ರಾಂಚಿ: ನಾಯಕ ರೋಹಿತ್ ಕುಮಾರ್ ಕಳಪೆ ಪ್ರದರ್ಶನ, ಸುಲಭ ಅವಕಾಶಗಳಿದ್ದಾಗ ಬೇಜವಾಬ್ದಾರಿ ಆಟವಾಡಿದ್ದು, ಕೆಲವು ತಪ್ಪು ನಿರ್ಧಾರ ಮಾಡಿದ್ದು ಬೆಂಗಳೂರು ಬುಲ್ಸ್ ಪಾಲಿಗೆ ಶಾಪವಾಯಿತು. ಪರಿಣಾಮ ಗೆಲ್ಲಬೇಕಾದ ಪಂದ್ಯವನ್ನು ಡ್ರಾಗೊಳಿಸಿಕೊಂಡಿತು. ಸೋಲುವ ಸ್ಥಿತಿ ತಲುಪಿದ್ದ ತೆಲುಗು ಟೈಟಾನ್ಸ್ ತಂಡ ನಿಟ್ಟುಸಿರು ಬಿಟ್ಟಿತು. ಪಂದ್ಯದ ಅಂತಿಮ ಅಂಕ 26-26.
ಇಲ್ಲಿನ ಭಗತ್ ಸಿಂಗ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬೆಂಗಳೂರಿನ ತನ್ನದೇ ತಪ್ಪುಗಳಿಗೆ ಬಲಿಪಶುವಾಯಿತು. ಒಟ್ಟು 5ಕ್ಕೂ ಅಧಿಕ ಬಾರಿ ತೆಲುಗು ತಂಡ ಆಲೌಟಾಗುವುದನ್ನು ತಪ್ಪಿಸಿಕೊಂಡಿತು. ಈ ಅಷ್ಟೂ ಸಂದರ್ಭದಲ್ಲಿ ಬೆಂಗಳೂರು ನಾಯಕ ರೋಹಿತ್ ಕುಮಾರ್ ಅವರೇ ವಿಫಲ ದಾಳಿ ಮಾಡಿದ್ದು ಎನ್ನುವುದನ್ನು ಇಲ್ಲಿ ಗಮನಿಸಬೇಕು.
ಇನ್ನೇನು ಪಂದ್ಯ ಮುಗಿಯಲು ಕೊನೆಯ 30 ಸೆಕೆಂಡ್‌ಗಳಿದ್ದಾಗ ಬೆಂಗಳೂರು ಡೂ ಆರ್ ಡೈ ದಾಳಿ ಮಾಡಬೇಕಾದ ಅನಿವಾರ್ಯತೆಯಲ್ಲಿತ್ತು. ದಾಳಿಗೆ ತೆರಳಿದ ಅಜಯ್ ಅಂಕ ಗಳಿಸಲು ವಿಫಲರಾದರು. ಪರಿಣಾಮ ತೆಲುಗಿಗೆ 1 ಅಂಕ ಲಭಿಸಿತು. ಪಂದ್ಯ ಟೈಗೊಂಡಿತು.
ಮೊದಲನೇ ಅವಧಿಯಲ್ಲಿ ತೆಲುಗು ಆಲೌಟ್: ಮೊದಲನೇ ಅವಧಿ ಬೆಂಗಳೂರು ಬುಲ್ಸ್-ತೆಲುಗು ಟೈಟಾನ್ಸ್ ನಡುವೆ ಅಂಕಕ್ಕೆ ಅಂಕ ಎನ್ನುವಂತೆ ಹಣಾಹಣಿ ನಡೆಯಿತು. ಎಲ್ಲ ಲೆಕ್ಕಾಚಾರದ ಪ್ರಕಾರ ನಡೆದಿದ್ದರೆ ಆರಂಭದ 5ನೇ ನಿಮಿಷದಲ್ಲೇ ತೆಲುಗು ಆಲೌಟಾಗಬೇಕಿತ್ತು. ತೆಲುಗು ಕೋಟೆಯಲ್ಲಿ ಕೇವಲ ಮೂವರಿದ್ದಾಗ ಬೆಂಗಳೂರು ನಾಯಕ ರೋಹಿತ್ ಕುಮಾರ್ ದಾಳಿಗೆ ತೆರಳಿ ಔಟಾಗಿ ವಾಪಸಾದರು. ಆಗ ತೆಲುಗು ಆಲೌಟಾಗುವುದರಿಂದ ಪಾರಾಯಿತು. ನಂತರ ಇತ್ತಂಡಗಳು ಸಮಬಲದ ಹೋರಾಟ ಮುಂದುವರಿಸಿದವು. ಒಮ್ಮೆ ಬೆಂಗಳೂರು, ಒಮ್ಮೆ ತೆಲುಗು ಹೀಗೆ ಆಲೌಟಾಗುವುದನ್ನು ತಪ್ಪಿಸಿಕೊಳ್ಳುತ್ತಾ ಹೊರಟವು.
ಅಷ್ಟರಲ್ಲಿ ತೆಲುಗು ಅದೃಷ್ಟ ಕೈಕೊಟ್ಟಿತು. ಮೊದಲರ್ಧ ಮುಗಿಯಲು ಇನ್ನೇನು 5 ನಿಮಿಷವಿದ್ದಾಗ ಅಂದರೆ 16ನೇ ನಿಮಿಷದಲ್ಲಿ ತೆಲುಗು ಕೋಟೆ ಖಾಲಿ ಮಾಡಿಕೊಂಡು ಆಲೌಟಾಯಿತು. ಆಗ ಬೆಂಗಳೂರಿನ ಅಂಕ 10 ಇದ್ದಿದ್ದು 13ಕ್ಕೇರಿತು. ಅವಧಿ ಮುಕ್ತಾಯವಾದಾಗ ಬೆಂಗಳೂರು 15, ತೆಲುಗು 12ರಲ್ಲಿದ್ದವು.
ರಾಹುಲ್ ಚೌಧರಿ 600
ತೆಲುಗು ಟೈಟಾನ್ಸ್ ತಂಡದ ಖ್ಯಾತನಾಮ ಆಟಗಾರ ರಾಹುಲ್ ಚೌಧರಿ ಪ್ರೊ ಕಬಡ್ಡಿ ಇತಿಹಾಸದಲ್ಲಿ ದಾಖಲೆಯೊಂದನ್ನು ಸೃಷ್ಟಿಸಿದರು. ಮೊದಲನೇ ಅವಧಿ ಮುಗಿಯಲು ಇನ್ನೇನು 1 ನಿಮಿಷವಿದ್ದಾಗ ಅವರು ತಮ್ಮ ದಾಳಿ ವೇಳೆ ಅಂಕ ಗಳಿಸಿದರು. 5 ಆವೃತ್ತಿ ಪ್ರೊ ಕಬಡ್ಡಿಯಲ್ಲಿ ದಾಳಿ ಮೂಲಕ ಅವರು ಗಳಿಸಿದ 600ನೇ ಅಂಕವಿದು. ಪ್ರೊ ಕಬಡ್ಡಿಯಲ್ಲಿ ಇಂತಹ ಸಾಧನೆ ಮಾಡಿದ ಮೊದಲಿಗ ಎನ್ನುವ ಅಪೂರ್ವ ದಾಖಲೆ ಅವರ ಹೆಸರಿಗೆ ಸೇರ್ಪಡೆಯಾಯಿತು.