ಭಾರತದ ಪಾಕಪದ್ಧತಿ ತನ್ನ ರುಚಿಯ ಶ್ರೀಮಂತಿಕೆಯಿಂದ ಜನಪ್ರಿಯವಾಗಿದೆ. ಇದು ವಿವಿಧ ರೀತಿಯ ಮಸಾಲೆಗಳನ್ನು ಒಳಗೊಂಡಿರುತ್ತದೆ. ಆದರೆ ಮಲಾಲೆಗಳನ್ನು ಬಳಸುವ ಸಾಂಪ್ರದಾಯಿ ವಿಧಾನ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ರುಚಿ, ರುಚಿಯಾದ ವಿಭಿನ್ನ ಮಸಾಲಾ ತಯಾರಿಸಲು ಸಮತೂಕದ ಪ್ರಮಾಣದಲ್ಲಿ ಮಸಾಲೆಯನ್ನು ಹಾಕಿ ರುಬ್ಬುವುದು ಮತ್ತು ಮಿಶ್ರಣ ಮಾಡುವುದು ಮುಖ್ಯವಾಗಿರುತ್ತದೆ. ನಂತರ ಮುಂದಿನ ಹಂತವಾಗಿ ಮಸಾಲೆಯನ್ನು ಅಡುಗೆಯ ವಿವಿಧ ಹಂತದಲ್ಲಿ ಸೇರಿಸಲಾಗುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಇಂತಹ ರೆಡಿಮೇಡ್ ಸಿದ್ಧ ಮಸಾಲಾ ಹೆಚ್ಚು ಟ್ರೆಂಡ್ ನಲ್ಲಿದೆ. ಜನರು ಕೂಡಾ ತಾವೇ ಖುದ್ದಾಗಿ ಮಿಶ್ರಣ ಮಾಡಿ, ರುಬ್ಬುವ ಕೆಲಸ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿ ಮಸಾಲೆ ಮಿಶ್ರಿತ ಪ್ಯಾಕೇಟ್ ಅನ್ನು ಖರೀದಿಸುತ್ತಾರೆ.
ಈ ಪಟ್ಟಿಯಲ್ಲಿ (ತಕ್ಷಣವೇ ಸಿದ್ದವಾಗುವ-ಇನ್ ಸ್ಟ್ಯಾಂಟ್) ಎಂಡಿಎಚ್, ಎಂಟಿಆರ್ ಮತ್ತು ಎವರೆಸ್ಟ್ ನಂತಹ ಸಂಸ್ಥೆಗಳು ಭಾರೀ ಪ್ರಮಾಣದಲ್ಲಿ ಬೇಡಿಕೆಯನ್ನು ಹುಟ್ಟುಹಾಕಿಸುವ ಮೂಲಕ ಮನೆಮಾತಾಗಿವೆ. ಆದರೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸ್ಥಾಪನೆಯಾಗಿದ್ದ ಕ್ವಾಲಿಟಿ ಫುಡ್ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಒಂದು ಕುಟುಂಬ ನಡೆಸುತ್ತಿದ್ದ ಮಸಾಲಾ ಪೌಡರ್ ಇಂದು 40 ಕೋಟಿ ರೂಪಾಯಿ ವಹಿವಾಟು ನಡೆಸುವ ಕ್ವಾಲಿಟಿ ಫುಡ್ ಆಗಿ ಬೆಳೆದು ನಿಂತಿರುವ ಯಶೋಗಾಥೆ ಇದಾಗಿದೆ.
1960ರಲ್ಲಿ ಆರಂಭವಾಗಿದ್ದು ಪುಟ್ಟ ಅಂಗಡಿ:
1960ರಲ್ಲಿ ರಾಜಸ್ಥಾನದ ಸೋಜಾಟ್ ಪ್ರದೇಶದಿಂದ ಬದುಕು ಕಟ್ಟಿಕೊಳ್ಳಲು ಭವಾರ್ ಲಾಲ್ಜಿ ಪಗಾರಿಯಾ ಬೆಂಗಳೂರು ದಕ್ಷಿಣಕ್ಕೆ ಬಂದು ಬೀಡು ಬಿಟ್ಟಿದ್ದರು. ಪಗಾರಿಯಾ ಅವರು ಪುಟ್ಟ ಅಂಗಡಿಯನ್ನು ತೆರೆದು ಮಸಾಲಾ ಪೌಡರ್ ಗಳ ಪ್ಯಾಕೇಟ್ ಮಾರಾಟ ಮಾಡುತ್ತಿದ್ದರು. ಹೀಗೆ ಅವರು ಸುಮಾರು ಮೂರು ದಶಕಗಳ ಕಾಲ ವ್ಯಾಪಾರ ನಡೆಸಿದ್ದರು. ತಂದೆಯ ವ್ಯಾಪಾರವನ್ನು ಮಗ ನರೇಶ್ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಒಂದು ದಿನ ತಂದೆ ಬಳಿ ನರೇಶ್, ನಾವು ಮಸಾಲಾ ಪೌಡರ್ ಮಾರಾಟ ಮಾಡುವುದಕ್ಕಿಂತ ಮಸಾಲೆಗಳನ್ನು ತಯಾರಿಸಬಾರದು ಎಂದು ಕೇಳಿದ್ದ.
ಇದನ್ನೂ ಓದಿ:ಎಂಐ ಇಂಡಿಯಾದಿಂದ ವಿಶ್ವದ ಅತ್ಯಂತ ದೊಡ್ಡ ಎಣ್ಣೆದೀಪ: ಗಿನ್ನೆಸ್ ವಿಶ್ವ ದಾಖಲೆ
ನರೇಶ್ ವಿದ್ಯಾಭ್ಯಾಸ ಪಡೆಯುತ್ತಿದ್ದಾಗ ತಂದೆ ಪುಟ್ಟ ಅಂಗಡಿಯಲ್ಲಿ ತಂದೆ ನಾಲ್ಕು ವಿಧದ ಮಸಾಲೆಗಳನ್ನು ಮಾರಾಟ ಮಾಡುತ್ತಿದ್ದರು. ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ನರೇಶ್ ಮಸಾಲಾ ಉತ್ಪನ್ನ ತಯಾರಿಕೆ ವ್ಯವಹಾರಕ್ಕೆ ಸಿದ್ಧತೆ ನಡೆಸಿದ್ದರು.
1998ರಲ್ಲಿ ಕ್ವಾಲಿಟಿ ಫುಡ್ ಆರಂಭ:
1998ರಲ್ಲಿ ನರೇಶ್ ಅವರು ಇನ್ನೂ ಹೆಚ್ಚಿನ ಮಸಾಲಾ ಪೌಡರ್ ಗಳನ್ನು ತಯಾರಿಸಬೇಕೆಂಬ ಯೋಜನೆಯೊಂದಿಗೆ ಪುಟ್ಟ ಅಂಗಡಿ ಕೋಣೆ ತೊರೆದು ಮಾಗಡಿ ರಸ್ತೆಯಲ್ಲಿನ ದೊಡ್ಡ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದರು.
ನರೇಶ್ ತಮ್ಮ ವ್ಯವಹಾರವನ್ನು “ಪಗಾರಿಯಾ ಫುಡ್ಸ್ ಮತ್ತು ಕ್ವಾಲಿಟಿ ಫುಡ್ಸ್” ಬ್ರ್ಯಾಂಡ್ ಹೆಸರಿನಲ್ಲಿ ಆರಂಭಿಸಿದ್ದರು. ನೀವು ಇದನ್ನು ಕ್ವಾಲಿಟಿ ಲಿಮಿಟೆಡ್ ಎಂದು ಗೊಂದಲಕ್ಕೆ ಒಳಗಾಗಬೇಡಿ. ಕ್ವಾಲಿಟಿ ಲಿಮಿಟೆಡ್ ನವದೆಹಲಿಯದ್ದು, ಅದು ಚಾಕಲೋಟ್ ಸೇರಿದಂತೆ ಹಾಲು ಉತ್ಪನ್ನದ ವಸ್ತುಗಳ ಮಾರಾಟದ ಕಂಪನಿಯಾಗಿದೆ. ಬೆಂಗಳೂರಿನ ಕ್ವಾಲಿಟಿ ಫುಡ್ಸ್ ವಿವಿಧ ಮಸಾಲೆಗಳ ಕಂಪನಿ.
ಕ್ವಾಲಿಟಿ ಫುಡ್ಸ್ ಬೆಂಗಳೂರಿನಲ್ಲಿ ಮೊದಲು ಎಂಟು ಹೊಸ ಉತ್ಪನ್ನಗಳನ್ನು ತಮ್ಮ ಪಟ್ಟಿಗೆ ಸೇರಿಸಿಕೊಂಡು ಮಾರಾಟ ಮಾಡಲು ಆರಂಭಿಸಿತ್ತು. ನೆರೆಯ ತುಮಕೂರು, ಅನಂತ್ ಪುರ್ ದಲ್ಲಿ ಕೂಡಾ ಮಾರುಕಟ್ಟೆ ಬೆಳೆಯತೊಡಗಿತ್ತು. ಒಂದು ವರ್ಷದ ನಂತರ ನರೇಶ್ ಮತ್ತೊಂದು ಬೃಹತ್ ಉತ್ಪಾದನಾ ಘಟಕವನ್ನು ಪ್ರಾರಂಭಿಸಿದ್ದರು.
ಕ್ವಾಲಿಟಿ ರಾಜಾಜಿನಗರಕ್ಕೆ ಸ್ಥಳಾಂತರಗೊಂಡಾಗ ಜನರಿಗೆ ಬೆಳಗಿನ ಉಪಹಾರಕ್ಕಾಗಿ ಧಾನ್ಯಗಳ ಉತ್ಪನ್ನಗಳ ಅವಶ್ಯಕತೆ ಇರುವುದನ್ನು ನರೇಶ್ ಗಮನಿಸಿದ್ದರು. ಆ ಸಂದರ್ಭದಲ್ಲಿ ಅದು ಆಹಾರ ಧಾನ್ಯಗಳ ಪ್ಯಾಕೇಟ್ ನಲ್ಲಿ ಲಭ್ಯವಾಗುವುದು ವಿರಳವಾಗಿತ್ತು. ಒಂದು ವೇಳೆ ಧಾನ್ಯಗಳನ್ನು ಚೆನ್ನಾಗಿ ಪ್ಯಾಕ್ ಮಾಡಿ, ಕಡಿಮೆ ಬೆಲೆಗೆ ಮಾರಾಟ ಮಾಡಿದರೆ ಗ್ರಾಹಕರನ್ನು ಸೆಳೆಯಬಹುದು ಎಂಬುದನ್ನು ನರೇಶ್ ಕಂಡುಕೊಂಡರು.
ನಂತರ ದಕ್ಷಿಣ ಭಾರತದಲ್ಲಿ ಕ್ವಾಲಿಟಿ ಮಾರುಕಟ್ಟೆ ವಿಸ್ತರಣೆಯಾಗುತ್ತ ಹೋಯಿತು, ಸಂಬಂಧಿ ಧೀರಜ್ ಜೈನ್ ಕೂಡಾ ಮಾರಾಟ ಮತ್ತು ಮಾರುಕಟ್ಟೆಯ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ. 2006ರಲ್ಲಿ ನರೇಶ್ ಅವರು ತಮ್ಮ ಉದ್ಯಮವನ್ನು ಜನರಲ್ ಟ್ರೇಡ್, ಮಾಡರ್ನ್ ಟ್ರೇಡ್, ಇ ಕಾಮರ್ಸ್ ಮತ್ತು ರಫ್ತು ಹೆಸರಿನಲ್ಲಿ ಮಾರಾಟ ಮಾಡಲು ಹೆಚ್ಚಿನ ಒತ್ತು ನೀಡಿದ್ದರು. ಮಾಡರ್ನ್ ಟ್ರೇಡ್ ನಲ್ಲಿ ಡಿಮಾರ್ಟ್, ಬಿಗ್ ಬಜಾರ್, ಮೆಟ್ರೋ ಕ್ಯಾಶ್ ಆ್ಯಂಡ್ ಕ್ಯಾರಿ, ರಿಲಯನ್ಸ್, ವಾಲ್ ಮಾರ್ಟ್ ಕೂಡಾ ಸೇರಿದೆ. ಕ್ವಾಲಿಟಿ ಮಸಾಲಾ ಮತ್ತು ಧಾನ್ಯಗಳು ಅಮೆಜಾನ್ ಇಂಡಿಯಾ, ಫ್ಲಿಪ್ ಕಾರ್ಟ್, ಬಿಗ್ ಬಾಸ್ಕೆಟ್ ನಲ್ಲಿಯೂ ಲಭ್ಯವಿದೆ. ಸುಮಾರು 20 ದೇಶಗಳಿಗೆ ಕ್ವಾಲಿಟಿ ಮಸಾಲಾ ರಫ್ತಾಗುತ್ತಿದೆ. ಅಷ್ಟೇ ಅಲ್ಲ ಉತ್ತಮ ಉತ್ಪಾದನೆ (ಫುಡ್ ಕೆಟಗರಿ)ಯಲ್ಲಿ ಪ್ರಶಸ್ತಿಯನ್ನೂ ಕೂಡಾ ಪಡೆದಿದೆ.