು ಪ್ರಾಯೋಗಿಕ ಕಾರ್ಯವೂ ಭರದಿಂದ ಸಾಗಿದೆ. ಟಿ.ಕೆ.ಹಳ್ಳಿ, ಹಾರೋಹಳ್ಳಿ, ತಾತಗುಣಿಯಲ್ಲಿ 3 ಪ್ರತ್ಯೇಕ ಪಂಪಿಂಗ್‌ ಸ್ಟೇಷನ್‌ ನಿರ್ಮಿಸಲಾಗಿದೆ. ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟಿನಲ್ಲಿ (ಕೆಆರ್‌ಎಸ್‌) ಉಂಟಾಗಿದ್ದ ನೀರಿನ ಕೊರತೆಯೂ ನೀಗಿದೆ.

ಕಾವೇರಿ ನೀರು ಪಡೆಯುವ 110 ಗ್ರಾಮಗಳು:

ಆರ್‌. ಆರ್‌. ನಗರ ವಲಯಗಳಲ್ಲಿ ಉಲ್ಲಾಳು, ವಸಂತಪುರ, ಹೊಸಹಳ್ಳಿ, ಸುಬ್ರಹ್ಮಣ್ಯಪುರ, ಸೋಂಪುರ, ಹೆಮ್ಮಿಗೆಪುರ ಸೇರಿ 17 ಹಳ್ಳಿಗಳು ಬರಲಿವೆ. ಬ್ಯಾಟರಾಯನಪುರ ವಲಯಗಳಲ್ಲಿ ಅನಂತಪುರ, ದೊಡ್ಡಬೆಟ್ಟಹಳ್ಳಿ, ಚಿಕ್ಕಬೆಟ್ಟಹಳ್ಳಿ, ಹಾರೋಹಳ್ಳಿ, ಗೋವಿಂದಪುರ, ಹೊರಮಾವು ಆಗರ, ಬೈರತಿ, ದಾಸರಹಳ್ಳಿ, ಚಿಕ್ಕನಹಳ್ಳಿ, ಕೊತ್ತನೂರು ಸೇರಿ 26 ಹಳ್ಳಿಗಳು ಬರಲಿವೆ. ದಾಸರಹಳ್ಳಿ ವಲಯಗಳಲ್ಲಿ ಚಿಕ್ಕಲಸಂದ್ರ, ಅಬ್ಬಿಗೆರೆ, ಹೇರೋಹಳ್ಳಿ, ಹೊಸಹಳ್ಳಿ ಸೇರಿ 11 ಹಳ್ಳಿಗಳು ಬರಲಿವೆ. ಮಹದೇವ ಪುರ ವಲಯಗಳಲ್ಲಿ ಚೆನ್ನಸಂದ್ರ, ದೇವರ ಬೀಸನಹಳ್ಳಿ, ಕಾಡಬೀಸನಹಳ್ಳಿ, ವರ್ತೂರು, ಹೊರಮಾವು ಸೇರಿ 23 ಹಳ್ಳಿಗಳು ಬರಲಿವೆ. ಬೊಮ್ಮನಹಳ್ಳಿ ವಲಯಗಳಲ್ಲಿ ಅಂಬಲಿಪುರ, ಬೇಗೂರು ಸೇರಿ 33 ಹಳ್ಳಿಗಳು ಬರಲಿವೆ.

3.50 ಲಕ್ಷ ಸಂಪರ್ಕ ಪಡೆಯಲು ಅವಕಾಶ

Advertisement

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜೊತೆಗೆ ಜಲಮಂಡಳಿ ಅಧಿಕಾರಿಗಳು ಕಾವೇರಿ 5ನೇ ಹಂತದ ಯೋಜನೆ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿ ಮಾಹಿತಿ ನೀಡಿದ್ದಾರೆ. ಮುಂದಿನ ವಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಯೋಜನೆ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಯೋಜನೆಗೆ ಸಹಕರಿಸಿರುವ ಜೈಕಾ ಸೇರಿದಂತೆ ವಿವಿಧ ಸಂಸ್ಥೆಗಳ ಸಮ್ಮುಖದಲ್ಲಿ ಕಾವೇರಿ 5ನೇ ಹಂತದ ಯೋಜನೆಗೆ ಚಾಲನೆಗೆ ದಿನಗಣನೆ ಶುರುವಾಗಿದ್ದು, ಜಲಮಂಡಳಿ ಭರ್ಜರಿ ತಯಾರಿ ನಡೆಸುತ್ತಿದೆ. ಈ ನಡುವೆ ಕಾವೇರಿ 5ನೇ ಹಂತದ ಯೋಜನೆಯಡಿ 110 ಹಳ್ಳಿಗಳಲ್ಲಿ 3.50 ಲಕ್ಷ ಸಂಪರ್ಕ ಕಲ್ಪಿಸಲು ಅವಕಾಶಗಳಿದ್ದರೂ, ಇದುವರೆಗೆ ಸುಮಾರು 48 ಸಾವಿರ ಸಂಪರ್ಕ ನೀಡಲಾಗಿದೆ. ಜನರ ಮನವೊಲಿಸಿ ಕಾವೇರಿ ಸಂಪರ್ಕ ಹೆಚ್ಚಳ ಮಾಡಲು ಜಲಮಂಡಳಿ ಅಧಿಕಾರಿಗಳು ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next