Advertisement
ಈಗಾಗಲೇ 1.55 ಲಕ್ಷ ಆಟೋಗಳಿದ್ದು, ಇನ್ನೂ ಒಂದು ಲಕ್ಷ ಆಟೋಗಳಿಗೆ ಸಾರಿಗೆ ಇಲಾಖೆ ಪರ್ಮಿಟ್ ನೀಡಲು ನಿರ್ಧರಿಸಿದೆ. ಇದರೊಂದಿಗೆ ನಗರದಲ್ಲಿ ಆಟೋಗಳ ಸಂಖ್ಯೆ ಈಗಿರುವುದಕ್ಕಿಂತ ಶೇ.65ರಷ್ಟು ಹೆಚ್ಚಳ ಆಗಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂದಿನ 5 ವರ್ಷಗಳಲ್ಲಿ ಈ ಒಂದು ಲಕ್ಷ ಹೊಸ ಆಟೋರಿಕ್ಷಾ ಪರ್ಮಿಟ್ ನೀಡಲಾಗುವುದು. ಇದರಿಂದ ಪ್ರಸ್ತುತ ಇರುವ 1,55,000 ಆಟೋರಿಕ್ಷಾ ಪರ್ಮಿಟ್ ಮಿತಿ 2,55,000ಕ್ಕೆ ಹೆಚ್ಚಳ ಆಗಲಿದೆ. ಈ ಸಂಬಂಧ ಶನಿವಾರ ಅಧಿಸೂಚನೆ ಹೊರಡಿಸಲಾಗಿದೆ.
Related Articles
Advertisement
ಕಂಪನಿಗಳ ಲಾಬಿ; ಸಂಘದ ಆರೋಪ: “ನಾವು ಕೇಳಿದ್ದು ದರ ಪರಿಷ್ಕರಣೆ ಮಾಡಿ ಅಂತ. ಆದರೆ, ಸರ್ಕಾರ ಆಟೋಗಳ ಸಂಖ್ಯೆಯನ್ನೇ ಹೆಚ್ಚಿಸಿದೆ. ಇರುವ ಆಟೋ ಚಾಲಕರಿಗೇ ನಿರೀಕ್ಷಿತ ಆದಾಯ ಬರುತ್ತಿಲ್ಲ. ಈ ಮಧ್ಯೆ ಮತ್ತೆ ಒಂದು ಲಕ್ಷ ಆಟೋಗಳನ್ನು ರಸ್ತೆಗಿಳಿಸುತ್ತಿರುವುದು ಸರಿಯಾದ ಕ್ರಮವಲ್ಲ. ಆಟೋ ತಯಾರಿಕಾ ಕಂಪನಿಗಳ ಲಾಬಿ ಇದರ ಹಿಂದೆ ಇದ್ದಂತಿದೆ. ಇರುವ ಚಾಲಕರಿಗೆ ಸಾರಿಗೆ ಇಲಾಖೆಯಿಂದ ತರಬೇತಿ ನೀಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಮುಂದಾಗಬೇಕಿತ್ತು. ಇಲಾಖೆಯ ಈ ಆದೇಶಕ್ಕೆ ನಮ್ಮ ಆಕ್ಷೇಪ ಇದೆ. ಇದನ್ನು ವಾಪಸ್ ಪಡೆದು, ದರ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಲಾಗುವುದು’ ಎಂದು ಆಟೋರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ತಿಳಿಸಿದರು.
ಒಂದು ಲಕ್ಷ ಹೊಸ ಆಟೋರಿಕ್ಷಾ ಪರ್ಮಿಟ್ ನೀಡುವ ಮೂಲಕ ಬೆಂಗಳೂರಲ್ಲಿ ವಾಹನ ದಟ್ಟಣೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಈಗಾಗಲೇ ಬೆಂಗಳೂರು ನಗರ ವಾಹನ ದಟ್ಟಣೆಯಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಅದರಲ್ಲೂ ಬೇಕಾಬಿಟ್ಟಿ ಓಡಾಟ ನಡೆಸುವ ಆಟೋರಿಕ್ಷಾಗಳ ಪರ್ಮಿಟ್ ಸಂಖ್ಯೆಯನ್ನು ಹೆಚ್ಚಿಸಿದರೆ ನಗರದ ಟ್ರಾಫಿಕ್ ಬವಣೆ ಮತ್ತಷ್ಟು ಬಿಗಡಾಯಿಸಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಷರತ್ತುಗಳಿವು:
ಎಲ್‌ಪಿಜಿ/ಸಿಎನ್‌ಜಿ/ಎಲೆಕ್ಟ್ರಿಕ್ ಕಿಟ್ ಹಾಗೂ ಡಿಜಿಟಲ್ ದರ ಮೀಟರ್‌ನೊಂದಿಗೆ ಬಿಎಸ್-6 ನಾಲ್ಕು ಸ್ಟ್ರೋಕ್ ಎಂಜಿನ್‌ನ ಹಸಿರು ಆಟೋರಿಕ್ಷಾ ಗಳಿಗೆ ಪರ್ಮಿಟ್ ನೀಡಲಾಗುತ್ತದೆ.
ಈಗಾಗಲೇ ಆಟೋರಿಕ್ಷಾ ಪರ್ಮಿಟ್ ಹೊಂದಿದ ವ್ಯಕ್ತಿಗೆ ಹೊಸ ಪರ್ಮಿಟ್ ಇಲ್ಲ. ಪರ್ಮಿಟ್ ಕೋರಿ ಅರ್ಜಿ ಸಲ್ಲಿಸುವವರು ಆಧಾರ್ ಅಥವಾ ಮತದಾರರ ಗುರುತಿನ ಚೀಟಿ ಅಥವಾ ಪಡಿತರಚೀಟಿ ಅಥವಾ ಪಾನ್‌ಕಾರ್ಡ್ ಸಲ್ಲಿಸಬೇಕು
ಪರ್ಮಿಟ್ ಕೋರಿ ಅರ್ಜಿ ಹಾಕುವ ವ್ಯಕ್ತಿ ಎಲ್‌ಪಿಜಿ/ಸಿಎನ್‌ಜಿ/ ವಿದ್ಯುತ್‌ಚಾಲಿತ ಆಟೋರಿಕ್ಷಾ ಓಡಿಸುವ ಚಾಲನಾ ಅನುಜ್ಞಾಪತ್ರ ಹೊಂದಿರಬೇಕು.