Advertisement

ಸೆಮಿಫೈನಲ್‌ಗೇರಿದ ಬೆಂಗಳೂರು ಬುಲ್ಸ್‌; ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿಗೆ ಹೀನಾಯ ಸೋಲು

10:38 PM Dec 13, 2022 | Team Udayavani |

ಮುಂಬೈ: ಮಂಗಳವಾರ ನಡೆದ ಪ್ರೊ ಕಬಡ್ಡಿ 1ನೇ ನಿರ್ಗಮನ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ಅದ್ಭುತ ಜಯ ಸಾಧಿಸಿದೆ. ಅದು ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿಯನ್ನು 56-24 ಅಂಕಗಳಿಂದ ಸೋಲಿಸಿ, ಸೆಮಿಫೈನಲ್‌ಗೇರಿದೆ.

Advertisement

ಡಿ.15ರಂದು ನಡೆಯುವ 1ನೇ ಉಪಾಂತ್ಯದಲ್ಲಿ ಬುಲ್ಸ್‌, ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಎದುರಿಸಲಿದೆ. ಕಳೆದ ಬಾರಿ ಕಪ್‌ ಗೆದ್ದಿದ್ದ ಡೆಲ್ಲಿ ಈ ಬಾರಿ ನಿರ್ಗಮನ ಸುತ್ತಿನಲ್ಲೇ ನಿರ್ಗಮಿಸಿದೆ.

ಬೆಂಗಳೂರು ಇಡೀ ಪಂದ್ಯದಲ್ಲಿ ಪೂರ್ಣ ನಿಯಂತ್ರಣ ಹೊಂದಿತ್ತು. ಪಂದ್ಯದ ಆರಂಭದ ಕೆಲ ನಿಮಿಷಗಳಲ್ಲೇ ಡೆಲ್ಲಿಯನ್ನು ಆಲೌಟ್‌ ಮಾಡಿತು. ಪಂದ್ಯದ 5ನೇ ನಿಮಿಷದಲ್ಲಿ ಬುಲ್ಸ್‌ 13-3ರಿಂದ ಮುನ್ನಡೆ ಸಾಧಿಸಿತ್ತು. ಪಂದ್ಯದ 12ನೇ ನಿಮಿಷದಲ್ಲಿ ಡೆಲ್ಲಿಗೆ ಮತ್ತೂಮ್ಮೆ ಆಘಾತ ಎದುರಾಯಿತು. ಆಗ ಬೆಂಗಳೂರು 24-10ರಿಂದ ಮುನ್ನಡೆ ಸಾಧಿಸಿತ್ತು. ಮೊದಲನೇ ಅವಧಿ ಮುಗಿಯುವಾಗ ಬೆಂಗಳೂರಿನ ಮುನ್ನಡೆ 31-14ರಲ್ಲಿತ್ತು. ಆಗಲೇ ಬುಲ್ಸ್‌ ಗೆಲ್ಲುವುದು ಖಚಿತವಾಗಿತ್ತು.

ದ್ವಿತೀಯ ಅವಧಿಯಲ್ಲಿ ಇದೇ ಆಟವನ್ನು ಮುಂದುವರಿಸಿದ ಬೆಂಗಳೂರು ಡೆಲ್ಲಿಗೆ ಉಸಿರೆತ್ತಲು ಅವಕಾಶ ನೀಡಲಿಲ್ಲ. ಒಟ್ಟಾರೆಯಾಗಿ 56-24ರ ಅಂತರದಿಂದ ಗೆಲುವು ಸಾಧಿಸಿತು. ಬುಲ್ಸ್‌ನ ಈ ಯಶಸ್ಸಿನಲ್ಲಿ ದಾಳಿಗಾರ ಭರತ್‌ ಪಾತ್ರ ಮಹತ್ವದ್ದು. ಅವರು 18 ದಾಳಿಗಳಲ್ಲಿ 15 ಅಂಕ ಸಂಪಾದಿಸಿದರು. ಇನ್ನು ಆರಂಭದಿಂದಲೇ ಅಬ್ಬರಿಸತೊಡಗಿದ ವಿಕಾಶ್‌ ಕಂಡೊಲ 18 ದಾಳಿಗಳಲ್ಲಿ 13 ಅಂಕ ಪಡೆದರು. ಡೆಲ್ಲಿ ಪರ ನಾಯಕ ನವೀನ್‌ ಕುಮಾರ್‌ 8 ಅಂಕ ಪಡೆದರೂ, ಅದೇನು ಮಿಂಚಿನ ಆಟವಾಗಿರಲಿಲ್ಲ. ಉಳಿದ ಆಟಗಾರರೂ ವಿಫ‌ಲರಾದರು.

ತಮಿಳ್‌-ಪುನೇರಿ ನಡುವೆ 2ನೇ ಉಪಾಂತ್ಯ
ಮಂಗಳವಾರ ರಾತ್ರಿ ನಡೆದ ಇನ್ನೊಂದು ನಿರ್ಗಮನ ಪಂದ್ಯ ಅತ್ಯಂತ ರೋಚಕವಾಗಿತ್ತು. ನಿಗದಿತ 40 ನಿಮಿಷಗಳಲ್ಲಿ ತಮಿಳ್‌ ತಲೈವಾಸ್‌-ಯುಪಿ ಯೋಧಾಸ್‌ ತಲಾ 36 ಅಂಕ ಗಳಿಸಿ ಸಮಬಲ ಸಾಧಿಸಿದವು. ಕಡೆಗೆ ತಲಾ 5 ರೈಡ್‌ಗಳ ಮೂಲಕ ಫ‌ಲಿತಾಂಶ ನಿರ್ಧರಿಸಲಾಯಿತು. ಇಲ್ಲಿ ತಮಿಳ್‌ ತಂಡ 6, ಯೋಧಾಸ್‌ 4 ಅಂಕಗಳಿಸಿತು. ಡಿ.15ರಂದು ನಡೆಯುವ 2ನೇ ಸೆಮಿಫೈನಲ್‌ನಲ್ಲಿ ಪುನೇರಿ ಪಲ್ಟಾನ್‌ ತಂಡವನ್ನು ತಮಿಳ್‌ ತಲೈವಾಸ್‌ ಎದುರಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next