Advertisement

Bengaluru ಒಳಚರಂಡಿ: 3000 ಅನಧಿಕೃತ ಸಂಪರ್ಕ ಪತ್ತೆ

01:04 PM Jun 25, 2024 | Team Udayavani |

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಅನಧಿಕೃತವಾಗಿ ತ್ಯಾಜ್ಯ ನೀರನ್ನು ಒಳಚರಂಡಿಗೆ ಹರಿಸುವವರ ವಿರುದ್ಧ ಹದ್ದಿನ ಕಣ್ಣಿಟ್ಟಿರುವ ಜಲ ಮಂಡಳಿಯು, ಕಳೆದೊಂದು ತಿಂಗಳಲ್ಲಿ 24.27 ಕೋಟಿ ರೂ. ಶುಲ್ಕ ವಸೂಲಿ ಮಾಡಿದೆ. ಈ ಮೂಲಕ ಮಂಡಳಿಯ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಿದೆ.

Advertisement

ತ್ಯಾಜ್ಯ ನೀರು ವಿಲೇವಾರಿ ಮಾಡುವುದೇ ಮಂಡಳಿಗೆ ದೊಡ್ಡ ಸವಾಲಾಗಿದೆ. ಅನಧಿಕೃತವಾಗಿ ಒಳಚರಂಡಿ ಸಂಪರ್ಕ ಹೊಂದಿರುವವರಿಂದ ಈ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ. ಹೀಗಾಗಿ ಜಲಮಂಡಳಿಯು ಅನಧಿಕೃತ ಒಳಚರಂಡಿ ಸಂಪರ್ಕಗಳ ಮೂಲಕ ತ್ಯಾಜ್ಯ ನೀರು ಹರಿಸುತ್ತಿ ರುವು ದನ್ನು ಪತ್ತೆ ಹಚ್ಚಲು ನಗರದ 18,367 ಕಡೆ ಸರ್ವೆ ನಡೆಸಿದೆ. ಆ ವೇಳೆ 2,929 ಕಡೆ ಅನಧಿಕೃತ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ. ಇಂತಹ ಮನೆ, ಕಟ್ಟಡ ಮಾಲಿಕರಿಂದ ಇದುವರೆಗೆ ಒಟ್ಟು 24.27 ಕೋಟಿ ರೂ. ಶುಲ್ಕ ಸಂಗ್ರಹಿಸಿ, ತ್ಯಾಜ್ಯ ನೀರನ್ನು ಅಧಿಕೃತವಾಗಿ ಒಳಚರಂಡಿಗೆ ಹರಿಸಲು ಜಲಮಂಡಳಿಯು ಕ್ರಮ ಕೈಗೊಂಡಿದೆ.

 ಶುಲ್ಕದ ದುಡ್ಡಲ್ಲಿ ಮಂಡಳಿ ನಿರ್ವಹಣೆ: ಮುಂದಿನ ದಿನಗಳಲ್ಲಿ ನಗರಾದ್ಯಂತ ಇದೇ ಮಾದರಿಯಲ್ಲಿ ಸರ್ವೆ ನಡೆಸಿ ಅನಧಿಕೃತ ಒಳಚರಂಡಿ ಸಂಪರ್ಕ ಹೊಂದಿರುವವರಿಂದ ಶುಲ್ಕ ಪಡೆದು ಜಲಮಂಡಳಿಯೇ ಅಧಿಕೃತಗೊಳಿಸಲಿದೆ. ಶುಲ್ಕದಿಂದ ಬಂದ ದುಡ್ಡನ್ನು ಭಾರಿ ನಷ್ಟದಲ್ಲಿದ್ದ ಮಂಡಳಿಯ ನಿರ್ವಹಣೆಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ. ನಗರದಲ್ಲಿ ಸಾವಿರಾರು ಅನಧಿಕೃತ ಒಳಚರಂಡಿ ಸಂಪರ್ಕ ಹೊಂದಿರುವ ಬಗ್ಗೆ ಕೆಲ ವರ್ಷಗಳ ಹಿಂದೆಯೇ ಮಂಡಳಿ ಅಧಿಕಾರಿಗಳಿಗೆ ಸುಳಿವು ಸಿಕ್ಕಿದ್ದರೂ ತಲೆಕೆಡಿಸಿಕೊಂಡಿರಲಿಲ್ಲ. ಪರಿಣಾಮ ಜಲಮಂಡಳಿಗೆ ಶುಲ್ಕ ಪಾವತಿಸದೇ ನಿಯಮ ಉಲ್ಲಂ  ಸಿ ತ್ಯಾಜ್ಯ ನೀರನ್ನು ಚರಂಡಿಗೆ ಹರಿಸುವವರ ಪ್ರಮಾಣ ಗಣನೀಯವಾಗಿ ಏರಿಕೆಯಾಗಿತ್ತು. ಇದೀಗ ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ನೇತೃತ್ವದಲ್ಲಿ ಅನಧಿಕೃತ ಒಳಚರಂಡಿ ಸಂಪರ್ಕಗಳ ಮೇಲೆ ಜಲಮಂಡಳಿ ಅಧಿಕಾರಿಗಳು ನಿಗಾ ಇರಿಸಲು ಮುಂದಾಗಿದ್ದಾರೆ.

ಜಲಮಂಡಳಿ ನಿಯಮದಲ್ಲೇನಿದೆ?:

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964 ಕಲಂ 65 ಮತ್ತು 72ರನ್ವಯ ಬಿಬಿಎಂಪಿ ವ್ಯಾಪ್ತಿಯ ನಾಗರಿಕರು ತಮ್ಮ ಕಟ್ಟಡದ ಒಳಚರಂಡಿ ನೀರನ್ನು ಕಡ್ಡಾಯವಾಗಿ ಜಲಮಂಡಳಿ ಸಂಪರ್ಕ ಪಡೆದು ಮಂಡಳಿಯ ಒಳಚರಂಡಿ ಕೊಳವೆ ಮಾರ್ಗಕ್ಕೆ ಹರಿಸಬೇಕಾಗಿದೆ ಎಂದು ನಿಯಮವಿದೆ. ಬೃಹತ್‌ ಕಟ್ಟಡ ಹೊಂದಿರುವವರು ಎಸ್‌ಟಿಪಿ ಅಳವಡಿಸಿಕೊಂಡು ಸಂಸ್ಕರಿಸಿದ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸಬೇಕು ಎಂದು ಸೂಚಿಸಲಾಗಿದೆ

Advertisement

ಅನಧಿಕೃತ ಸಂಪರ್ಕದಿಂದ ತೊಡಕೇನು?

ಕಾವೇರಿ ನೀರಿನ ಸಂಪರ್ಕ ಪಡೆದವರಿಂದ ಜಲಮಂಡಳಿ ಮೊದಲೇ ಶುಲ್ಕ ಸಂಗ್ರಹಿಸಿ ಒಳಚರಂಡಿ ಸಂಪರ್ಕ ವ್ಯವಸ್ಥೆ ಕಲ್ಪಿಸಿಕೊಡುತ್ತದೆ. ಆದರೆ, ಕಾವೇರಿ ನೀರಿನ ಸಂಪರ್ಕ ಹೊಂದದೇ ಇರುವವರು ಜಲಮಂಡಳಿಗೆ ಅರ್ಜಿ ಸಲ್ಲಿಸಿ ಅಧಿಕೃತ ಒಳಚರಂಡಿ ಸಂಪರ್ಕ ಪಡೆದುಕೊಳ್ಳಬೇಕು. ಇದರ ಆಧಾರದಲ್ಲಿ ಜಲಮಂಡಳಿ ಎಸ್‌ಟಿಪಿ ನಿರ್ಮಿಸಿ ತ್ಯಾಜ್ಯ ನೀರು ಸಂಸ್ಕರಿಸುತ್ತದೆ. ಅನಧಿಕೃತ ಒಳಚರಂಡಿ ಸಂಪರ್ಕದಿಂದ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ನೀರು ಹರಿದು ಒಳಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ತೊಡಕಾಗುತ್ತದೆ. ಒಳಚರಂಡಿ ಮೇಲೆ ಒತ್ತಡ ಹೆಚ್ಚಾಗಿ ರಸ್ತೆಗಳಲ್ಲಿ ತ್ಯಾಜ್ಯ ನೀರು ಹರಿಯುತ್ತದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೂ ಪರಿಣಾಮ ಭೀರುವ ಸಾಧ್ಯತೆಗಳಿವೆ.

ಅನಧಿಕೃತ ಒಳಚರಂಡಿ ಸಂಪರ್ಕಗಳನ್ನು ಜನ ಸ್ವಯಂ ಪ್ರೇರಿತರಾಗಿ ಸಕ್ರಮಗೊಳಿಸಿಕೊಳ್ಳಬೇಕು. ಮನೆ ಬಳಕೆ ನೀರನ್ನು ಅಕ್ರಮವಾಗಿ ಒಳಚರಂಡಿ ಕೊಳವೆ ಮಾರ್ಗಕ್ಕೆ ಅಥವಾ ಮಳೆ ನೀರು ಕಾಲುವೆಗೆ ಹರಿಸುತ್ತಿರುವುದು ಕಂಡು ಬಂದಲ್ಲಿ ಅಂತಹ ಪ್ರಕರಣ ಗಂಭೀರವಾಗಿ ಪರಿಗಣಿಸಲಾಗುವುದು. -ಡಾ.ವಿ.ರಾಮ್‌ಪ್ರಸಾತ್‌ ಮನೋಹರ್‌, ಅಧ್ಯಕ್ಷ, ಜಲಮಂಡಳಿ.

Advertisement

Udayavani is now on Telegram. Click here to join our channel and stay updated with the latest news.

Next