ಬೆಂಗಳೂರು: ಜಮೀನಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಅರ್ಜಿದಾರರ ಪರ ಆದೇಶ ನೀಡಲು 20 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಶೀಲ್ದಾರ್ ಹಾಗೂ ಅವರ ಸಹಾಯಕನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ 23ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಶೀಲ್ದಾರ್ ಹಾಗೂ ಕಾರ್ಯನಿರ್ವಾಹಕ ದಂಡಾಧಿಕಾರಿ ಬಿ.ಎಸ್.ವೆಂಕಟಾಚಲಪತಿ ಹಾಗೂ ಇವರ ಸಹಾಯಕ ಮಧುಸೂದನ್ ಶಿಕ್ಷೆಗೆ ಒಳಗಾದವರು.
ಏನಿದು ಪ್ರಕರಣ?: ಹುಳಿಮಾವು ನಿವಾಸಿ ಎಚ್ .ಪಿ.ಮಂಜುನಾಥ್ ಹಾಗೂ ಅವರ ಸಹೋದರರ ಮಕ್ಕಳಿಗೂ ಗೊಟ್ಟಿಗೆರೆ ಗ್ರಾಮದಲ್ಲಿ 1 ಎಕರೆ 37 ಗುಂಟೆ ಜಮೀನಿನ ವಿಚಾರದ ಸಂಬಂಧ ವಿಶೇಷ ತಹಶೀಲ್ದಾರ್ ಕಚೇರಿಯಲ್ಲಿ ಕೇಸು ನಡೆಯುತ್ತಿತ್ತು. ಮಂಜುನಾಥ್ ತಂದೆ ನಿಧನರಾದ ಬಳಿಕ 2016ರಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಹಶೀಲ್ದಾರ್‌ಗೆ ಕೇಸನ್ನು ಬೇಗ ಮುಗಿಸಿ ಕೊಡುವಂತೆ ಮನವಿ ಪತ್ರ ಸಲ್ಲಿಸಿದ್ದರು.
ಬಿ.ಎಸ್.ವೆಂಕಟಾಚಲಪತಿ ಭೇಟಿ ಮಾಡಿ ಕೆಲಸದ ಬಗ್ಗೆ ವಿಚಾರಿಸಿದಾಗ ತನ್ನ ಸಹಾಯಕ ಮಧುಸೂದನ್ ಅವರನ್ನು ಕರೆಯಿಸಿ ಇವರನ್ನು ಭೇಟಿ ಮಾಡುವಂತೆ ಮಂಜುನಾಥ್‌ಗೆ ಸೂಚಿಸಿದ್ದರು. ಅದರಂತೆ ಮಧುಸೂದನ್ ಭೇಟಿ ಮಾಡಿದಾಗ ಮಂಜುನಾಥ್ ಪರ ಆದೇಶ ಮಾಡಲು 20 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
ಬಿ.ಎಸ್.ವೆಂಕಟಾಚಲಪತಿಯನ್ನು ಮಂಜುನಾಥ್ ಪ್ರಶ್ನಿಸಿದಾಗ ಅವರು ಸಹ 15 ಲಕ್ಷಕ್ಕೆ ಬೇಡಿಕೆಯಿಟ್ಟು ಮುಂಗಡವಾಗಿ 5 ಲಕ್ಷ ರೂ. ತಂದು ಕೊಟ್ಟರೆ ನಿಮ್ಮ ಪರವಾಗಿ ಆದೇಶಮಾಡುತ್ತೇನೆ. ಉಳಿದ ಹಣವನ್ನು ನೀಡಿದ ಬಳಿಕ ಆರ್ಡರ್ ಕಾಪಿ ಕೊಡುವುದಾಗಿ ಲಂಚದ ಹಣಕ್ಕೆ ಒತ್ತಾಯಿಸಿದ್ದರು. ಮಂಜುನಾಥ್ ಈ ಹಿಂದೆಯಿದ್ದ ಎಸಿಬಿಗೆ ದೂರು ನೀಡಿದ್ದರು. 2017ರಲ್ಲಿ ಎಸಿಬಿ ದಾಳಿ ನಡೆಸಿದಾಗ ವೆಂಕಟಾಚಲಪತಿ ಪರ ಲಂಚ ಸ್ವೀಕರಿಸುತ್ತಿದ್ದ ಮಧುಸೂದನ್ ಸಿಕ್ಕಿ ಬಿದ್ದಿದ್ದರು.