ಮುಂಬಯಿ: ಬೆಂಗಳೂರು ಬುಲ್ಸ್ ತಂಡಕ್ಕೆ ಪ್ರೊ ಕಬಡ್ಡಿ ಕೋಡು ಮೂಡಿದೆ. ಶನಿವಾರದ ಜಿದ್ದಾಜಿದ್ದಿ ಫೈನಲ್‌ನಲ್ಲಿ ರೋಹಿತ್ ಕುಮಾರ್ ಸಾರಥ್ಯದ ಬುಲ್ಸ್ 38-33 ಅಂತರದಿಂದ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡವನ್ನು ಮಣಿಸಿ ಮೆರೆಯಿತು. ಇದು ಬುಲ್ಸ್‌ಗೆ ಒಲಿದ ಮೊದಲ ಪ್ರೊ ಕಬಡ್ಡಿ ಕಿರೀಟ.
ಆರಂಭದಲ್ಲಿ ಹಿಂದಿದ್ದ ಬೆಂಗಳೂರು ಬುಲ್ಸ್, ಸ್ಟಾರ್ ರೈಡರ್ ಪವನ್ ಶೆಹ್ರಾವತ್ ಅವರ ಭರ್ಜರಿ ರೈಡಿಂಗ್ ಪರಾಕ್ರಮದಿಂದ (25 ರೈಡ್‌ಗಳಿಂದ 23 ಅಂಕ) ಮೇಲೆದ್ದು ನಿಂತಿತು. ವಿರಾಮದ ವೇಳೆ ಗುಜರಾತ್ 16-9 ಅಂಕಗಳ ಮುನ್ನಡೆಯಲ್ಲಿತ್ತು.
2015ರಲ್ಲಿ ಫೈನಲ್ ಪ್ರವೇಶಿಸಿದ್ದ ಬುಲ್ಸ್ ಅಂದು ಯು ಮುಂಬಾ ವಿರುದ್ಧ ಸೋತು ಕಿರೀಟ ಗೆಲ್ಲುವಲ್ಲಿ ವಿಫಲವಾಗಿತ್ತು. ಅಂದಿನ ನೋವನ್ನು ಬುಲ್ಸ್ ಈ ಬಾರಿ ನಿವಾರಿಸಿಕೊಂಡಿದೆ. ಗುಜರಾತ್ ಸತತ 2ನೇ ವರ್ಷವೂ ಫೈನಲ್‌ನಲ್ಲಿ ಎಡವಿ ತೀವ್ರ ನಿರಾಶೆ ಅನುಭವಿಸಿತು.
ಇಲ್ಲಿನ ಎನ್‌ಎಸ್‌ಸಿಐ ಎಸ್‌ವಿಪಿ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ಪಡೆ, ಮೊದಲು ರೈಡ್ ನಡೆಸಿದ ಗುಜರಾತ್ ತಂಡದ ಸಚಿನ್ ಅವರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು. ಅನಂತರ, ಪವನ್ ಅವರಿಂದ 10ನೇ ನಿಮಿಷದಲ್ಲಿ 7-7 ಸಮಬಲ ಸಾಧಿಸಿದ ಬುಲ್ಸ್, ಆನಂತರದ ನಿಮಿಷಗಳಲ್ಲಿ ರೈಡಿಂಗ್ ಹಾಗೂ ಟ್ಯಾಕ್ಲಿಂಗ್‌ಗಳಲ್ಲಿ ಸತತ ತಪ್ಪುಗಳನ್ನೆಸೆದು ಒಂದೊಂದಾಗಿ ಅಂಕಗಳನ್ನು ಎದುರಾಳಿ ತಂಡಕ್ಕೆ ಬಿಟ್ಟುಕೊಡುತ್ತ ಸಾಗಿತು. ಪರಿಣಾಮ, ಮೊದಲಾರ್ಧದ ಹಿನ್ನಡೆ.
ದ್ವಿತೀಯಾರ್ಧದ ಆರಂಭದಲ್ಲೂ ಇದೇ ರೀತಿಯ ಹಿನ್ನಡೆ ಕಂಡ ಬೆಂಗಳೂರು ಪಡೆಯ ವಿರುದ್ಧ ಗುಜರಾತ್ ತಂಡ, ತನ್ನ ತೋಳ್ಬಲ, ಕೈಚಳಕಗಳನ್ನು ಪ್ರದರ್ಶಿಸಿ ಒಮ್ಮಿಂದೊಮ್ಮೆಲೇ ಅಂಕಗಳನ್ನು ಪೇರಿಸುತ್ತ ಮುಂದೆ ಸಾಗಿತು. ಆದರೆ ದ್ವಿತೀಯಾರ್ಧದ 15ನೇ ನಿಮಿಷದಿಂದ ಪಂದ್ಯ ನಿಧಾನವಾಗಿ ಬೆಂಗಳೂರು ಬುಲ್ಸ್ ಕಡೆಗೆ ವಾಲುತ್ತಾ ಸಾಗಿತು.
ಇಲ್ಲಿಂದ ಬೆಂಗಳೂರು ಅಭಿಮಾನಿಗಳಿಗೆ ಥ್ರಿಲ್ ನೀಡುತ್ತಾ ಸಾಗಿದ ಪವನ್ ಶೆಹ್ರಾವತ್, ಮಿಂಚಿನ ರೈಡ್‌ಗಳನ್ನು ನಡೆಸಿ ಬೆಂಗಳೂರು ಪಡೆಗೆ ಉತ್ತಮ ಮುನ್ನಡೆ ತಂದುಕೊಟ್ಟರಲ್ಲದೆ, ಗೆಲುವಿನ ಕಡೆಗೆ ಸಾಗಲು ರಹದಾರಿಯನ್ನು ಮಾಡಿಕೊಟ್ಟರು. ತಾವು ನಡೆಸಿದ ಕೊನೆಯ ಏಳು ರೈಡ್‌ಗಳಿಂದ 20 ಅಂಕಗಳನ್ನು ತರುವ ಮೂಲಕ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟರು. ಈ ಪಂದ್ಯದ ಪ್ರದರ್ಶನದ ಮೂಲಕ 6ನೇ ಆವೃತ್ತಿಯಲ್ಲಿ ತಾವು ಆಡಿದ 23 ಪಂದ್ಯಗಳಿಂದ 271 ರೈಡಿಂಗ್ ಅಂಕ ಪೇರಿಸಿರುವ ಶೆಹ್ರಾವತ್, ಈ ಬಾರಿಯ ಶ್ರೇಷ್ಠ ರೈಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.