Advertisement
ಜಲಮಂಡಳಿಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಂಡು ಜುಲೈ ಮೊದಲ ವಾರದಲ್ಲಿ 775 ಎಂಎಲ್‌ಡಿ ಕಾವೇರಿ ನೀರು ಬೆಂಗಳೂರಿನ 110 ಹಳ್ಳಿಗಳಿಗೆ ಹರಿದು ಬರಲಿದೆ. ಸದ್ಯ ಕಾವೇರಿ 5ನೇ ಹಂತದ ಕಾಮಗಾರಿಯಲ್ಲಿ ನೀರಿನ ಪರೀಕ್ಷೆ ನಡೆಸಲಾಗುತ್ತಿದೆ. ಒಂದೆರಡು ಕಡೆಗಳಲ್ಲಿ ವಾಲ್ಸ್ ಅಳವಡಿಸಲಾಗುತ್ತಿದೆ. ಕಾವೇರಿ ನೀರನ್ನು ಯಾವ ರೀತಿಯಲ್ಲಿ ಹರಿಸಬಹುದು ಎಂಬುದನ್ನು ಪರಿಶೀಲಿಸಲು ಪ್ರಾಯೋಗಿಕ ಕಾರ್ಯವೂ ಭರದಿಂದ ಸಾಗಿದೆ. ಟಿ.ಕೆ.ಹಳ್ಳಿ, ಹಾರೋಹಳ್ಳಿ, ತಾತಗುಣಿಯಲ್ಲಿ 3 ಪ್ರತ್ಯೇಕ ಪಂಪಿಂಗ್ ಸ್ಟೇಷನ್ ನಿರ್ಮಿಸಲಾಗಿದೆ. ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟಿನಲ್ಲಿ (ಕೆಆರ್‌ಎಸ್) ಉಂಟಾಗಿದ್ದ ನೀರಿನ ಕೊರತೆಯೂ ನೀಗಿದೆ.
Related Articles
Advertisement
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆಗೆ ಜಲಮಂಡಳಿ ಅಧಿಕಾರಿಗಳು ಕಾವೇರಿ 5ನೇ ಹಂತದ ಯೋಜನೆ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿ ಮಾಹಿತಿ ನೀಡಿದ್ದಾರೆ. ಮುಂದಿನ ವಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಯೋಜನೆ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಯೋಜನೆಗೆ ಸಹಕರಿಸಿರುವ ಜೈಕಾ ಸೇರಿದಂತೆ ವಿವಿಧ ಸಂಸ್ಥೆಗಳ ಸಮ್ಮುಖದಲ್ಲಿ ಕಾವೇರಿ 5ನೇ ಹಂತದ ಯೋಜನೆಗೆ ಚಾಲನೆಗೆ ದಿನಗಣನೆ ಶುರುವಾಗಿದ್ದು, ಜಲಮಂಡಳಿ ಭರ್ಜರಿ ತಯಾರಿ ನಡೆಸುತ್ತಿದೆ. ಈ ನಡುವೆ ಕಾವೇರಿ 5ನೇ ಹಂತದ ಯೋಜನೆಯಡಿ 110 ಹಳ್ಳಿಗಳಲ್ಲಿ 3.50 ಲಕ್ಷ ಸಂಪರ್ಕ ಕಲ್ಪಿಸಲು ಅವಕಾಶಗಳಿದ್ದರೂ, ಇದುವರೆಗೆ ಸುಮಾರು 48 ಸಾವಿರ ಸಂಪರ್ಕ ನೀಡಲಾಗಿದೆ. ಜನರ ಮನವೊಲಿಸಿ ಕಾವೇರಿ ಸಂಪರ್ಕ ಹೆಚ್ಚಳ ಮಾಡಲು ಜಲಮಂಡಳಿ ಅಧಿಕಾರಿಗಳು ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.